ರಾಷ್ಟ್ರ ರಕ್ಷಣೆಗೆ ಮೀನುಗಾರರ ಸಹಕಾರ ಅಗತ್ಯ

| Published : May 10 2025, 01:12 AM IST

ಸಾರಾಂಶ

ಸಮುದ್ರದಲ್ಲಿ ಮೀನುಗಾರರು ಆಮಿಷಕ್ಕೆ ಒಳಗಾಗದೇ ಕರಾವಳಿಯ ಸುರಕ್ಷತೆಗೆ ಒತ್ತು ನೀಡಬೇಕು.

ಕಾರವಾರ: ಕಡಲಿನಲ್ಲಿ ಯಾವುದೇ ಶಂಕಾಸ್ಪದ ಘಟನೆಗಳು ಕಂಡು ಬಂದರೂ ಅವುಗಳ ಬಗ್ಗೆ ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ, ಮೀನುಗಾರಿಕಾ ಇಲಾಖೆಗೆ ತಕ್ಷಣ ಮಾಹಿತಿ ನೀಡುವಂತೆ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಬಬೀನ್ ಬೋಪಣ್ಣ ಮೀನುಗಾರರಿಗೆ ತಿಳಿಸಿದರು.ನಗರದ ಬೈತಖೋಲದ ಪರ್ಶೀನ್ ಬೋಟ್ ಯೂನಿಯನ್ ಕಚೇರಿಯಲ್ಲಿ ಮೇ 12ರಂದು ಮಾಕ್ ಡ್ರಿಲ್ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಮೀನುಗಾರರ ಸಭೆ ನಡೆಸಿ, ಮೀನುಗಾರರ ಪಾತ್ರದ ಬಗ್ಗೆ ಮಾಹಿತಿ ನೀಡಿದರು.ಯುದ್ಧದ ಸನ್ನಿವೇಶ ಇರುವುದರಿಂದ ಯಾವುದೇ ಸಂದರ್ಭದಲ್ಲಿ ಸಮುದ್ರದಲ್ಲಿ ಶಂಕಾಸ್ಪದ ಬೋಟ್, ವ್ಯಕ್ತಿಗಳು ಕಂಡು ಬಂದರೆ ತಕ್ಷಣ ಮಾಹಿತಿ ನೀಡಬೇಕು ಎಂದರು.

ಸಮುದ್ರದಲ್ಲಿ ಮೀನುಗಾರರು ಆಮಿಷಕ್ಕೆ ಒಳಗಾಗದೇ ಕರಾವಳಿಯ ಸುರಕ್ಷತೆಗೆ ಒತ್ತು ನೀಡಬೇಕು. ಸಮುದ್ರಕ್ಕೆ ತೆರಳುವ ಮೀನುಗಾರರು ಅಕ್ಕ ಪಕ್ಕದ ದೋಣಿಗಳು ಹಾಗೂ ಹೊರ ರಾಜ್ಯದ ದೋಣಿಗಳ ಮೇಲೆ ನಿಗಾ ಇಡಬೇಕು. ಜಿಲ್ಲೆಯಲ್ಲಿ ಎಂಟು ಬಂದರುಗಳಿವೆ. ಅಲ್ಲದೇ ಉಳಿದ ಕಡೆಗಳಲ್ಲಿಯೂ ವಹಿವಾಟು ನಡೆಯುತ್ತದೆ. ಹೀಗಾಗಿ ನಮ್ಮ ಜನರನ್ನು ಬಿಟ್ಟು ಬೇರೆಯವರ ಓಡಾಟ ಇದ್ದರೆ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು ಎಂದರು.

ಈಗಾಗಲೇ ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪಡೆ ಸಮುದ್ರದಲ್ಲಿ ಗಸ್ತು ತಿರುಗುತ್ತಿದೆ. ನಮ್ಮ ವ್ಯಾಪ್ತಿಯಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿ ದೇಶದ ಭದ್ರತೆಗೆ ಸಹಾಯ ಮಾಡಬೇಕು. ಶತ್ರುಗಳು ಯಾವ ಸ್ವರೂಪದಲ್ಲಿ ಬರಬಹುದು. ಕರಾವಳಿಯ ದ್ವೀಪಗಳಲ್ಲಿ ಅಡಗಿರಬಹುದು. ಇಂಥ ಯಾವುದೇ ಸಂಶಯ ಮೀನುಗಾರರಿಗೆ ವ್ಯಕ್ತವಾದರೆ, ಇವುಗಳ ಬಗ್ಗೆ ಸಮುದ್ರದಲ್ಲಿರುವ ಮೀನುಗಾರಿಗೆ ಮೊದಲು ಮಾಹಿತಿ ಲಭ್ಯವಾಗುತ್ತದೆ. ಮೀನುಗಾರರು ದೇಶ ರಕ್ಷಣೆಗೆ ತಮ್ಮ ಕಿರು ಕಾಣಿಕೆ ನೀಡಬೇಕು ಎಂದರು.

ಸಭೆಯಲ್ಲಿ ಕರಾವಳಿ ಕಾವಲು ಪಡೆಯ ಪಿಎಸ್ಐ ನಿಶ್ಚಲಕುಮಾರ್, ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ವೆಂಕಟೇಶ್ ತಾಂಡೇಲ್, ಪರ್ಶಿನ್ ಬೋಟ್ ಯೂನಿಯನ್ ಅಧ್ಯಕ್ಷ ಗೌರೀಶ್ ಇದ್ದರು.