ಸಾರಾಂಶ
- ದಾವಣಗೆರೆ, ಶಿವಮೊಗ್ಗ ಮೂಲದ ಬಂಧಿತರು । ಕೆಟಿಜೆ ನಗರ ಠಾಣೆ ಪೊಲೀಸರ ಕಾರ್ಯಾಚರಣೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಐವರು ಆರೋಪಿಗಳನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಿ, ಸುಮಾರು ₹3.85 ಲಕ್ಷ ಮೌಲ್ಯದ 6 ಬೈಕ್‌ಗಳನ್ನು ದಾವಣಗೆರೆ ಜಿಲ್ಲೆಯ ಪೊಲೀಸರು ಜಪ್ತಿ ಮಾಡಿದ್ದಾರೆ.ನಗರದ ಗಣೇಶ ಲೇಔಟ್‌ನ ವಾಸಿ ಬಲವಂತ ಎಂ.ನಿಲುಗಲ್ ಎಂಬವರು ಮನೆ ಮುಂದೆ ನಿಲ್ಲಿಸಿದ್ದ ಕಪ್ಪು ಬಣ್ಣದ ರಾಯಲ್ ಎನ್ ಫೀಲ್ಡ್ ಬೈಕ್ ಕಳೆದ ಅ.25ರಂದು ಕಳವಾದ ಬಗ್ಗೆ ಕೆಟಿಜೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಚಿಕ್ಕನಹಳ್ಳಿ ಹೊಸ ಬಡಾವಣೆ ವಾಸಿ ಎಸ್.ನಾಗರಾಜ ತಮ್ಮ ಮನೆ ಮುಂದೆ ನಿಲ್ಲಿಸಿದ್ದ ಕಪ್ಪು ಬಣ್ಣದ ಫ್ಯಾಷನ್ ಪ್ರೋ ಬೈಕ್ ಕಳುವಾದ ಬಗ್ಗೆಯೂ ದೂರು ನೀಡಿದ್ದರು.
ಶಿವಮೊಗ್ಗ ಜಿಲ್ಲೆ ಮಿಳಘಟ್ಟ ನಿವಾಸಿ ಮೊಹಮ್ಮದ್ ಸೂಫಿಯಾನ್ (22), ತುಂಗಾ ನಗರದ 1ನೇ ಕ್ರಾಸ್ ನಿವಾಸಿ ಮೊಹಮ್ಮದ್ ದಾದಾಪೀರ್ (20), ದಾವಣಗೆರೆ ಅಮರಪ್ಪನ ತೋಟದ ವಾಸಿ ಅಲ್ತಾಫ್ (22), ಆಜಾದ್ ನಗರದ ಬಾಬ್ಜಾನ್ (30) ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದರು. ಆಗ ಕೆಟಿಜೆ ನಗರ ಠಾಣೆಯ ವ್ಯಾಪ್ತಿಯ ರಾಯಲ್ ಎನ್‌ಫೀಲ್ಡ್, ಗಾಂಧಿ ನಗರ ಠಾಣೆಯ ರಾಯಲ್ ಎನ್‌ಫೀಲ್ಡ್, ಮಲೆಬೆನ್ನೂರು ಠಾಣೆ ವ್ಯಾಪ್ತಿಯ ಪಲ್ಸರ್ ಬೈಕ್, ಹರಿಹರ ಗ್ರಾಮಾಂತರ ಠಾಣೆಯ ಪಲ್ಸರ್ ಬೈಕ್ ಒಟ್ಟು 4 ಪ್ರಕರಣಗಳಿಂದ ₹2.80 ಲಕ್ಷ ಮೌಲ್ಯದ 4 ಬೈಕ್ ಜಪ್ತಿ ಮಾಡಲಾಗಿದೆ.