ಗ್ರಾಮದ ಕಾಲೋನಿಯಲ್ಲಿ ಹಗಲು ಮತ್ತು ರಾತ್ರಿ ತಿರುಗಾಡುವ ಗ್ರಾಮಸ್ಥರು ಮತ್ತು ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿಯಿಂದ ಹಲವರು ಗಾಯಗೊಂಡಿದ್ದ ಘಟನೆ ಜರುಗಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ.

ಮದ್ದೂರು: ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದ ಮೇಕೆಗಳ ಮೇಲೆ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ ಪರಿಣಾಮ ಐದು ಮೇಕೆಗಳು ಮೃತಪಟ್ಟಿರುವ ಘಟನೆ ತಾಲೂಕಿನ ಕುದರಗುಂಡಿ ಗ್ರಾಮದ ಕಾಲೋನಿಯಲ್ಲಿ ಸೋಮವಾರ ಬೆಳಗಿನ ಜಾವ ಜರುಗಿದೆ. ಗ್ರಾಮದ ಕೆ.ಪಾಪಣ್ಣರ ಮನೆ ಸಮೀಪ ನಿರ್ಮಿಸಿದ್ದ ಕೊಟ್ಟಿಗೆ ಒಳ ನುಗ್ಗಿರುವ ಐದು ಬೀದಿ ನಾಯಿಗಳ ಹಿಂಡು ದಾಳಿ ಮಾಡಿದ ಹಿನ್ನೆಲೆ ಎಂಟು ಮೇಕೆಗಳ ಪೈಕಿ ಐದು ಮೇಕೆಗಳು ನಾಯಿ ದಾಳಿಗೆ ಬಲಿಯಾಗಿವೆ. ಮೂರು ಮೇಕೆಗಳು ಗಾಯಗೊಂಡು ಪರಿಸ್ಥಿತಿ ಗಂಭೀರವಾಗಿದೆ. ಗ್ರಾಮದ ಕಾಲೋನಿಯಲ್ಲಿ ಹಗಲು ಮತ್ತು ರಾತ್ರಿ ತಿರುಗಾಡುವ ಗ್ರಾಮಸ್ಥರು ಮತ್ತು ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿಯಿಂದ ಹಲವರು ಗಾಯಗೊಂಡಿದ್ದ ಘಟನೆ ಜರುಗಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ. ಈ ವ್ಯಾಪ್ತಿಯಲ್ಲಿ ಬರುವ ಸಾದೊಳಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಬೀದಿ ನಾಯಿಗಳನ್ನು ಸೆರೆ ಹಿಡಿಯಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮೇಕೆಗಳನ್ನು ಕಳೆದುಕೊಂಡವರಿಗೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಬಡಾವಣೆ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ. ಸ್ಥಳಕ್ಕೆ ಪಶು ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿಯವರು ಭೇಟಿ ನೀಡಿ ಪರಿಶೀಲಿಸಿ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿ ವರದಿ ಸಲ್ಲಿಸಿದ್ದಾರೆ.