ಸಾರಾಂಶ
ಕನ್ನಡಪ್ರಭ ವಾರ್ತೆ ಬೀಳಗಿ
ಕಳೆದ ಚುನಾವಣೆಯಲ್ಲಿ ರಾಜ್ಯದ ಜನರಿಗೆ ಕೊಟ್ಟ ಮಾತಿನಂತೆ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳವ ಮೂಲಕ ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದು, ಈ ಮಹತ್ವಾಕಾಂಕ್ಷೆ ಯೋಜನೆಯಿಂದ ಎಲ್ಲ ಸಮುದಾಯದ ಜನರ ಆರ್ಥಿಕತೆ ಹೆಚ್ಚಳಕ್ಕೆ ಉಪಯೋಗಕಾರಿಯಾಗಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಜೆ.ಟಿ.ಪಾಟೀಲ ಹೇಳಿದರು.ಇಲ್ಲಿನ ತಹಸೀಲ್ದಾರ್ ಕಚೇರಿಯ ಆಡಳಿತ ಭವನದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಸಮಿತಿ ನೂತನ ಕಚೇರಿಯ ಪೂಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಯೋಜನೆಗಳ ನೈಜ ಫಲಾನುಭವಿಗಳಿಗೆ ದೊರೆಯಬೇಕಾಗಿದೆ. ಯೋಜನೆಯಿಂದ ಯಾರು ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ತಮಗೆ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿಭಾಸುವುದರಿಂದ ಇನ್ನೂ ಹೆಚ್ಚು ಸಂಘಟನೆಗೆ ಬಲ ಬರಲಿದೆ. ಇಲ್ಲಿ ಯಾವುದೇ ಪಕ್ಷಪಾತ ನಡೆಯ ಕೂಡದು ಪಕ್ಷಾತೀತವಾಗಿ ಎಲ್ಲ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪವಂತೆ ಮಾಡಬೇಕು ಎಂದು ತಿಳಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇರುವವರೆಗೆ ಈ ಪಂಚ ಗ್ಯಾರಂಟಿಗಳು ನಿಲ್ಲುವುದಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಹಣ ಇಲ್ಲದೇ ಬೇಕಾಬಿಟ್ಟಿಯಾಗಿ ಕಾಮಗಾರಿಗಳ ಟೆಂಡರ್ ಕರೆದು ಅವುಗಳನ್ನು ಭೂ ಪೂಜೆ ಮಾಡಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಮಾಡಿದ ಸಾಲ ಮತ್ತು ಕಾಮಗಾರಿಗಳ ಬಾಕಿ ಬಿಲ್ ನೀಡುವ ಕೆಲಸದೊಂದಿಗೆ ನಮ್ಮ ಕಾಂಗ್ರೆಸ್ ಸರ್ಕಾರ ಕೈಗೊಂಡ ಹೊಸ ಅಭಿವೃದ್ಧಿ ಕಾಮಗಾರಿಗಳು ಮತ್ತು ಗ್ಯಾರಂಟಿ ಯೋಜನೆಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಜನರಿಗೆ ಪಂಚ ಗ್ಯಾರಂಟಿ ಯೋಜನೆ ತಲುಪುವಂತೆ ಮಾಡುತ್ತಿದೆ. ಲಾಭವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಕೋರಿದರು.
ಬೀಳಗಿ ತಾಲೂಕಿನಲ್ಲಿ ಗೃಹಜ್ಯೋತಿಯಲ್ಲಿ ೩೪೩೫೬ ಕುಟುಂಬದವರು ಪ್ರತಿ ತಿಂಗಳ ೨ ನೂರು ಯುನಿಟ್‌ವರೆಗೆ ಉಚಿತ ವಿದ್ಯುತ್.ಯುವ ನಿಧಿಯಲ್ಲಿ ಡಿಗ್ರಿ ಪದವೀಧರರು ೬೫೯ ಹಾಗೂ ಡಿಪ್ಲೋಮಾ ೬ ಪದವಿಧರುರು. ಶಕ್ತಿ ಯೋಜನೆಯಲ್ಲಿ ಬೀಳಗಿ ಡಿಪೋ ಬಸ್‌ನಲ್ಲಿ ಒಂದು ವರ್ಷದಲ್ಲಿ ೧ ಕೋಟಿ ೮ ಲಕ್ಷ ಮಹಿಳೆಯರು ಉಚಿತ ಪ್ರಯಾಣದ ಶಕ್ತಿ ಯೋಜನೆ ಸಿಕ್ಕಿದೆ ಮತ್ತು ಅನ್ನಭಾಗ್ಯ ಯೋಜನೆಯಲ್ಲಿ ಬಡವರಿಗೆ ಪ್ರತಿ ತಿಂಗಳು ೧೦ ಕೆಜಿ ಅಕ್ಕಿಯನ್ನು ೧ ಲಕ್ಷ ೮ ಸಾವಿರ ಫಲಾನುಭವಿಗಳು ಪಡೆದುಕೊಂಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ಮನೆಯೊಡತಿಗೆ ೨ ಸಾವಿರದಂತೆ ೩೪,೧೫೭ ಮಹಿಳಾ ಫಲಾನುಭವಿಗಳು ಇದರ ಲಾಭವನ್ನು ಪಡೆದುಕೊಂಡಿದ್ದಾರೆ. ಇದರ ಒಟ್ಟು ₹೧೪೨.