ಬಂಧಿತರ ಪೈಕಿ 1ನೇ ಆರೋಪಿ ಮೊಹಮ್ಮದ್ ಸೂಫಿಯಾನ್ ವಿರುದ್ಧ ಆಜಾದ್ ನಗರ ಠಾಣೆ, ಕೆಟಿಜೆ ನಗರ ಠಾಣೆ, ರಾಣೆಬೆನ್ನೂರು ಪೊಲೀಸ್ ಠಾಣೆ, ಹಾಸನ ಜಿಲ್ಲೆ ಅರಸೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಬೈಕ್ ಕಳವು ಪ್ರಕರಣದ ಆರೋಪಿಯಾಗಿದ್ದಾನೆ. ಕೆಟಿಜೆ ನಗರ ಠಾೆ ವ್ಯಾಪ್ತಿಯ ಬೈಕ್ ಕಳವು ಪ್ರಕರಣದ ಆರೋಪಿಯಾದ ಹೊನ್ನಾಳಿ ತಾ. ಸಿಂಗಟಗೆರೆ ಗ್ರಾಮದ ವಾಸಿ, ತರಗಾರ ಕೆಲಸಗಾರ ಆರ್.ರವಿ (26)ನನ್ನು ಬಂಧಿಸಿ, ಆತನಿಂದ ಫ್ಯಾಷನ್ ಪ್ರೊ ಬೈಕ್, ಹೊನ್ನಾಳಿ ಠಾಣೆ ವ್ಯಾಪ್ತಿಯ ಪಲ್ಸರ್ ಬೈಕ್ ಸೇರಿದಂತೆ 2 ಪ್ರಕರಣಗಳಿಂದ ₹1.05 ಲಕ್ಷ ಮೌಲ್ಯದ 2 ಬೈಕ್ ಜಪ್ತಿ ಮಾಡಲಾಗಿದೆ.
ಎಸ್ಪಿ ಉಮಾ ಪ್ರಶಾಂತ, ಎಎಸ್ಪಿಗಳಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ, ಡಿವೈಎಸ್ಪಿ ಬಿ.ಶರಣ ಬಸವೇಶ್ವರ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆ ನಿರೀಕ್ಷಕ ಎಚ್.ಎಸ್.ಸುನೀಲಕುಮಾರ ನೇತೃತ್ವದಲ್ಲಿ ಪಿಎಸ್‌ಐಗಳಾದ ಆರ್.ಲತಾ, ಸಿಬ್ಬಂದಿ ಸುರೇಶ ಬಾಬು, ಮಹಮ್ಮದ್ ರಫೀ, ಗಿರೀಶ ಗೌಡ, ಸಿದ್ದಪ್ಪ, ಮಂಜಪ್ಪ, ಡಿ.ಬಿ.ನಾಗರಾಜ, ಎಂ.ಹನುಮಂತಪ್ಪ, ಗೌರಮ್ಮ, ಗೀತಾ, ಎಸ್ಪಿ ಕಚೇರಿ ರಾಘವೇಂದ್ರ, ರಮೇಶ, ಬಿ.ಕೆ.ಶಿವಕುಮಾರ, ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್‌ನ ಮಾರುತಿ, ಸೋಮು ಅವರನ್ನು ಒಳಗೊಂಡ ತಂಡವು ಬೈಕ್ ಕಳವು ಪ್ರಕರಣದ ಆರೋಪಿಗಳ ಪತ್ತೆ ಹಚ್ಚಿ, ಬಂಧಿಸಿದ್ದಾರೆ.- - - -12ಕೆಡಿವಿಜಿ10:
ದಾವಣಗೆರೆ, ಶಿವಮೊಗ್ಗ ಜಿಲ್ಲೆಗ ಐವರು ಬೈಕ್ ಕಳ್ಳರನ್ನು ಬಂಧಿಸಿರುವ ದಾವಣಗೆರೆ ಕೆಟಿಜೆ ನಗರ ಠಾಣೆ ಪೊಲೀಸರು ₹3.85 ಲಕ್ಷ ಮೌಲ್ಯದ 6 ಬೈಕ್ ವಶಕ್ಕೆ ಪಡೆದರು.