ನಿಂತಿದ್ದ ಲಾರಿಗೆ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತದಲ್ಲಿ ಐವರ ಬಲಿ

| N/A | Published : Mar 10 2025, 12:18 AM IST / Updated: Mar 10 2025, 10:17 AM IST

ನಿಂತಿದ್ದ ಲಾರಿಗೆ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತದಲ್ಲಿ ಐವರ ಬಲಿ
Share this Article
  • FB
  • TW
  • Linkdin
  • Email

ಸಾರಾಂಶ

ನಿಂತಿದ್ದ ಲಾರಿಗೆ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಐವರು ಮೃತಪಟ್ಟ ಘಟನೆ ಚಿತ್ರದುರ್ಗ ಹೊರವಲಯ ರಾಷ್ಟ್ರೀಯ ಹೆದ್ದಾರಿ 48ರ ಹೊಸ ಬೈಪಾಸ್ ತಮಟಕಲ್ಲು ಬಳಿ ಭಾನುವಾರ ನಡೆದಿದೆ. ಘಟನೆಯಲ್ಲಿ ಓರ್ವನಿಗೆ ಗಾಯಗಳಾಗಿವೆ.

 ಚಿತ್ರದುರ್ಗ : ನಿಂತಿದ್ದ ಲಾರಿಗೆ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಐವರು ಮೃತಪಟ್ಟ ಘಟನೆ ಚಿತ್ರದುರ್ಗ ಹೊರವಲಯ ರಾಷ್ಟ್ರೀಯ ಹೆದ್ದಾರಿ 48ರ ಹೊಸ ಬೈಪಾಸ್ ತಮಟಕಲ್ಲು ಬಳಿ ಭಾನುವಾರ ನಡೆದಿದೆ. ಘಟನೆಯಲ್ಲಿ ಓರ್ವನಿಗೆ ಗಾಯಗಳಾಗಿವೆ.

ಮೃತಪಟ್ಟವರನ್ನು ಬೆಂಗಳೂರು ಬಿಎಂಟಿಸಿ ನಿವೃತ್ತ ನೌಕರ ಜೆ.ಸಿ.ಶಾಂತಮೂರ್ತಿ(60), ವಿದ್ಯಾರಣ್ಯಪುರದ ಎನ್.ಎಸ್. ರುದ್ರಸ್ವಾಮಿ (69), ಶ್ರೀನಿವಾಸ್, ಚಂದ್ರಹಾಸ್ (67) ಹಾಗೂ ಮಲ್ಲಿಕಾರ್ಜುನ (70) ಎಂದು ಗುರುತಿಸಲಾಗಿದೆ.

ಡಿಕ್ಕಿಯಾದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಗಾಯಾಳು ಚಿತ್ರದುರ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾವಣಗೆರೆ ಕಡೆಯಿಂದ ಬೆಂಗಳೂರ ಕಡೆಗೆ ಬರುತ್ತಿದ್ದ ಇನ್ನೋವಾ ಕಾರು ತಮಟಕಲ್ಲು ಬಳಿ ಹೆದ್ದಾರಿ ಬದಿ ಮೆಕ್ಕೆಜೋಳ ತುಂಬಿಕೊಂಡು ನಿಂತಿದ್ದ ತಮಿಳುನಾಡು ಮೂಲದ ಲಾರಿಗೆ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಉತ್ತರ ಕರ್ನಾಟಕ ಪ್ರವಾಸ ತೆರಳಿದ್ದ ಮೃತರು ನಿವೃತ್ತ ನೌಕರರು, ಮುಂಜಾನೆಯ ವಾಯುವಿಹಾರದ ಗೆಳೆಯರು ಎಂದು ತಿಳಿದು ಬಂದಿದೆ.

ಅಪಘಾತದ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್‍ಕುಮಾರ್ ಬಂಡಾರು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಡಿವೈಎಸ್‍ಪಿ ದಿನಕರ್ ಸೇರಿ ಗ್ರಾಮಾಂತರ ಠಾಣೆ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಸ್-ಕಾರು ಮುಖಾಮುಖಿ ಡಿಕ್ಕಿ; ಕಾರಲ್ಲಿದ್ದ ಇಬ್ಬರ ಸಜೀವ ದಹನ 

ಖಾಸಗಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಕಾರು ಹೊತ್ತಿ ಉರಿದಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಗೋಪಲ್ಲಿಯಲ್ಲಿ ಭಾನುವಾರ ನಡೆದಿದೆ. ಕಾರಿನಲ್ಲಿದ್ದ ಇಬ್ಬರು ಸಜೀವ ದಹನವಾಗಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂಲತಃ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಚೌಟಪಲ್ಲಿ ಗ್ರಾಮದ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ ಧನಂಜಯ ರೆಡ್ಡಿ (32), ಅವರ ತಾಯಿ ಕಳಾವತಿ (52) ಕಾರಿನಲ್ಲೇ ಸುಟ್ಟು ಕರಕಲಾಗಿದ್ದಾರೆ. ಧನಂಜಯ ರೆಡ್ಡಿಯವರ ಪತ್ನಿ ಶೋಭಾರಾಣಿ, ಮಗ ಮನವೀತ್‌ ರೆಡ್ಡಿ ಹಾಗೂ ಇವರ ಸಂಬಂಧಿ ಮಹಾಲಕ್ಷ್ಮೀ (72) ಎಂಬುವರು ಗಾಯಗೊಂಡಿದ್ದಾರೆ.ಮದನಪಲ್ಲಿ-ಕಡಪ ರಸ್ತೆಯ ಗೋಪಲ್ಲಿ ಗೇಟ್‌ ಬಳಿ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ಕಾರು ಬೆಂಕಿಯಿಂದ ಹೊತ್ತಿ ಉರಿದಿದ್ದರೆ, ಬಸ್​​ ಪಲ್ಟಿಯಾಗಿ ಉರುಳಿ ಬಿದ್ದಿದೆ. ಬಸ್‌ನಲ್ಲಿ ಇದ್ದ ಹಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅಪಘಾತವಾದ ಕೂಡಲೇ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪೋಲಿಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.