ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಯಾವುದೇ ಕಾರಣಕ್ಕೂ ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಐದು ವರ್ಷಗಳ ಕಾಲ ಮುಂದುವರಿಯುತ್ತದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜ್ ಸ್ಪಷ್ಟಪಡಿಸಿದರು.ಶಕ್ತಿ ಯೋಜನೆ ಮರುಪರಿಶೀಲನೆ ಮಾಡುತ್ತೇವೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ವಿಚಾರಕ್ಕೆ ಶುಕ್ರವಾರ ಮಡಿಕೇರಿಯಲ್ಲಿ ಪ್ರತಿಕ್ರಿಯೆ ನೀಡಿದರು. ಗ್ಯಾರಂಟಿ ಯೋಜನೆಗಳಿಗೆ ಈಗಾಗಲೇ 52 ಸಾವಿರ ಕೋಟಿ ರುಪಾಯಿ ಮೀಸಲಿರಿಸಲಾಗಿದೆ. ನಾವು ಕೊಟ್ಟಿರುವ ಮಾತಿನಂತೆ ಐದು ವರ್ಷ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತದೆ. ಕೆಲವು ಮಹಿಳೆಯರು ನಾವು ದುಡ್ಡುಕೊಟ್ಟು ಟಿಕೆಟ್ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಡಿಸಿಎಂ ಅದರ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ. ಯಾವುದೇ ಕಾರಣಕ್ಕೂ ಗೊಂದಲ ಮೂಡಿಸಬಾರದು ಎಂದು ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಹೇಳಿದ್ದಾರೆ. ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.ವಕ್ಫ್ ಬೋರ್ಡ್‌ನಿಂದ ರಾಜ್ಯದ ರೈತರಿಗೆ ನೋಟಿಸ್ ನೀಡಿರುವ ವಿಚಾರ ಕುರಿತು ಮಾತನಾಡಿದ ಸಚಿವ ಬೋಸರಾಜು, ಇದು ಇವತ್ತು ಆಗಿರುವುದಲ್ಲ. ಬಿಜೆಪಿ ಸರ್ಕಾರ ಇದ್ದಾಗಲೇ ರೈತರಿಗೆ ನೋಟಿಸ್ ನೀಡಲಾಗಿದೆ. ಇದಕ್ಕೆ ನನ್ನಲ್ಲಿ ಸಾಕ್ಷ್ಯ ಇದೆ. ವಿಜಯಪುರದಲ್ಲಿ ಪ್ರಥಮವಾಗಿ ನೋಟಿಸ್ ನೀಡಿದ್ದು ಬಿಜೆಪಿ ಸರ್ಕಾರ. ಕೆಲವು ಕಡೆ ನೋಟಿಸ್ ನೀಡಿರುವುದಕ್ಕೆ ಸಿಎಂ ಸ್ಪಷ್ಟನೆ ನೀಡಿದ್ದಾರೆ. ಈಗಾಗಲೇ ಕ್ಯಾಬಿನೆಟ್‌ನಲ್ಲಿ ಈ ವಿಷಯ ಚರ್ಚೆಯಾಗಿದೆ. ಅಧಿಕಾರಗಳ ಎಡವಟ್ಟಿನಿಂದ ಆಗಿದೆಯೋ ಅಥವಾ ಯಾವುದರಿಂದ ಆಗಿದೆ ಎನ್ನುವುದನ್ನು ತನಿಖೆ ಮಾಡುವುದಕ್ಕೂ ಸೂಚಿಸಲಾಗಿದೆ. 2- 3 ಕಡೆ ಆಗಿರುವುದನ್ನು ಬಿಜೆಪಿ, ಜೆಡಿಎಸ್‌ನವರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ಇದೆಲ್ಲಾ ಆಗಿರುವುದು ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಎಂದು ಹೇಳಿದರು.ಅಹಿತಕರ ಘಟನೆ ನಡೆಯದಂತೆ ಭದ್ರತೆ: ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್ ಕಾರ್ಯಕರ್ತರಿಗೆ ಪೊಲೀಸ್ ಭದ್ರತೆ ವಿಚಾರದ ಬಗ್ಗೆ ಮಾತನಾಡಿದ ಸಚಿವ ಬೋಸರಾಜು, ಅದು ಎಂಇಎಸ್‌ಗೆ ಭದ್ರತೆ ನೀಡಿರುವುದಲ್ಲ. ಬದಲಾಗಿ ಅಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ಹಿಂದೆ ಬೆಳಗಾವಿ ಸೌಧದ ಮೇಲೆ ಬಾವುಟ ಹಾರಿಸಿದ್ದರು. ಮತ್ತೆ ಹಾಗೆ ಆಗಬಾರದೆಂದು ಪೊಲೀಸರು ಎಚ್ಚರ ವಹಿಸಿದ್ದಾರೆ. ನಾಡಿನ ಗಡಿನಾಡು ಪ್ರದೇಶಗಳಿಗೆ ಯಾವುದೇ ಸಮಸ್ಯೆ ಬರದಂತೆ ಸಿಎಂ ಸೂಚಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಚುನಾವಣೆ ನಡೆಯುತ್ತಿದೆ. ಹೀಗಾಗಿ ಜನರ ಭಾವನೆ ಕೆರಳಿಸಲು ಹೀಗೆಲ್ಲಾ ಮಾಡುತ್ತಿದ್ದಾರೆ. ಆದರೆ ನಮ್ಮ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದರು.