ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ

ರಾಜ್ಯ ಸಚಿವ ಸಂಪುಟದಲ್ಲಿ ಐವರು ಮುಸ್ಲಿಂ ಶಾಸಕರಿಗೆ ಸ್ಥಾನ ನೀಡಬೇಕು ಹಾಗೂ ಹಿರಿಯ ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಡಿಸಿಎಂ ಹುದ್ದೆ ನೀಡಬೇಕು ಎಂದು ಒತ್ತಾಯಿಸಿ ನಗರದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದರು.ನಗರದ ಜಾಮೀಯ ಮಸೀದಿಯಲ್ಲಿ ನಮಾಜ್ ನಂತರ ಜಮಾಯಿಸಿದ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಬಾಂಧವರು, ನೂತನ ಸಚಿವ ಸಂಪುಟದ ಮೊದಲ ಪಟ್ಟಿಯಲ್ಲಿ ಕೇವಲ ಒಬ್ಬ ಮುಸ್ಲಿಂ ಶಾಸಕರಿಗೆ ಮಾತ್ರ ಸ್ಥಾನ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಜಮೀರ್ ಅಹ್ಮದ್‌, ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಸೇರಿ ಒಟ್ಟು ಐವರು ಮುಸ್ಲಿಂ ಪ್ರತಿನಿಧಿಗಳಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ಎಸ್.ಎಂ. ರಫೀಕ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಮುಸ್ಲಿಂ ಸಮುದಾಯದ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ಸಚಿವ ಸಂಪುಟದಲ್ಲಿ ಕನಿಷ್ಠ ಐದು ಮುಸ್ಲಿಂ ಶಾಸಕರಿಗೆ ಸ್ಥಾನ ನೀಡಬೇಕು ಹಾಗೂ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಕಲ್ಪಿಸಬೇಕು. ಕಳೆದ ಮೂರು ವರ್ಷಗಳಿಂದ ಸಚಿವರಾಗಿ ಉತ್ತಮ ಕಾರ್ಯನಿರ್ವಹಣೆ ನೀಡಿರುವ ಜಮೀರ್ ಅವರಿಗೆ ಮೊದಲ ಪಟ್ಟಿಯಲ್ಲೇ ಸ್ಥಾನ ದೊರೆಯಬೇಕಾಗಿತ್ತು. ಆದರೆ ಕೆಲವು ಪಿತೂರಿಗಳಿಂದ ಅದು ಸಾಧ್ಯವಾಗಿಲ್ಲವೆಂದು ಕಾಣುತ್ತದೆ. ಕೂಡಲೇ ಅವರಿಗೆ ಡಿಸಿಎಂ ಹುದ್ದೆ ನೀಡುವುದರ ಜೊತೆಗೆ ಇನ್ನೂ ನಾಲ್ವರು ಮುಸ್ಲಿಂ ಪ್ರತಿನಿಧಿಗಳನ್ನು ಸಚಿವ ಸಂಪುಟಕ್ಕೆ ಸೇರಿಸಬೇಕು.ಇದು ರಾಜ್ಯದ ಸುಮಾರು 80 ಲಕ್ಷ ಮುಸ್ಲಿಂ ಸಮುದಾಯದ ಒತ್ತಾಯವಾಗಿದೆ ಎಂದು ಹೇಳಿದರು.ನಗರಸಭೆ ಮಾಜಿ ಸದಸ್ಯ ಜಮಾಅತ್ ಅಹ್ಲ್ ಇಸ್ಲಾಂ ಸದಸ್ಯ ಮಹಮ್ಮದ್ ಜಾಫರ್ ಮಾತನಾಡಿ, ಮುಸ್ಲಿಂ ಸಮುದಾಯವು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದೆ. ಮಾಜಿ ಸಿಎಂಗಳಾದ ಎಸ್.ಎಂ. ಕೃಷ್ಣ ಹಾಗೂ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಮುಸ್ಲಿಂ ಶಾಸಕರಿಗೆ ಸಚಿವ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿತ್ತು. ಆದರೆ ಮುಖ್ಯಮಂತ್ರಿ ಬದಲಾವಣೆಯ ನಂತರದ ಮೊದಲ ಪಟ್ಟಿಯಲ್ಲಿ ಕೇವಲ ಒಬ್ಬರಿಗೆ ಮಾತ್ರ ಸ್ಥಾನ ನೀಡಿರುವುದು ಬೇಸರ ತಂದಿದೆ ಎಂದರು.ಜಮಾಅತೆ ಅಹ್ಲೆ ಇಸ್ಲಾಂ ಅಧ್ಯಕ್ಷ ಜಾವಿದ್ ಪಾಷಾ ಮಾತನಾಡಿ, ಹಿಂದಿನ ಕಾಂಗ್ರೆಸ್ ಸರ್ಕಾರಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಸಮರ್ಪಕ ಪ್ರಾತಿನಿಧ್ಯ ನೀಡಲಾಗುತ್ತಿತ್ತು. ಆದರೆ ಈ ಬಾರಿ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಿರುವುದು ದುರದೃಷ್ಟಕರ. ಕಾಂಗ್ರೆಸ್ ಹೈಕಮಾಂಡ್ ಈ ಬಗ್ಗೆ ಗಮನಹರಿಸಿ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಮಾಅತೆ ಅಹ್ಲೆ ಇಸ್ಲಾಂ ಕಾರ್ಯದರ್ಶಿ ಮಹಮ್ಮದ್ ಫಹಾದ್, ಉಪಾಧ್ಯಕ್ಷ ಸಾಧಿಕ್ ಅಲಿ, ಸದಸ್ಯರಾದ ನಯಾಜ್ ಪಾಷಾ, ಆಸೀಫ್ ಪಾಷಾ,ಇಸ್ಮಾಯಿಲ್ ಖಾನ್, ಅತಾವುಲ್ಲಾ, ಸಮಿವುಲ್ಲಾ(ಸಮ್ಮು) ಹಾಗೂ ಸಮುದಾಯದ ಪ್ರಮುಖರಾದ ಬಿ.ಅಜ್ಗರ್, ಫಜಿಲ್ ಖಾನ್, ಮಹಮ್ಮದ್ ತೌಸಿಫ್ ಸೇರಿದಂತೆ ಮತ್ತಿತರರು ಇದ್ದರು.

ಸಿಕೆಬಿ-3

ನಗರದ ಜಾಮೀಯ ಮಸೀದಿಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಐದು ಮುಸ್ಲಿಂ ಶಾಸಕರಿಗೆ ಸಚಿವ ಸ್ಥಾನ, ಜಮೀರ್‌ ಅವರಿಗೆ ಡಿಸಿಎಂ ಹುದ್ದೆ ನೀಡಲು ಆಗ್ರಹಿಸಿ ಪ್ರತಿಭಟನೆ ನಡೆಸಿದರು