ಪ್ರಸ್ತುತ ಕಾರವಾರ ಬಂದರಿನ ಸರಕು ನಿರ್ವಹಣಾ ಸಾಮರ್ಥ್ಯ ವರ್ಷಕ್ಕೆ 30 ಲಕ್ಷ ಮೆಟ್ರಿಕ್ ಟನ್ ಇದ್ದು, ಎರಡನೇ ಹಂತದ ವಿಸ್ತರಣೆಯ ಬಳಿಕ ಅದನ್ನು 45 ಲಕ್ಷ ಮೆಟ್ರಿಕ್ ಟನ್ಗೆ ಹೆಚ್ಚಿಸುವ ಪ್ರಸ್ತಾವನೆ ಇದೆ.
ಕಾರವಾರ: ಸಾಗರಮಾಲಾ ಯೋಜನೆಯಡಿ ಕಾರವಾರ ಬಂದರಿನ ಎರಡನೇ ಹಂತದ ವಿಸ್ತರಣೆ ಕಾಮಗಾರಿಯನ್ನು ಮತ್ತೆ ಆರಂಭಿಸಲು ಸರ್ಕಾರ ಮುಂದಾಗಿರುವುದಕ್ಕೆ ಮೀನುಗಾರ ಮುಖಂಡರು, ಪರಿಸರ ಹೋರಾಟಗಾರರು ಹಾಗೂ ಸ್ಥಳೀಯ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿಯ ಹೆಸರಿನಲ್ಲಿ ನಗರದ ಸೂಕ್ಷ್ಮ ಪರಿಸರ, ಕಡಲತೀರ ಹಾಗೂ ಜನರ ಆರೋಗ್ಯವನ್ನು ಬಲಿಕೊಡಲು ಸಾಧ್ಯವಿಲ್ಲ. ಸರ್ಕಾರ ತಕ್ಷಣ ಯೋಜನೆಯಿಂದ ಹಿಂದೆ ಸರಿಯಬೇಕು. ಇಲ್ಲವಾದಲ್ಲಿ ಜಿಲ್ಲೆಯ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ಬೃಹತ್ ಜನಾಂದೋಲನ ರೂಪಿಸಲಾಗುವುದು ಎಂದು ಮುಖಂಡರು ಎಚ್ಚರಿಸಿದ್ದಾರೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೀನುಗಾರ ಮುಖಂಡರಾದ ವಿಕಾಸ ತಾಂಡೇಲ್ ಅವರು, ಜಿಲ್ಲೆಯ ಧಾರಣಾ ಸಾಮರ್ಥ್ಯ ಕುಂಠಿತವಾಗಿದ್ದರೂ ಸಾಮರ್ಥ್ಯ ಮೀರಿ ವಿವಿಧ ಯೋಜನೆಗಳನ್ನು ಹೇರುವ ಪ್ರಯತ್ನ ನಡೆಯುತ್ತಿದೆ. ಸರ್ಕಾರದ ಹಣ ಕೊಳ್ಳೆ ಹೊಡೆಯಲು ಹಾಗೂ ಗುತ್ತಿಗೆದಾರರ ಜೇಬು ತುಂಬಿಸಲು ಇಂತಹ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂಬ ಅನುಮಾನವಿದೆ. ನಗರದ ಹೃದಯ ಭಾಗದಲ್ಲಿರುವ ಬಂದರಿನಲ್ಲಿ ರೆಡ್ ಕ್ಯಾಟೆಗರಿ ಸರಕುಗಳ ಸಾಗಣೆ ಮತ್ತು ನಿರ್ವಹಣೆಗೆ ಹೇಗೆ ಅನುಮತಿ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದರು. ಪ್ರಸ್ತುತ ಕಾರವಾರ ಬಂದರಿನ ಸರಕು ನಿರ್ವಹಣಾ ಸಾಮರ್ಥ್ಯ ವರ್ಷಕ್ಕೆ 30 ಲಕ್ಷ ಮೆಟ್ರಿಕ್ ಟನ್ ಇದ್ದು, ಎರಡನೇ ಹಂತದ ವಿಸ್ತರಣೆಯ ಬಳಿಕ ಅದನ್ನು 45 ಲಕ್ಷ ಮೆಟ್ರಿಕ್ ಟನ್ಗೆ ಹೆಚ್ಚಿಸುವ ಪ್ರಸ್ತಾವನೆ ಇದೆ. ಇದಕ್ಕಾಗಿ 5 ಹೆಚ್ಚುವರಿ ಬರ್ತ್ಗಳು, 1,635 ಮೀಟರ್ ಬರ್ತಿಂಗ್ ಉದ್ದ ಹಾಗೂ 18 ಮೀಟರ್ ಆಳದ ಯೋಜನೆ ರೂಪಿಸಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದ ವಿಸ್ತರಣೆಯ ಅಗತ್ಯವೇನು ಮತ್ತು ಇದರಿಂದ ಯಾರಿಗೆ ಲಾಭವಾಗಲಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.