ಜಮೀನುಗಳ ಕಡೆ ಹೋದ ಗ್ರಾಮಗಳ ರೈತರು ಆನೆಗಳನ್ನು ಕಂಡು ಭಯ ಭೀತಿಗೊಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಉಪ್ಪಿನಕೆರೆ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಶುಕ್ರವಾರ ಐದು ಕಾಡಾನೆಗಳು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಎರಡು ಸಲಗ ಹಾಗೂ ಮೂರು ಹೆಣ್ಣಾನೆಗಳು ರೈತರ ಜಮೀನುಗಳಿಗೆ ಲಗ್ಗೆ ಇಟ್ಟು ನೂರಾರು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಕಬ್ಬು, ಬಾಳೆ, ಅಡಿಕೆ, ತೆಂಗು ಮತ್ತಿತರ ಬೆಳೆಗಳನ್ನು ನಾಶಪಡಿಸಿದ್ದು, ಲಕ್ಷಾಂತರ ರು. ಹಾನಿ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ಅಂದಾಜು ಮಾಡಲಾಗಿದೆ.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೊಂಬಿನ ಕಲ್ಲು ಅರಣ್ಯ ಧಾಮದ ಆನೆ ಕಾರಿಡಾರ್ ನಿಂದ ಆಹಾರ ಅರಸಿ ವಲಸೆ ಬಂದಿರುವ ಎರಡು ಸಲಗ ಮತ್ತು ಮೂರು ಹೆಣ್ಣಾನೆಗಳು ಗುರುವಾರ ಕೆ.ಎಂ.ದೊಡ್ಡಿ ಸಮೀಪದ ಕೆ.ಪಿ.ದೊಡ್ಡಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿದ್ದವು.

ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸುವ ಮೂಲಕ ಹಿಂಡನ್ನು ಇಗ್ಗಲೂರು ಮೂಲಕ ಮತ್ತೆ ಚನ್ನಪಟ್ಟಣ ಅರಣ್ಯ ಪ್ರದೇಶಕ್ಕೆ ಹಿಮ್ಮಟ್ಟಿಸಲು ಪ್ರಯತ್ನ ನಡೆಸಿದ್ದರು. ನಂತರ ಅರಣ್ಯಇಲಾಖೆ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನಿಸಿದ ಆನೆಗಳು ಮಾರ್ಗ ಬದಲಿಸಿ ರಾತ್ರಿ ವೇಳೆ ಮದ್ದೂರು ತಾಲೂಕಿನ ಗೊರವನಹಳ್ಳಿಯ ಹೊರವಲಯದಲ್ಲಿ ಕಾಣಿಸಿಕೊಂಡ ಬಳಿಕ ಬೆಳಗ್ಗೆ ಮತ್ತೆ ಉಪ್ಪಿನಕೆರೆ ಗ್ರಾಮದ ಕಡೆಗೆ ಬಂದು ಚನ್ನಸಂದ್ರ ಮತ್ತು ಉಪ್ಪಿನಕೆರೆ ಗ್ರಾಮದ ಮಾರ್ಗದಲ್ಲಿರುವ ಪಟಲದಮ್ಮ ದೇವಸ್ಥಾನದ ರಸ್ತೆಯ ಸಿದ್ದರಾಜು ಅವರ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿದ್ದವು.

ಜಮೀನುಗಳ ಕಡೆ ಹೋದ ಗ್ರಾಮಗಳ ರೈತರು ಆನೆಗಳನ್ನು ಕಂಡು ಭಯ ಭೀತಿಗೊಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮದ್ದೂರು ವಲಯ ಅರಣ್ಯಾಧಿಕಾರಿ ಗವಿಯಪ್ಪ ಹಾಗೂ ಮಳವಳ್ಳಿ ಅರಣ್ಯಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹುಣಸೂರು ಆನೆ ಕಾರ್ಯಪಡೆ ತಂಡವನ್ನು ಸ್ಥಳಕ್ಕೆ ಕರೆಸಿಕೊಂಡು ಸ್ಥಳೀಯ ಪೊಲೀಸರ ಬೆಂಬಲದೊಂದಿಗೆ ಆನೆಗಳ ಹಿಂಡು ಗ್ರಾಮದೊಳಗೆ ನುಗ್ಗಿ ಯಾವುದೇ ಪ್ರಾಣ ಹಾನಿ ಮಾಡದಂತೆ ಗ್ರಾಮಗಳ ನಾಲ್ಕು ದಿಕ್ಕುಗಳಲ್ಲಿ ರಸ್ತೆ ಬಂದ್ ಮಾಡುವ ಮೂಲಕ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.

ಸದ್ಯ ಉಪ್ಪಿನಕೆರೆ ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು ರಾತ್ರಿ ವೇಳೆ ಏರ್ ಗನ್ ಮತ್ತು ಪಟಾಕಿ ಸಿಡಿಸಿ ಮತ್ತೆ ಕಾಡಿಗಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಅಧಿಕಾರಿ ಗವಿಯಪ್ಪ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಯಶವಂತ ಕುಮಾರ್, ಮದ್ದೂರು ಸಿಪಿಐ ನವೀನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ರಘು, ಸಹಾಯಕ ಅರಣ್ಯಾಧಿಕಾರಿ ಬಿ.ಮಹದೇವಸ್ವಾಮಿ, ಉಪ ವಲಯ ಅರಣ್ಯಾಧಿಕಾರಿ ನವೀನ್ ಕುಮಾರ, ಮುರಳಿ ನಾಯಕ್, ಕಾಂತರಾಜು, ಅರ್ಜುನ್, ವೀರೇಶ್ ಅಂಗಡಿ, ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟು ಸಾರ್ವಜನಿಕರು ಆನೆಗಳಿಗೆ ಯಾವುದೇ ತೊಂದರೆ ಮಾಡದಂತೆ ಸೂಚನೆ ನೀಡಿದ್ದಾರೆ.