ಐದಾಣೆ ಮಳೆ, ನಾಲ್ಕಾನೆ ಬೆಳೆ

| Published : Mar 13 2024, 02:09 AM IST

ಸಾರಾಂಶ

ಜಾತ್ರೆ ವೇಳೆ ಇಲ್ಲಿ ನುಡಿಯುವ ಕಾಲಜ್ಞಾನದ ಕಾರ್ಣಿಕ ಖ್ಯಾತಿ ಪಡೆದಿದ್ದು, ಈ ಬಾರಿ ನುಡಿದ ಕಾಲಜ್ಞಾನದ ನುಡಿಯಲ್ಲಿ ರಾಜಕೀಯದಲ್ಲಿ ಉತ್ತಮ ವ್ಯಕ್ತಿಗೆ ಗೆಲುವು ಆಗುತ್ತದೆ ಎಂದು ಬಬಲಾದಿ ಮಠಾಧೀಶರು ಮತ್ತು ಕಾರ್ಣಿಕರಾದ ಸಿದ್ರಾಮಯ್ಯ ಹೊಳಿಮಠ ಭವಿಷ್ಯ ನುಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಪ್ರತಿ ವರ್ಷದಂತೆ ಈ ಬಾರಿಯೂ ಶಿವರಾತ್ರಿ ಬಳಿಕ ಸುಕ್ಷೇತ್ರ ಬಬಲಾದಿ ಸದಾಶಿವ ಮುತ್ಯಾನ ಜಾತ್ರೆ ಅದ್ಧೂರಿಯಾಗಿ ಜರುಗಿದೆ.

ಜಾತ್ರೆ ವೇಳೆ ಇಲ್ಲಿ ನುಡಿಯುವ ಕಾಲಜ್ಞಾನದ ಕಾರ್ಣಿಕ ಖ್ಯಾತಿ ಪಡೆದಿದ್ದು, ಈ ಬಾರಿ ನುಡಿದ ಕಾಲಜ್ಞಾನದ ನುಡಿಯಲ್ಲಿ ರಾಜಕೀಯದಲ್ಲಿ ಉತ್ತಮ ವ್ಯಕ್ತಿಗೆ ಗೆಲುವು ಆಗುತ್ತದೆ ಎಂದು ಬಬಲಾದಿ ಮಠಾಧೀಶರು ಮತ್ತು ಕಾರ್ಣಿಕರಾದ ಸಿದ್ರಾಮಯ್ಯ ಹೊಳಿಮಠ ಭವಿಷ್ಯ ನುಡಿದಿದ್ದಾರೆ.

ವ್ಯಾಪಾರಸ್ಥರಿಗೆ ಮಧ್ಯಮ ಫಲ, ಕುಲ-ಜಾತಿಗಳಲ್ಲಿ ಕಲಹ ಜಾಸ್ತಿ, ಉತ್ತರಕ್ಕೆ ಬರ ಹಾಗೂ ಕೆಡಕು ಇದೆ. ದೊಡ್ಡ ಮಹಾತ್ಮರ ಯೋಗ ಅಳಿಯುವುದು ಎಂದು ಬೆಂಕಿ ಭವಿಷ್ಯ ನುಡಿದಿದ್ದಾರೆ. ಅಲ್ಲಲ್ಲಿ ರಾಜಕೀಯ ಗೊಂದಲಗಳು ಉಂಟಾಗುತ್ತವೆ. ಭಯೋತ್ಪಾದನೆ, ಧರ್ಮ ಧರ್ಮಗಳ ಮಧ್ಯೆ ಕಿತ್ತಾಟ ಜಾಸ್ತಿ ಆಗುತ್ತದೆ. ಉತ್ತಮ ಅರ್ಹ ವ್ಯಕ್ತಿಯ ಮರ್ದನ ಆಗುತ್ತದೆ. ಗಡಿ ಕಾಯುವ ಯೋಧರಿಗೆ ನೋವು ಇದೆ. ಕಣ್ಣಿನ ಕಾಯಿಲೆಗಳು ಜಾಸ್ತಿ ಆಗುತ್ತವೆ. ಜ್ಯೇಷ್ಠ ಮಾಸದಲ್ಲಿ ಲಿಂಗ, ಸಮಾನತೆ ಎಲ್ಲರೂ ಒಂದೇ ಎನ್ನುವ ಕಾಲ ಬರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಮಳೆಬೆಳೆಯ ಕುರಿತು ಐದಾಣೆ ಮಳೆ, ನಾಲ್ಕಾನೆ ಬೆಳೆ ಎಂದಿದ್ದಾರೆ.

ಮದ್ಯವೇ ನೈವೇದ್ಯ:

ಬೆಂಕಿ ಬಬಲಾದಿ ಎಂದೇ ಗುರುತಿಸಿಕೊಂಡಿರುವ ಬಬಲೇಶ್ವರ ತಾಲೂಕಿನ ಬಬಲಾದಿ ಸದಾಶಿವ ಮುತ್ಯಾನ ಮಠದಲ್ಲಿ ಜಾತ್ರೆಯ ವೇಳೆ ಸದಾಶಿವನಿಗೆ ತೀರ್ಥದ ರೂಪದಲ್ಲಿ ಮದ್ಯವನ್ನು ನೈವೇದ್ಯವಾಗಿ ಅರ್ಪಿಸುವುದು ಪ್ರಚಲಿತದಲ್ಲಿದೆ. ಸುಮಾರು 700 ವರ್ಷಗಳ ಇತಿಹಾಸವಿರುವ ಈ ಸದಾಶಿವ ಮುತ್ಯಾಗೆ ಬಂದ ಭಕ್ತರೆಲ್ಲ ಮದ್ಯವನ್ನು ಅರ್ಪಿಸುತ್ತಾರೆ. ತಾವು ಕೇಳಿಕೊಂಡ ಹರಕೆಗಳು ಈಡೇರಿದಾಗಲೂ ಇಲ್ಲಿಗೆ ಬಂದು ಮದ್ಯವನ್ನು ಅರ್ಪಿಸುವುದು ರೂಢಿಯಲ್ಲಿದೆ.