ಪಂಚ ಯೋಜನೆ ಫಲಾನುಭವಿಗಳ ಸಮೀಕ್ಷೆ ಪ್ರಾರಂಭ

| Published : Feb 28 2024, 02:31 AM IST

ಸಾರಾಂಶ

ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನದನ್ವಯ ಸೋಮವಾರ ಜಿಲ್ಲೆಯ ಜಾನುಕೊಂಡ, ಮೆದೆಹಳ್ಳಿಯಲ್ಲಿ ಸಮೀಕ್ಷೆ ನಡೆಸಲಾಯಿತು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನದನ್ವಯ ಸಮೀಕ್ಷೆ ನಡೆಸುವ ಕಾರ್ಯ ಜಿಲ್ಲೆಯಲ್ಲಿ ಪ್ರಾರಂಭಗೊಂಡಿದೆ.

ಸರ್ಕಾರ ಜಾರಿಗೊಳಿಸಿರುವ ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಯುವನಿಧಿ ಸೇರಿ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಸ್ಪಷ್ಟ ಚಿತ್ರಣ ಪಡೆಯುವ ಸಲುವಾಗಿ ಫಲಾನುಭವಿಗಳ ಸಮೀಕ್ಷೆ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.

ಸರ್ಕಾರದ ಸೂಚನೆಯಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮೀಕ್ಷೆ ಕಾರ್ಯ ಪ್ರಾರಂಭಿಸಲಾಗಿದ್ದು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಸರ್ವೆ ಕಾರ್ಯ ನಡೆಸಲಿದ್ದಾರೆ. ಮೊಬೈಲ್/ವೆಬ್ ತಂತ್ರಾಂಶದ ಮೂಲಕ ಸಮೀಕ್ಷೆ ನಡೆಸಲಾಗುತ್ತಿದ್ದು, ಯೋಜನೆಗಳು ತಲುಪಿರುವ ಮತ್ತು ತಲುಪದಿರುವ ಕುಟುಂಬಗಳ ಸರ್ವೆ ಈ ಸಂದರ್ಭದಲ್ಲಿ ಆಗಲಿದೆ. ಸರ್ಕಾರದ ಯೋಜನೆಗಳು ತಲುಪದ ಕುಟುಂಬಗಳ ಸಂಖ್ಯೆ ಮತ್ತು ಕಾರಣ ತಿಳಿದುಕೊಳ್ಳಲು ಕೂಡ ಈ ಸಮೀಕ್ಷೆ ನೆರವಾಗಲಿದೆ.ಸೋಮವಾರ ಜಿಲ್ಲೆಯ ಜಾನುಕೊಂಡ, ಮೆದೆಹಳ್ಳಿ, ಕಣಿವೆಮಾರಮ್ಮ ನಗರ ಮುಂತಾದೆಡೆ ಗ್ಯಾರಂಟಿ ಯೋಜನೆಗಳ ಸಮೀಕ್ಷೆ ಪ್ರಾರಂಭಗೊಂಡಿದ್ದು, ಸರ್ವೆ ಕಾರ್ಯಕ್ಕೆ ಸಂಬಂಧಿಸಿದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಲಾಗಿನ್ ಕ್ರಿಯೇಟ್ ಮಾಡಿಕೊಡಲಾಗುತ್ತಿದೆ. ಸಮೀಕ್ಷೆ ಕಾರ್ಯವನ್ನು ಜಿಲ್ಲೆಯಲ್ಲಿ ಉತ್ತಮವಾಗಿ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್ ತಿಳಿಸಿದ್ದಾರೆ.