ಸ್ವ ಉದ್ಯೋಗಕ್ಕೆ ಮೀನು ಕೃಷಿ ಉಪಯುಕ್ತ: ಏಕಬೋಟೆ

| Published : Mar 20 2024, 01:18 AM IST

ಸಾರಾಂಶ

ಜಾಗತಿಕ ಆಹಾರ ಭದ್ರತೆಯಲ್ಲಿ ಮೀನುಗಾರಿಕೆ ಅತೀ ಮುಖ್ಯಪಾತ್ರವಹಿಸುತ್ತಿದೆ. ಭಾರತವು ವರ್ಷಕ್ಕೆ 16.12 ಮಿಲಿಯನ್‌ ಮೆಟ್ರಿಕ್‌ ಟನ್‌ಗಳಷ್ಟು ಮೀನು ಉತ್ಪಾದನೆ ಮಾಡುತ್ತದೆ. ಅದರಲ್ಲಿ 13.5 ಮಿಲಿಯನ್‌ ಮೆಟ್ರಿಕ್‌ ಟನ್‌ಗಳಷ್ಟು ಮೀನಿನ ಉತ್ಪನ್ನಗಳನ್ನು ವಿದೇಶಗಳಿಗೆ ವಿನಿಮಯ ಮಾಡುತ್ತದೆ. ಭಾರತದಲ್ಲಿ ಹಾಗೂ ಕರ್ನಾಟಕದಲ್ಲಿ ಜಲಸಂಪನ್ಮೂಲಕ್ಕೆ ಯಾವುದೇ ಕೊರತೆ ಇಲ್ಲ.

ಹಿರಿಯೂರು: ರಾಜ್ಯದ ಯುವಕರು ಸ್ವ-ಉದ್ಯೋಗ ಕೈಗೊಳ್ಳಲು ಮೀನು ಕೃಷಿಯು ಅತ್ಯಂತ ಸೂಕ್ತವಾಗಿದೆ ಎಂದು ತಾಲೂಕಿನ ಬಬ್ಬೂರು ಫಾರಂನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹಸಂಶೋಧನಾ ನಿರ್ದೇಶಕ ಡಾ.ಸುರೇಶ ಏಕಬೋಟೆ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಹೈದ್ರಾಬಾದ್‌ ಅವರ ಪ್ರಾಯೋಜಕತ್ವದಲ್ಲಿ ತಾಲೂಕಿನ ಬಬ್ಬೂರು ಫಾರಂನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಶತಮಾನೋತ್ಸವ ಭವನದಲ್ಲಿ ಮೂರು ದಿನಗಳ ಮೀನುಕೃಷಿಯಲ್ಲಿ ಉದ್ಯಮಶೀಲತೆ ಅಭಿವೃದ್ಧಿಗಾಗಿ ಗ್ರಾಮೀಣ ಯುವಕರ ಭಾಗವಹಿಸುವಿಕೆ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಾಗತಿಕ ಆಹಾರ ಭದ್ರತೆಯಲ್ಲಿ ಮೀನುಗಾರಿಕೆ ಅತೀ ಮುಖ್ಯಪಾತ್ರವಹಿಸುತ್ತಿದೆ. ಭಾರತವು ವರ್ಷಕ್ಕೆ 16.12 ಮಿಲಿಯನ್‌ ಮೆಟ್ರಿಕ್‌ ಟನ್‌ಗಳಷ್ಟು ಮೀನು ಉತ್ಪಾದನೆ ಮಾಡುತ್ತದೆ. ಅದರಲ್ಲಿ 13.5 ಮಿಲಿಯನ್‌ ಮೆಟ್ರಿಕ್‌ ಟನ್‌ಗಳಷ್ಟು ಮೀನಿನ ಉತ್ಪನ್ನಗಳನ್ನು ವಿದೇಶಗಳಿಗೆ ವಿನಿಮಯ ಮಾಡುತ್ತದೆ. ಭಾರತದಲ್ಲಿ ಹಾಗೂ ಕರ್ನಾಟಕದಲ್ಲಿ ಜಲಸಂಪನ್ಮೂಲಕ್ಕೆ ಯಾವುದೇ ಕೊರತೆ ಇಲ್ಲ.

8200 ಕಿಮೀ ಸಾಗರ ತೀರಗಳ ಜೊತೆಗೆ ಜಲಾಶಯಗಳು, ಕೆರೆಕಟ್ಟೆಗಳು, ನದಿಗಳಂತಹ ಬಹಳಷ್ಟು ಜಲಸಂಪನ್ಮೂಲಗಳಿದ್ದು, ಮೀನು ಕೃಷಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದು, ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಭಾರತ ಸರ್ಕಾರ ಮೀನು ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಸಲುವಾಗಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಅಡಿಯಲ್ಲಿ 20 ಸಾವಿರ ಕೋಟಿ ರು. ಅನುದಾನ ಬಿಡುಗಡೆ ಮಾಡಿದ್ದು, ದೇಶದ ಹಾಗೂ ರಾಜ್ಯದ ಯುವಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸಹಾಯಕ ಪ್ರಾಧ್ಯಾಪಕರಾದ ಡಾ.ಶೃತಿಶ್ರೀ ಮಾತನಾಡಿ, ರಸಗೊಬ್ಬರದ ಬೆಲೆ ಹೆಚ್ಚುತ್ತಿದ್ದು, ಕೃಷಿ ಮತ್ತು ತೋಟಗಾರಿಕೆ ಬೆಳೆಗಳವರಿಗೆ ಕೂಲಿಕಾರ್ಮಿಕರ ಸಮಸ್ಯೆಯೂ ಕಾಡುತ್ತಿದೆ. ಮಧ್ಯವರ್ತಿಗಳ ಹಾವಳಿಯಿಂದಾಗಿ ರೈತರ ಆದಾಯ ಕಡಿಮೆಯಾಗುತ್ತಿದ್ದು, ರೈತರು ಹಾಗೂ ಯುವಕರು ಕೃಷಿಯ ಜೊತೆಗೆ ಮೀನು ಕೃಷಿಯನ್ನೂ ಉಪಕಸುಬಾಗಿ ಕೈಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಶಿವಮೊಗ್ಗದ ಇರುವಕ್ಕಿಯ ಸಹಾಯಕ ಪ್ರಾಧ್ಯಾಪಕ ಡಾ.ಪ್ರಕಾಶ ಪವಾಡೆ, ಎಲ್ಐಸಿ ಅಭಿವೃದ್ಧಿ ಅಧಿಕಾರಿ ನವೀನ್‌ ಕುಮಾರ್‌ ಎಚ್.‌ಎಸ್‌, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಕ್ಷೇತ್ರ ಅಧೀಕ್ಷಕರಾದ ಡಾ.ಶಿಲ್ಪಾ.ಪಿ.ಚೌಟಿ, ಸಹಾಯಕ ಪ್ರಾಧ್ಯಾಪಕರಾದ ಡಾ.ಶಿವಲೀಲ ಎಸ್.ಕುಕನೂರ ಹಾಗೂ ಕೇಂದ್ರದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.