ಐತಿಹಾಸಿಕ ತಿಮ್ಮಣ್ಣ ನಾಯಕನ ಕೆರೆಯಲ್ಲಿ ಬಿಸಿಲಿನ ತಾಪಕ್ಕೆ ಸತ್ತ ಮೀನು ಮರಿಗಳು ತೇಲುತ್ತಿರುವುದು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ ಹೊರವಲಯದಲ್ಲಿರುವ ಐತಿಹಾಸಿಕ ತಿಮ್ಮಣ್ಣ ನಾಯಕನ ಕೆರಯಲ್ಲಿನ ಮತ್ಸ್ಯ ಸಂತತಿ ಜೀವಕ್ಕೆ ಕುತ್ತು ಎದುರಾಗಿದೆ. ಒಂದೆಡೆ ಬಿಸಿಲಿನ ತಾಪ ಮತ್ತೊಂದೆಡೆ ಕೆರೆಯಲ್ಲಿನ ನೀರು ಆವಿ ಮತ್ತು ಇಂಗಿ ಹೋಗುತ್ತಿರುವ ಪರಿಣಾಮ ಮೀನುಗಳಿಗೆ ಆಮ್ಲ ಜನಕದ ಕೊರತೆಯುಂಟಾಗಿ ಸಾವಿಗೀಡಾಗುತ್ತಿವೆ.

ಕಳೆದ ವರ್ಷ ಸುರಿದ ಮಳೆಗೆ ತಿಮ್ಣಣ್ಣನಾಯಕನ ಕೆರೆಗೆ ಕೋಟೆ ತಪ್ಪಲಿನಿಂದ ನೀರು ಹರಿದು ಬಂದು ಸಮಾಧಾನ ತಂದಿತ್ತು. ಅರ್ಧ ಕೆರೆಯಷ್ಟು ನೀರು ಸಂಗ್ರಹವಾಗಿದ್ದರಿಂದ ಸಹಜವಾಗಿಯೇ ಮೀನು ಮರಿಗಳ ಬಿಡಲಾಗಿತ್ತು. ಆದರೆ ಮೀನು ಮರಿಗಳು ಬೆಳವಣಿಗೆಯಾಗದೆ ಬಿಸಿಲಿನ ತಾಪಕ್ಕೆ ಕೊನೆಯುಸಿರೆಳೆಯುತ್ತಿವೆ.

ಶುಕ್ರವಾರ ಮಧ್ಯಾಹ್ನ ಕೆರೆ ತಳದಲ್ಲಿರುವ ನೀರಿನಲ್ಲಿ ಸತ್ತ ಮೀನು ಮರಿಗಳು ತೇಲುತ್ತಿರುವ ದೃಶ್ಯ ಕಂಡು ಬಂತು. ಚಿತ್ರದುರ್ಗವನ್ನಾಳಿದ ಪಾಳೆಗಾರರ ಕಾಲದಿಂದಲೂ ತಿಮ್ಮಣ್ಣನಾಯಕನ ಕೆರೆ ತನ್ನದೇಯಾದ ವಿಶಿಷ್ಟತೆ ಹೊಂದಿದೆ. ಹಿಂದೊಮ್ಮೆ ಇದೇ ಕೆರೆಯಿಂದಲೇ ದುರ್ಗದ ಜನತೆಗೆ ಕುಡಿವ ನೀರು ಪೂರೈಕೆ ಮಾಡಲಾಗುತ್ತಿತ್ತು. ನಗರ ಬೆಳೆದಂತೆ, ಜನಸಂಖ್ಯೆ ಹೆಚ್ಚಳವಾದಂತೆ ಕುಡಿವ ನೀರಿಗೆ ಮಾರಿಕಣಿವೆ ಅವಲಂಬನೆಗೆ ಒಳಗಾಗಾದಗ ಸಹಜವಾಗಿಯೇ ತಿಮ್ಮಣ್ಣ ನಾಯಕನ ಕೆರೆಯಿಂದ ಕುಡಿ ನೀರು ಪೂರೈಕೆ ಸ್ಥಗಿತಗೊಂಡಿತ್ತು.

ಐತಿಹಾಸಿಕ ಚಿತ್ರದುರ್ಗ ಕೋಟೆ ಮೇಲೆ ಬೀಳುವ ಮಳೆ ನೀರು ನೇರವಾಗಿ ತಿಮ್ಮಣ್ಣ ನಾಯಕನ ಕೆರೆಯಲ್ಲಿ ಸಂಗ್ರಹವಾಗುತ್ತಿದೆ. ಇದನ್ನು ಹೊರತು ಪಡಿಸಿದರೆ ನೀರು ಸಂಗ್ರಹಕ್ಕೆ ಬದಲಿ ಮೂಲವಿಲ್ಲ. ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೆರೆ ಅಭಿವೃದ್ಧಿ ಪಡಿಸಿ ವಾಯುವಿಹಾರದ ತಾಣವಾಗಿ ರೂಪಾಂತರ ಮಾಡಲಾಗಿತ್ತು. ಕೆರೆಯಲ್ಲಿ ನೀರು ಸಂಗ್ರಹದ ಪ್ರಮಾ್ಣ ಕಡಿಮೆ ಆದಂತೆ ಮೀನುಗಳು ಸಾವಿಗೀಡಾಗಿವೆ.