ಸಾರಾಂಶ
ಮುಂದೊಂದು ದಿನ ಗಂಗಾಮತ ಮತ ಸಮುದಾಯವು ಪರಿಶಿಷ್ಟ ಪಂಗಡಕ್ಕೆ ಖಂಡಿತ ಸೇರ್ಪಡೆಗೊಳ್ಳಲಿದೆ.
ಕಂಪ್ಲಿ: ಗಂಗಾ ಮತಸ್ಥರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಶಿಫಾರಸು ಮಾಡಲಾಗುವುದು ಎಂದು ಮೀನುಗಾರಿಕೆ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.
ಪಟ್ಟಣದ ಭಾರತ್ ಚಿತ್ರಮಂದಿರದ ಬಳಿ ಗಂಗಾಮತ ಸಮಾಜದ ಮುಖಂಡರ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಗಂಗಾಮತಸ್ಥರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವ ಕುರಿತು ಈ ಹಿಂದಿನ ಸರ್ಕಾರಗಳು ಕೇಂದ್ರಕ್ಕೆ ಶಿಫಾರಸು ಮಾಡಿದ್ದು ಈ ವಿಚಾರವೀಗ ಕೇಂದ್ರ ಸರ್ಕಾರದ ಹಂತದಲ್ಲಿದೆ. ಮುಂದೊಂದು ದಿನ ಗಂಗಾಮತ ಮತ ಸಮುದಾಯವು ಪರಿಶಿಷ್ಟ ಪಂಗಡಕ್ಕೆ ಖಂಡಿತ ಸೇರ್ಪಡೆಗೊಳ್ಳಲಿದೆ. ಅದಾಗ್ಯೂ ಈ ವಿಚಾರವನ್ನು ಮತ್ತೊಮ್ಮೆ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ಕಂಪ್ಲಿಯ ಮೀನುಗಾರರಿಗೆ ಮೀನು ಮಾರುಕಟ್ಟೆ, ಕೋಲ್ಡ್ ಸ್ಟೋರೇಜ್, ವಸತಿ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ:
ಗಂಗಾಮತಸ್ಥರ ಸಮಾಜದ ತಾಲೂಕು ಅಧ್ಯಕ್ಷ ಎಲಿಗಾರ ನಾಗರಾಜ ಮಾತನಾಡಿ, ಮೀನುಗಾರಿಕೆ ಸೌಲಭ್ಯಗಳನ್ನು ಅನ್ಯರು ಕಬಳಿಸುತ್ತಿದ್ದು ನಿಜವಾದ ಫಲಾನುಭವಿಗಳು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇದನ್ನು ತಪ್ಪಿಸಿ ಬೆಸ್ತ, ಗಂಗಾಮತಸ್ಥರು, ಮೀನುಗಾರರಿಗೆ ಸೌಲಭ್ಯ ದೊರಕಿಸಿಕೊಡಬೇಕು. ಗಂಗಾಮತ ಸಮಾಜದ ನಿವೇಶನವಿದ್ದು ಸಮುದಾಯ ಭವನ ನಿರ್ಮಾಣಕ್ಕೆ ₹1 ಕೋಟಿ ನೀಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಶಾಸಕ ಜೆ.ಎನ್. ಗಣೇಶ್, ಮುಖಂಡರಾದ ಬಿ.ನಾರಾಯಣಪ್ಪ, ಬಿ.ಸಿದ್ದಪ್ಪ, ಕರೇಕಲ್ ಮನೋಹರ, ಅಯ್ಯೋದಿ ವೆಂಕಟೇಶ, ಕಟ್ಟೆ ಸಣ್ಣ ದುರುಗಪ್ಪ, ಎ.ತಾಯಣ್ಣ, ಬಿ.ನೇಣಿಗಿರೀಶ, ಆಟೋ ರಾಘವೇಂದ್ರ, ಕೆ.ಪ್ರಕಾಶ, ನಡವಿ ಮಂಜುನಾಥ ಇತರರಿದ್ದರು.