ಈಗಾಗಲೇ ಕೈಗಾ ಅಣುವಿದ್ಯುತ್ ಘಟಕದಿಂದ ಆರೋಗ್ಯ ಸಮಸ್ಯೆಗಳ ಆತಂಕವಿದೆ. ಇಂತಹ ಸಂದರ್ಭದಲ್ಲಿ ಬಂದರು ವಿಸ್ತರಣೆಯಿಂದ ಮತ್ತಷ್ಟು ಸಮಸ್ಯೆಗಳು ಎದುರಾಗಬಹುದು. ಗುಜರಾತ್ನ ಕರಾವಳಿ ಸುಮಾರು 2,000 ಕಿಮೀ ಉದ್ದವಿದ್ದರೆ, ಕರ್ನಾಟಕದ ಕರಾವಳಿ ಕೇವಲ 300 ಕಿಮೀ ಇದೆ. ಹೀಗಾಗಿ ಗುಜರಾತ್ ಮಾದರಿಯಲ್ಲಿ ಕರ್ನಾಟಕದಲ್ಲೂ ಬಂದರುಗಳನ್ನು ಅಭಿವೃದ್ಧಿಪಡಿಸುವ ಗುರಿ ಅವೈಜ್ಞಾನಿಕವಾಗಿದೆ. ಪರಿಸರಸ್ನೇಹಿ ಯೋಜನೆಗಳಿಗೆ ಬೆಂಬಲವಿದೆ. ಆದರೆ ಜನರಿಗೆ ಮಾರಕವಾಗುವ ಯೋಜನೆಗಳನ್ನು ವಿರೋಧಿಸಲಾಗುವುದು ಎಂದರು.ಜಿಲ್ಲಾ ಮೀನು ಮಾರಾಟಗಾರರ ಫೆಡರೇಶನ್ ಮಾಜಿ ಅಧ್ಯಕ್ಷ ಗಣಪತಿ ಮಾಂಗ್ರೆ ಮಾತನಾಡಿ, ಈ ಹಿಂದೆ ಕಡಲತೀರದ 14.5 ಎಕರೆ ಪ್ರದೇಶವನ್ನು ನೌಕಾಪಡೆಯ ಕೋಸ್ಟ್ಗಾರ್ಡ್ಗೆ ನೀಡಿದಾಗ ಸಾರ್ವಜನಿಕರು ಹಾಗೂ ಮೀನುಗಾರರು ಒಗ್ಗೂಡಿ ಹೋರಾಟ ನಡೆಸಿದ್ದರು. ಬಳಿಕ ಸುಮಾರು 13 ಎಕರೆ ಪ್ರದೇಶವನ್ನು ವಾಪಸ್ ಪಡೆಯಲಾಗಿದ್ದು, ಉಳಿದ 1.5 ಎಕರೆ ಪ್ರದೇಶವನ್ನೂ ಮರಳಿ ಪಡೆಯುವ ನಿರೀಕ್ಷೆಯಿದೆ. 32 ಕಡಲತೀರಗಳನ್ನು ಹೊಂದಿದ್ದ ಕಾರವಾರದಲ್ಲಿ ಬಹುತೇಕ ಕಡಲತೀರಗಳು ನೌಕಾನೆಲೆಯ ವ್ಯಾಪ್ತಿಗೆ ಸೇರಿದ್ದು, ಮೀನುಗಾರರಿಗೆ ಪ್ರವೇಶ ನಿರ್ಬಂಧಿತವಾಗಿದೆ.ಇದೀಗ ತಜ್ಞರ ವರದಿಗಳು ವ್ಯತಿರಿಕ್ತವಾಗಿದ್ದರೂ ಅಪಾಯಕಾರಿ ಬಂದರು ವಿಸ್ತರಣೆ ಯೋಜನೆಯನ್ನು ಮತ್ತೆ ಜಾರಿಗೊಳಿಸಲು ಮುಂದಾಗಿರುವುದು ಆತಂಕಕಾರಿ. ವರ್ಷದ ಸುಮಾರು 9 ತಿಂಗಳು ಪಶ್ಚಿಮದಿಂದ ಬೀಸುವ ಗಾಳಿಯು ಬಂದರಿನಲ್ಲಿನ ಧೂಳು ಮತ್ತು ಮಾಲಿನ್ಯಕಾರಕ ಅಂಶಗಳನ್ನು ನಗರದತ್ತ ಕೊಂಡೊಯ್ಯುವ ಸಾಧ್ಯತೆಯಿದೆ. ಇದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಆತಂಕವಿದ್ದು, ಯಾವುದೇ ಕಾರಣಕ್ಕೂ ಬಂದರು ವಿಸ್ತರಣೆಗೆ ಬಿಡುವುದಿಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ಕೇಣಿ ಬಂದರು ಹೋರಾಟ ಸಮಿತಿಯ ಸಂಜೀವ ಬಲೆಗಾರ, ಪರ್ಸಿನ್ ಯುನಿಯನ್ನ ಮುರಳಿ ತಾಂಡೇಲ್, ಚಂದ್ರಕಾಂತ, ಉದಯ ಬಾನಾವಳಿಕರ್, ವೆಂಕಟೇಶ ಹರಿಕಂತ್ರ, ಉದಯ ಹರಿಕಂತ್ರ, ಶ್ರೀನಿವಾಸ್ ಹರಿಕಂತ್ರ, ಸತೀಶ್ ಬಾನಾವಳಿ, ವಿಜಯ ಬಾನಾವಳಿ, ಉದಯ ಅಂಬಿಗ, ಸೀತಾರಾಮ ಉಳ್ವೇಕರ್ ಹಾಗೂ ಅಶೋಕ ಹರಿಕಂತ್ರ ಉಪಸ್ಥಿತರಿದ್ದರು.