ತರೀಕೆರೆ ತಾಲೂಕಿನಲ್ಲಿ ಐದು ಗ್ಯಾರಂಟಿಗಳು ಸಂಪೂರ್ಣ ಯಶಸ್ವಿ: ಎಚ್‌.ಯು.ಫಾರೂಕ್

| Published : Mar 08 2024, 01:48 AM IST

ತರೀಕೆರೆ ತಾಲೂಕಿನಲ್ಲಿ ಐದು ಗ್ಯಾರಂಟಿಗಳು ಸಂಪೂರ್ಣ ಯಶಸ್ವಿ: ಎಚ್‌.ಯು.ಫಾರೂಕ್
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಘೋಷಿಸಿದಂತೆ ಜಾರಿಗೆ ತಂದ ಐದು ಗ್ಯಾರಂಟಿ ಯೋಜನೆಗಳು ತರೀಕೆರೆ ತಾಲೂಕಿನಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ತರೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಯು.ಫಾರೂಕ್ ಹೇಳಿದ್ದಾರೆ.

ತರೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಪಕ್ಷದ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿ

ಕನ್ನಡಪ್ರಭ ವಾರ್ತೆ, ತರೀಕೆರೆ

ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ಘೋಷಿಸಿದಂತೆ ಜಾರಿಗೆ ತಂದ ಐದು ಗ್ಯಾರಂಟಿ ಯೋಜನೆಗಳು ತರೀಕೆರೆ ತಾಲೂಕಿನಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ತರೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಯು.ಫಾರೂಕ್ ಹೇಳಿದ್ದಾರೆ.ಗುರುವಾರ ತರೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಪಕ್ಷದ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಮತ್ತು ಯುವನಿಧಿ ಯೋಜನೆಗಳು ಸಂಪೂರ್ಣ ಯಶಸ್ವಿಯಾಗಿದ್ದು, ಗೃಹಲಕ್ಷ್ಮಿ ಯೋಜನೆಯಲ್ಲಿ 50,843 ಮಹಿಳೆಯರು ನೋಂದಾಯಿಸಿಕೊಂಡಿದ್ದು, ಪ್ರತಿ ತಿಂಗಳು ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 10 ಕೋಟಿ ಹದಿನಾರು ಲಕ್ಷದ ಎಂಭತ್ತಾರು ಸಾವಿರ ರು.ಗಳಷ್ಟು ಹಣ ಪಾವತಿಯಾಗುತ್ತಿದೆ, ಗೃಹಜ್ಯೋತಿ ಯೋಜನೆ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಯೋಜನೆಯ ಫಲ ದೊರಕದಿದ್ದವರು ಕೂಡಲೇ ಶಾಸಕ ಜಿ.ಎಚ್.ಶ್ರೀನಿವಾಸ್, ತಾಲೂಕು ಕಚೇರಿ ಅಥವಾ ತಮ್ಮನ್ನು ಭೇಟಿ ಮಾಡಬೇಕೆಂದು ಮನವಿ ಮಾಡಿದರು.

ರಸ್ತೆ ಅಭಿವೃದ್ಧಿ: ಶಾಸಕ ಜಿ.ಎಚ್.ಶ್ರೀನಿವಾಸ್ ಅವರ ಪ್ರಯತ್ನದಿಂದಾಗಿ ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 206 ರಸ್ತೆ ಅಭಿವೃದ್ಧಿಗೆ 25 ಕೋಟಿ ರು.ಮಂಜೂರಾಗಿದೆ. ನಗರೋತ್ಥಾನ ಯೋಜನೆಯಲ್ಲಿ ಫುಟ್ ಬಾತ್ ಅಭಿವೃದ್ಧಿಗೆ 5 ಕೋಟಿ ರು.ಮಂಜೂರಾಗಿದ್ದು, ಡಿಪಿಆರ್ ಆಗಿದ್ದು ಟೆಂಡರ್ ಕರೆಯುವ ಹಂತದಲ್ಲಿದೆ, 10 ಕೋಟಿ ರು. ಗಳಲ್ಲಿ ಪಟ್ಟಣದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆ ಕಾರ್ಯ ಅಬ್ಬಿನ ಹೊಳಲು ಬಳಿ ಸ್ವಲ್ಪ ತಡೆ ಉಂಟಾಗಿತ್ತು, ಇದೀಗ ಶಾಸಕ ಜಿ.ಎಚ್. ಶ್ರೀನಿವಾಸ್ ರೈತರ ಪರವಾಗಿ ನಿಂತಿದ್ದಾರೆ. ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಖಂಡಿತವಾಗಿ ಗೆಲುವು ಸಾಧಿಸುತ್ತದೆ ಎಂದು ಹೇಳಿದರು.

ಮನವಿಃ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಅಂಶುಮಂತ್ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮತ್ತು ಮುಖಂಡರ ಸಹಕಾರದಿಂದ ತಳಮಟ್ಟದಿಂದ ಪಕ್ಷವನ್ನು ಕಟ್ಟಿ ಬೆಳೆಸಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಕಾರಣರಾಗಿದ್ದಾರೆ. ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದಿಂದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಆಂಶುಮಂತ್ ಗೆ ಪಕ್ಷದ ಹೈಕಮಾಂಡ್ ಟಿಕೆಟು ನೀಡಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ನಗರಾಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಮಾತನಾಡಿ, ಶಾಸಕ ಜಿ.ಎಚ್.ಶ್ರೀನಿವಾಸ್ ತರೀಕೆರೆ ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ನಗರೋತ್ಧಾನ ಯೋಜನೆಯಲ್ಲಿ 4 ಕೋಟಿ ರು. ಮಂಜೂರು ಮಾಡಿಸಿದ್ದು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಪುರಸಭೆ ಹಳೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪುರಸಭೆ ನೂತನ ಕಟ್ಟಡ ನಿರ್ಮಾಣಕ್ಕೆ ಹತ್ತು ಕೋಟಿ ರು.ಗಳ ಪ್ರಸ್ತಾವನೆ ಸರ್ಕಾರಕ್ಕೆ ಕಳುಹಿಸಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಸಮಿತಿ ಎಸ್.ಸಿ.ಸೆಲ್ ಅಧ್ಯಕ್ಷ ಬಿ.ಜೆ.ಗೌರೀಶ್, ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇರ್ಷಾದ್, ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಆದಿಲ್ ಪಾಷ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

7ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಏರ್ಪಾಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಯು.ಫಾರೂಕ್ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಸಮಿತಿ ನಗರಾಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಕಾಂಗ್ರೆಸ್ ಸಮಿತಿ ಎಸ್.ಸಿ.ಸೆಲ್ ಅಧ್ಯಕ್ಷ ಬಿ.ಜೆ.ಗೌರೀಶ್, ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇರ್ಷಾದ್, ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಆದಿಲ್ ಪಾಷ ಇದ್ದಾರೆ.