ಸಾರಾಂಶ
ಗದಗ: ರಾಜ್ಯ ಸರ್ಕಾರದಿಂದ ಅನುಷ್ಠಾನಗೊಂಡಿರುವ ಪಂಚ ಗ್ಯಾರಂಟಿ ಯೋಜನೆಗಳು ಬಡವರ ಬದುಕು ಹಸನಾಗುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಬಡ ಜನರ ಜೀವನಮಟ್ಟ ಸುಧಾರಣೆಗೆ ಸಹಕಾರಿಯಾಗಿವೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ತಿಳಿಸಿದರು.ತಾಲೂಕಿನ ಯಲಿಶಿರೂರ ಹಾಗೂ ಹರ್ತಿ ಗ್ರಾಪಂ ವ್ಯಾಪ್ತಿಯಲ್ಲಿ ಗುರುವಾರ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಾರ್ವಜನಿಕ ಅಹವಾಲು ಸ್ವೀಕಾರ, ಸಮಸ್ಯೆಗಳ ಪರಿಹಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನಲ್ಲಿ ಶೇ. 97.7ರಷ್ಟು ಗುರಿ ಸಾಧನೆ ಮಾಡಿದ್ದು, ಸಮಸ್ಯೆಗಳ ಪರಿಹಾರಕ್ಕಾಗಿ ವಿಶೇಷ ಸಭೆಯನ್ನು ಗ್ರಾಪಂ ಮಟ್ಟದಲ್ಲಿ ಏರ್ಪಡಿಸಲಾಗಿದೆ. ಸಭೆಯ ಮೂಲಕ ಶೇಕಡಾ ನೂರರಷ್ಟು ಗುರಿ ಸಾಧನೆ ಮಾಡಲಾಗುವುದು ಎಂದರು.
ಪಂಚ ಗ್ಯಾರಂಟಿ ಯೋಜನೆಗಳು ನೇರವಾಗಿ ಫಲಾಭವಿಗಳಿಗೆ ದೊರೆಯುವ ನಿಟ್ಟಿನಲ್ಲಿ ಪ್ರತಿ ಹಂತದಲ್ಲಿ ಸಭೆ, ಪ್ರಗತಿ ಪರಿಶೀಲನೆ ನಡೆಸುತ್ತಿದ್ದು, ಸರ್ಕಾರದ ಈ ಪಂಚ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಯೋಜನೆಯ ಯಶಸ್ಸು ಸಾಧಿಸುವ ಮೂಲಕ ರಾಜ್ಯದ ಎಲ್ಲ ಬಡ ಕುಟುಂಬಗಳು ಬಡತನ ರೇಖೆಯಿಂದ ಹೊರಬಂದು ಸ್ವಾವಲಂಬಿ ಜೀವನ ನಡೆಸಲು ಆ ಮೂಲಕ ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಗುಣಮಟ್ಟ ಸುಧಾರಣೆಯಾಗಬೇಕು. ಆ ದಿಶೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ ಮಾರ್ಗದರ್ಶನದಲ್ಲಿ ಗದಗ ಮತಕ್ಷೇತ್ರದಲ್ಲಿ ಜನರ ಮನೆಬಾಗಿಲಿಗೆ ಯೋಜನೆ ಫಲಾನುಭವಿಗಳ ಪರಿಹಾರಕ್ಕಾಗಿ ಸಭೆ ಆಯೋಜಿಸಲಾಗಿದೆ ಎಂದರು.ಗ್ಯಾರಂಟಿ ಯೋಜನೆ ಪ್ರಾಧಿಕಾರದ ಸದಸ್ಯ ಕೃಷ್ಣಗೌಡ ಎಚ್. ಪಾಟೀಲ ಮಾತನಾಡಿ, ಸರ್ಕಾರ ಬಡವರ ನೆರವಿಗಾಗಿ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ದೇಶದಲ್ಲಿಯೇ ಮಾದರಿಯಾಗಿದೆ. ಯೋಜನೆಗಳ ಸೌಲಭ್ಯಗಳು ಬಡವರ ಬದುಕು ರೂಪಿಸುವಲ್ಲಿ ಯಶಸ್ವಿಯಾಗುತ್ತಿವೆ ಎಂದರು.
ಪಂಚ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ವಿಳಂಬವಿಲ್ಲದೇ ತಲುಪಬೇಕು. ಇರುವ ತಂತ್ರಜ್ಞಾನಗಳನ್ನು ಬಳಸಿಕೊಂಡು ಜನರಿಗೆ ಯೋಜನೆಗಳು ದೊರೆಯಲು ಹಾಗೂ ಆಗುವ ಅಡಚಣೆಗಳ ನಿವಾರಣೆಗಾಗಿಯೇ ತಾಲೂಕಿನ ಗ್ರಾಪಂ ಮಟ್ಟದಲ್ಲಿ ಅಹವಾಲು ಸ್ವಿಕಾರ, ಸಮಸ್ಯೆಗಳಿಗೆ ಪರಿಹಾರ ಕೊಡುವ ಮೂಲ ಉದ್ದೇಶದಿಂದ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಸಭೆ ನಡೆಸುವ ಮೂಲಕ ಬಡವರ ಕೆಲಸ ಸರಾಗವಾಗಿ ಮುಟ್ಟಲು ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ವಿಶೇಷ ಕಾರ್ಯವನ್ನು ಮಾಡುತ್ತಿದೆ ಎಂದರು.ಈ ವೇಳೆ ಮಲ್ಲಪ್ಪ ದಂಡಿನ, ಗಣೇಶಸಿಂಗ್ ಮಿಠಡೆ, ಸಾವಿತ್ರಿ ಹೂಗಾರ, ಮಲ್ಲು ಬಾರಕೇರ, ಅಜ್ಜಪ್ಪ ಹುಗ್ಗೆಣ್ಣವರ, ಮೀನಾಕ್ಷಿ ಬೆನಕಣ್ಣವರ, ನಿಂಗನಗೌಡ ಪಾಟೀಲ, ಗಂಗಯ್ಯ ಹಿರೇಮಠ, ಪರಶುರಾಮ ಹೂಗಾರ, ಸುರೇಶ ಹೊಸಮನಿ, ಮಂಜುನಾಥ ಯಲಿ, ಮಂಜುನಾಥ ಭಜಂತ್ರಿ, ಶರಣಪ್ಪ ಡೊಣಿ, ತಾಜುದ್ದೀನ ಹೊಂಬಳ, ಕೊಟ್ರೇಶ ಕುಂದ್ರಳ್ಳಿ ಸೇರಿದಂತೆ ಇತರರು ಇದ್ದರು.