ಸಾರಾಂಶ
ಭಾರೀ ಗಾತ್ರದ ಅಲೆ ಅಪ್ಪಳಿಸಿ ಮೀನುಗಾರಿಕಾ ದೋಣಿ ಮಗುಚಿ ಬಿದ್ದ ಪರಿಣಾಮ ನಾಲ್ವರು ಮೀನುಗಾರರ ಪೈಕಿ ಮೂವರು ನೀರುಪಾಲಾಗಿದ್ದು, ಓರ್ವ ಬದುಕುಳಿದ ಘಟನೆ ಇಲ್ಲಿನ ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಕನ್ನಡಪ್ರಭ ವಾರ್ತೆ ಕುಂದಾಪುರ
ಮೀನುಗಾರಿಕೆಗೆ ಕಡಲಿಗಿಳಿದ ವೇಳೆ ಭಾರೀ ಗಾತ್ರದ ಅಲೆ ಅಪ್ಪಳಿಸಿ ಮೀನುಗಾರಿಕಾ ದೋಣಿ ಮಗುಚಿ ಬಿದ್ದ ಪರಿಣಾಮ ನಾಲ್ವರು ಮೀನುಗಾರರ ಪೈಕಿ ಮೂವರು ನೀರುಪಾಲಾಗಿದ್ದು, ಓರ್ವ ಬದುಕುಳಿದ ಘಟನೆ ಇಲ್ಲಿನ ಗಂಗೊಳ್ಳಿ ಅಳಿವೆ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.ಗಂಗೊಳ್ಳಿ ನಿವಾಸಿ ಸುರೇಶ್ ಖಾರ್ವಿ (48), ಗಂಗೊಳ್ಳಿ ಬೇಲಿಕೆರಿ ನಿವಾಸಿ ರೋಹಿತ್ ಖಾರ್ವಿ (35), ಮಲ್ಯರಬೆಟ್ಟು ನಿವಾಸಿ ಜಗದೀಶ್ ಖಾರ್ವಿ (50) ನೀರುಪಾಲಾದವರು. ದೋಣಿಯಲ್ಲಿದ್ದ ಸಂತೋಷ ಖಾರ್ವಿಯನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.
ಸಿಪಾಯಿ ಸುರೇಶ್ ಮಾಲೀಕತ್ವದ ದೋಣಿಯಲ್ಲಿ ಮೀನುಗಾರಿಕೆಗಾಗಿ ಗಂಗೊಳ್ಳಿಯಿಂದ ಅರಬ್ಬಿ ಕಡಲಿನ ಕಡೆಗೆ ನಾಲ್ವರು ಮೀನುಗಾರರು ಮಂಗಳವಾರ ಬೆಳಗ್ಗೆ ತೆರಳಿದ್ದರು. ಸಮುದ್ರದಲ್ಲಿ ಭಾರಿ ತುಫಾನ್ ಹಾಗೂ ಗಾಳಿಯ ಒತ್ತಡದ ಕಾರಣದಿಂದ ಮೀನುಗಾರಿಕೆ ನಡೆಸದೆ ಹಿಂದಿರುಗುತ್ತಿದ್ದಾಗ ಗಂಗೊಳ್ಳಿ ಅಳಿವೆಯ ಹೊರ ಭಾಗದಲ್ಲಿ ದೋಣಿ ಮಗುಚಿ ದುರಂತ ಸಂಭವಿಸಿದೆ. ನಾಪತ್ತೆಯಾದ ಮೂವರು ಮೀನುಗಾರರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.ಕರಾವಳಿ ಕಾವಲು ಪಡೆ, ಗಂಗೊಳ್ಳಿ ಪೊಲೀಸರು, ಸ್ಥಳೀಯ ಮೀನುಗಾರರ ಸಹಕಾರದಿಂದ ನಾಪತ್ತೆಯಾದ ಮೀನುಗಾರರು ಹುಡುಕಾಟ ನಡೆಸಿದ್ದಾರೆ. ಮಂಗಳವಾರ ನಸುಕಿನ ಜಾವದಿಂದಲೇ ಭಾರೀ ಮಳೆ ಸುರಿಯುವುದರ ಜೊತೆಗೆ, ಗಾಳಿಯೂ ಭಾರೀ ಪ್ರಮಾಣದಲ್ಲಿ ಇರುವುದರಿಂದ ಸಮುದ್ರದಲ್ಲಿ ಬೃಹತ್ ಗಾತ್ರದ ಅಲೆಗಳು ಏಳುತ್ತಿದ್ದು, ಸುಗಮ ಕಾರ್ಯಾಚರಣೆಗೆ ತೊಡಕಾಗಿದೆ.
..............ಸರ್ಕಾರದಿಂದ ನೆರವು: ಗೋಪಾಲ ಪೂಜಾರಿಘಟನಾ ಸ್ಥಳಕ್ಕೆ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಆಗಮಿಸಿ ಮೀನುಗಾರ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಶುಕ್ರವಾರ ಮೀನುಗಾರಿಕಾ ಸಚಿವ ಮಂಕಾಳ್ ವೈದ್ಯ ಅವರು ಈ ಭಾಗಕ್ಕೆ ಭೇಟಿ ನೀಡಲಿದ್ದಾರೆ. ಸರ್ಕಾರದ ಮಟ್ಟದಲ್ಲಿ ಏನೆಲ್ಲಾ ಆಗಬೇಕೊ ಅವೆಲ್ಲವನ್ನೂ ಈಡೇರಿಸುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದರು. ಮೀನುಗಾರಿಕಾ ನಿಷೇಧವಿರುವಾಗ ಸಮುದ್ರಕ್ಕಿಳಿಯಬೇಡಿ ಎಂದು ಕರಾವಳಿ ಮೀನುಗಾರರಲ್ಲಿ ಮನವಿ ಮಾಡಿದರು.