ಸಾರಾಂಶ
ಪಿಲಿಕುಳದಲ್ಲಿ ಭಾನುವಾರ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ವತಿಯಿಂದ ಮೀನು ಹಾಗೂ ಮೌಲ್ಯವರ್ಧಿತ ಮೀನು ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಏರ್ಪಡಿಸಲಾಗಿತ್ತು. ಸ್ಥಳದಲ್ಲೇ ಮೀನುಗಳ ವಿವಿಧ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಮಂಗಳೂರುಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಮತ್ತು ಮೀನುಗಾರಿಕೆ ಇಲಾಖೆ ವತಿಯಿಂದ ಪಿಲಿಕುಳ ನಿಸರ್ಗಧಾಮದ ವಿಶಾಲವಾದ ಕೆರೆಯಲ್ಲಿ ಭಾನುವಾರ ವಾರ್ಷಿಕ ಮತ್ಸ್ಯೋತ್ಸವ- ಮೀನು ಹಿಡಿಯುವ ಸಡಗರ. ಅನುಭವಿ ಮೀನುಗಾರರ ಮೂಲಕ ಭಾರೀ ಪ್ರಮಾಣದ ಮೀನುಗಳನ್ನು ಹಿಡಿದು ಸ್ಥಳದಲ್ಲೇ ಮಾರಾಟ ವ್ಯವಸ್ಥೆ ಕಲ್ಪಿಸಲಾಗಿತ್ತು.
ರೋಹು, ಕಾಟ್ಲಾ, ತಿಲೇಪಿಯಾ ಮುಂತಾದ ಬೃಹತ್ ಗಾತ್ರದ ಮೀನುಗಳನ್ನು ಹಿಡಿಯಲಾಯಿತು. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ವತಿಯಿಂದ ಮೀನು ಹಾಗೂ ಮೌಲ್ಯವರ್ಧಿತ ಮೀನು ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಏರ್ಪಡಿಸಲಾಗಿತ್ತು. ಸ್ಥಳದಲ್ಲೇ ಮೀನುಗಳ ವಿವಿಧ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡಲಾಯಿತು. ಮೀನು ಪ್ರಿಯರಿಗೆ ಇದು ಹಬ್ಬದ ವಾತಾವರಣ ಸೃಷ್ಟಿಸಿತ್ತು.ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಉತ್ಸವ ಉದ್ಘಾಟಿಸಿದರು. ಇದೇ ಸಂದರ್ಭ ಮೀನುಗಾರಿಕಾ ಇಲಾಖೆ ಮತ್ತು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದಿಂದ 20 ಸಾವಿರಕ್ಕೂ ಅಧಿಕ ಮೀನು ಮರಿಗಳನ್ನು ಕೆರೆಗೆ ಬಿಡಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 1,200 ಕೆಜಿ ಮೀನುಗಳನ್ನು ಹಿಡಿದು ಮಾರಾಟ ಮಾಡಲಾಯಿತು.ಉತ್ತಮ ಪ್ರತಿಕ್ರಿಯೆ:
ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದ್ದು, ಸಾರ್ವಜನಿಕ ಪ್ರತಿಕ್ರಿಯೆ ಉತ್ತಮವಾಗಿತ್ತು. ಸುಮಾರು 500ಕ್ಕೂ ಅಧಿಕ ಮಂದಿ ಮತ್ಸ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಪ್ರಭಾರ ಆಯುಕ್ತ ಡಾ. ಅರುಣ್ ಕುಮಾರ್ ಶೆಟ್ಟಿ ತಿಳಿಸಿದರು.ಹಿಂದಿನ ವರ್ಷಗಳಲ್ಲಿ ಕೆರೆಯಲ್ಲಿ ಹಿಡಿದ ಮೀನುಗಳಲ್ಲಿ ಕೆಲವು ಮಾರಾಟವಾಗದೆ ಉಳಿಯುತ್ತಿತ್ತು. ಈ ಬಾರಿ ಜನರು ಮೀನು ಖರೀದಿಸಲು ಸರತಿ ಸಾಲಿನಲ್ಲಿ ನಿಂತಿದ್ದರು. ಕೆಲವು ಮೀನುಗಳು 6ರಿಂದ 7 ಕೆಜಿ ತೂಕವಿದ್ದವು. ರೋಹು ಮತ್ತು ಕ್ಯಾಟ್ಲಾ ಕೆಜಿಗೆ 160 ರು.ಗೆ ಮಾರಾಟವಾದರೆ, ತಿಲೇಪಿಯಾ ಕೆಜಿಗೆ 100 ರು.ಗೆ ಮಾರಾಟವಾಯಿತು.