ಜನರಿಗೆ ಸಕಾಲಕ್ಕೆ ತಲುಪುತ್ತಿರುವ ಪಂಚ ಗ್ಯಾರಂಟಿಗಳು: ಶ್ರೇಣಿಕಕುಮಾರ ಧೋಕಾ

| Published : Apr 05 2025, 12:45 AM IST

ಜನರಿಗೆ ಸಕಾಲಕ್ಕೆ ತಲುಪುತ್ತಿರುವ ಪಂಚ ಗ್ಯಾರಂಟಿಗಳು: ಶ್ರೇಣಿಕಕುಮಾರ ಧೋಕಾ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರದ ಮಹತ್ವದ ಐದು ಗ್ಯಾರಂಟಿಗಳು ಸಕಾಲಕ್ಕೆ ಜನರಿಗೆ ತಲುಪುತ್ತಿವೆ. ಸಂಬಂಧಪಟ್ಟ ಐದು ಇಲಾಖೆ ಅಧಿಕಾರಿಗಳು ಹಾಗೂ ಗ್ಯಾರಂಟಿ ಯೋಜನೆ ನೋಡೆಲ್ ಅಧಿಕಾರಿಗಳು ಉತ್ತಮ‌ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆಂದು ಗ್ಯಾರಂಟಿ ಯೋಜನೆ ಜಿಲ್ಲಾ ಸಮಿತಿ ಅಧ್ಯಕ್ಷ ಶ್ರೇಣಿಕಕುಮಾರ ಧೋಕಾ ಅಭಿಮತ ವ್ಯಕ್ತಪಡಿಸಿದರು.

ಪ್ರಗತಿ ಪರಿಶೀಲನಾ ಸಭೆ । ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಆಯೋಜನೆ

ಕನ್ನಡಪ್ರಭ ವಾರ್ತೆ ಯಾದಗಿರಿ

ರಾಜ್ಯ ಸರ್ಕಾರದ ಮಹತ್ವದ ಐದು ಗ್ಯಾರಂಟಿಗಳು ಸಕಾಲಕ್ಕೆ ಜನರಿಗೆ ತಲುಪುತ್ತಿವೆ. ಸಂಬಂಧಪಟ್ಟ ಐದು ಇಲಾಖೆ ಅಧಿಕಾರಿಗಳು ಹಾಗೂ ಗ್ಯಾರಂಟಿ ಯೋಜನೆ ನೋಡೆಲ್ ಅಧಿಕಾರಿಗಳು ಉತ್ತಮ‌ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆಂದು ಗ್ಯಾರಂಟಿ ಯೋಜನೆ ಜಿಲ್ಲಾ ಸಮಿತಿ ಅಧ್ಯಕ್ಷ ಶ್ರೇಣಿಕಕುಮಾರ ಧೋಕಾ ಅಭಿಮತ ವ್ಯಕ್ತಪಡಿಸಿದರು.

ಇಲ್ಲಿನ‌ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಕ್ತಿ ಯೋಜನೆಯಡಿ ಕಳೆದ 2023ರ ಜೂನ್ ತಿಂಗಳಿಂದ ಪ್ರಸ್ತಕ ಸಾಲಿನ ಫೆ.16ರ ವರೆಗೂ ಕೆಕೆಆರ್‌ಟಿಸಿ ಯಾದಗಿರಿ ವಿಭಾಗದಿಂದ ಸಂಚರಿಸಿದ ಬಸ್‌ಗಳಲ್ಲಿ ಒಟ್ಟು 4,30,54,001 ಕೋಟಿ ಮಹಿಳೆಯರು ಪ್ರಯಾಣ ಮಾಡಲಾಗಿದ್ದು, ಇಲ್ಲಿಯವರೆಗೂ 145.04 ಕೋಟಿ ರು. ಆದಾಯ ಸಂಗ್ರಹವಾಗಿದೆ ಎಂದು ಧೋಕಾ ಹೇಳಿದರು.

ಅನ್ನಭಾಗ್ಯ ಯೋಜನೆಯಡಿ ಐದು ಕೆಜಿ ಆಹಾರ ಧ್ಯಾನದ ಜೊತೆಗೆ ಜಿಲ್ಲೆಯಲ್ಲಿರುವ ಎಎವೈ, ಬಿಪಿಎಲ್ ಪಡಿತರ ಕಾರ್ಡಿನ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ 5 ಕೆಜಿ ಅಕ್ಕಿಯ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸಲಾಗುತ್ತಿದೆ. ಎಎವೈ, ಬಿಪಿಎಲ್ ಪಡಿತರ ಚೀಟಿಗಳ ಸಂಖ್ಯೆ 2,62,111 ಮತ್ತು ಫಲಾನುಭವಿಗಳ ಸಂಖ್ಯೆ 9,94,908 ಇದ್ದು, ವಿವಿಧ ಕಾರಣದಿಂದ ಹಣ ವರ್ಗಾವಣೆ ಆಗದೆ ಬಾಕಿ ಇರುವ ಪಡಿತರ ಚೀಟಿಗಳ ಸಂಖ್ಯೆ 25460 ಇದೆ. 2024ರ ಅಕ್ಟೋಬರ್ ತಿಂಗಳಿಂದ ಇಲ್ಲಿಯವರೆಗೂ ಈ ಯೋಜನೆ ಫಲಾನುಭವಿಗಳಿಗೆ ಸಹಾಯಧನ ಬಂದಿಲ್ಲ ಎಂದು ಹೇಳಿದರು. ಗೃಹ ಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ ನೋಂದಣಿಯಾಗಿರುವ ಒಟ್ಟು 2,04,825 ಫಲಾನುಭವಿಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ ಎಂದರು.

ಗೃಹಲಕ್ಷ್ಮಿ ಯೋಜನೆಯಡಿ ಕಳೆದ ಅಕ್ಟೋಬರ್ ತಿಂಗಳವರೆಗೂ 2,55,982 ಫಲಾನುಭವಿಗಳು ನೋಂದಣಿ ಮಾಡಿಸಿದ್ದು, ಈಗಾಗಲೇ 2,49,104 ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.

ಅದರಂತೆಯೇ ಯುವನಿಧಿ ಯೋಜನೆಯಡಿ ಕಳೆದ 2024 ಡಿಸೆಂಬರ ದಿಂದ 2025ರ ಫೆ 18ರವರೆಗೆ 7378 ಫಲಾನುಭವಿಗಳು ನೊಂದಣಿ ಮಾಡಿದ್ದು, ಪದವಿ ಮುಗಿಸಿದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪ್ರಚಾರ ಮಾಡುತ್ತಿದ್ದಾರೆಂದು ಹೇಳಿದರು.

ಸಮಿತಿ ಉಪಾಧ್ಯಕ್ಷರಾದ ಹಣಮಂತ ಕಾನಳ್ಳಿ, ರಮೇಶ ದೊರಿ, ಬಸವರಾಜ ಬಿಳ್ಹಾರ್, ಹಳ್ಳಪ್ಪ ಹವಲ್ದಾರ್ , ನೊಡೆಲ್ ಅಧಿಕಾರಿ ವಿಜಯಕುಮಾರ ಸೇರಿದಂತೆಯೇ ಈ ಐದು ಯೋಜನೆಗಳ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.