೫೨ ಕೋಟಿ ಅನುದಾನ ನೀಡಲಾಗಿದೆ. ಯೋಜನೆಯಿಂದ ವಂಚಿತರಾದವರು ಈ ಕಚೇರಿ ಸಂಪರ್ಕಿಸಿ ಅವರು ಇದರ ಲಾಭವನ್ನು ಪಡೆಯಬೇಕು ಎಂದು ಕೋರಿದರು.ಗ್ಯಾರಂಟಿ ಯೋಜನೆಯ ಸಮಿತಿ ಜಿಲ್ಲಾಧ್ಯಕ್ಷ ಡಾ.ಸಾಗರ ತೆಕ್ಕೆನ್ನವರ ಮಾತನಾಡಿ, ಜನರಿಗೆ ಹೆಚ್ಚಿನ ಚೈತನ್ಯ ನೀಡಲು ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮತ್ತು ಡಿಸಿಎಂ ಶಿವಕುಮಾರ ಅವರು ಜನಸಾಮಾನ್ಯರ ಕಲ್ಯಾಣಕ್ಕಾಗಿ ಮಹತ್ವದ ಈ ಪಂಚ ಯೋಜನೆಗಳು ತಂದು ಅವರ ಬಾಳಿಗೆ ಬೆಳಕನ್ನು ಚೆಲ್ಲಿದ್ದಾರೆ. ಅವರಿಗೆ ಬೆಂಬಲವಾಗಿ ನಿಲ್ಲುವುದು ಮಾನವ ಧರ್ಮವಾಗಿದೆ. ಪ್ರತಿಯೊಬ್ಬರು ಸರ್ಕಾರದ ಯೋಜನೆಗಳು ಸದ್ಬಳಕೆ ಮಾಡಿಕೊಳ್ಳಬೇಕು. ಗೃಹಜ್ಯೋತಿ, ಯುವ ನಿಧಿ, ಅನ್ನ ಭಾಗ್ಯ ಹಾಗೂ ಶಕ್ತಿ, ಗೃಹಲಕ್ಷ್ಮಿ ಯೋಜನೆಯಿಂದ ಎಲ್ಲ ಸಮುದಾಯದ ಜನರಿಗೆ ಹೆಚ್ಚು ಅನುಕೂಲವಾಗಿದೆ ಎಂದರು.ಗ್ಯಾರಂಟಿ ಯೋಜನೆ ತಾಲೂಕು ಸಮಿತಿ ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ, ಎಸ್.ಟಿ.ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಯಮನಪ್ಪ ರೋಳ್ಳಿ, ಜಿಪಂ ಮಾಜಿ ಅಧ್ಯಕ್ಷ ಎಂ.ಎಲ್.ಕೆಂಪಲಿಂಗನ್ನವರ, ಹಿರಿಯರಾದ ಮಲ್ಲಯ್ಯ ಕಂಬಿ, ಈರಯ್ಯ ಗೋಠೆ, ತಹಸೀಲ್ದಾರ್ ವಿನೋದ ಹತ್ತಳ್ಳಿ, ತಾಪಂ ಇಒ ಅಭಯಕುಮಾರ ಮೊರಬ, ಪಪಂ ಮುಖ್ಯಾಧಿಕಾರಿ ದೇವೆಂದ್ರ ಧನಪಾಲ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಣಮಂತ ಕಾಖಂಡಕಿ, ಮುಳಗಡೆ ಹೋರಾಟ ಸಮಿತಿ ಅಧ್ಯಕ್ಷ ಅದ್ರಶ್ಯಪ್ಪ ದೇಸಾಯಿ, ಬಿ.ಆರ್.ಸೊನ್ನದ, ತಾಪಂ ಮಾಜಿ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ, ಸಿದ್ದು ಸಾರಾವರಿ, ಸಿದ್ದು ಗಿರಗಾಂವಿ, ಪಪಂ ಮಾಜಿ ಅಧ್ಯಕ್ಷ ಅನಿಲ ಗಚ್ಚಿನಮನಿ, ಸಂಗಪ್ಪ ಕದಂಗಲ್, ಶಿವಾನಂದ ಮಾದರ, ಶ್ರೀಶೈಲ ಅಂಟಿನ, ಹಣಮಂತ ಸೂಳಿಕೇರಿ, ರೇಖಾ ಕಟ್ಟೆಪ್ಪನವರ, ಅಶೋಕ ಜೋಶಿ, ಭೀಮಶಿ ಮೊಖಾಶಿ, ಬಸು ಮೇಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಕೋಟ್...ಗ್ರಾಮಗಳ ಅಭಿವೃದ್ಧಿಗೆ ಗ್ರಾಮ ಪಂಚಾಯತಿಗಳು ಬಹಳ ಮುಖ್ಯವಾಗಿವೆ. ಆದರೆ, ಅಲ್ಲಿ ಕಾರ್ಯನಿರ್ವಹಿಸುವ ಜನಪ್ರತಿ ನಿಧಿಗಳು ಜವಾಬ್ದಾರಿಯಿಂದ ಕೆಲಸ ಮಾಡುವ ಮನಸ್ಸು ಮಾಡುವುದಿಲ್ಲ. ಅಧಿಕಾರಿಗಳು ಮತ್ತು ಪಿಡಿಒಗಳು ಹೇಳಿದಂತೆ ನಡೆದುಕೊಳ್ಳುವುದು ಸರಿಯಲ್ಲ. ತಮ್ಮ ಹಕ್ಕನ್ನು ಚಲಾಯಿಸಿ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಗಮನ ಹರಿಸಬೇಕು. -ಜೆ.ಟಿ.ಪಾಟೀಲ, ಶಾಸಕರು.