ಐದು ವರ್ಷದ ಜನಸೇವೆ ತೃಪ್ತಿ ತಂದಿದೆ: ಶ್ರೀನಿವಾಸಪ್ರಸಾದ್

| Published : Feb 27 2024, 01:36 AM IST

ಸಾರಾಂಶ

ಕಳೆದ ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಸಂಸದನಾಗಿ ಉತ್ತಮ ಸೇವೆ ಸಲ್ಲಿಸಿರುವ ತೃಪ್ತಿ ಇದೆ. ಈ ಹಿಂದೆ ೫ ಬಾರಿ ಸಂಸದನಾಗಿ ಮಾಡಿದ್ದ ಕೆಲಸ ಕಾರ್ಯಗಳನ್ನು ಈ ಬಾರಿ ಆರೋಗ್ಯ ಸಮಸ್ಯೆಯಿಂದ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ದಿ ಪಡಿಸಲು ಸಾಧ್ಯವಾಗಲಿಲ್ಲ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ವಿ. ಶ್ರೀನಿವಾಸಪ್ರಸಾದ್ ತಿಳಿಸಿದರು

ಕನ್ನಡಪ್ರಭ ವಾರ್ತೆ ಚಾಮರಾಜನಗರಕಳೆದ ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಸಂಸದನಾಗಿ ಉತ್ತಮ ಸೇವೆ ಸಲ್ಲಿಸಿರುವ ತೃಪ್ತಿ ಇದೆ. ಈ ಹಿಂದೆ ೫ ಬಾರಿ ಸಂಸದನಾಗಿ ಮಾಡಿದ್ದ ಕೆಲಸ ಕಾರ್ಯಗಳನ್ನು ಈ ಬಾರಿ ಆರೋಗ್ಯ ಸಮಸ್ಯೆಯಿಂದ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ದಿ ಪಡಿಸಲು ಸಾಧ್ಯವಾಗಲಿಲ್ಲ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ವಿ. ಶ್ರೀನಿವಾಸಪ್ರಸಾದ್ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೬ ನೇ ಬಾರಿ ಸಂಸದರಾಗಿ ಚುನಾಯಿತನಾದ ಮೇಲೆ ಕ್ಷೇತ್ರದಲ್ಲಿ ಜನರ ನಿರೀಕ್ಷೆಯಂತೆ ಕೆಲಸ ಮಾಡಿದ್ದೇವೆ. ದೆಹಲಿಯಲ್ಲಿ ಹೋಗಿ ಸಂಸತ್ ಅಧಿವೇಶನದಲ್ಲಿ ಭಾಗವಹಿಸಿ ಪ್ರಶ್ನೆ ಕೇಳುವುದು ಮತ್ತು ಚರ್ಚೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದರೆ, ಸಂಸದರ ನಿಧಿಯಿಂದ ಕ್ಷೇತ್ರದ ಅಭಿವೃದ್ಧಿಗೆ ಬಿಡುಗೆಯಾಗಿದ್ದ ೧೭.೫೦ ಕೋಟಿ ರು.ಗಳನ್ನು ಸಮರ್ಪಕವಾಗಿ ವಿನಿಯೋಗಿಸಿ, ಶಿಕ್ಷಣ, ಆರೋಗ್ಯ, ಸಮದಾಯ ಭವನಗಳ ನಿರ್ಮಾಣ ಸೇರಿದಂತೆ ಹತ್ತು ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಸಮಾನಂತರವಾಗಿ ಅನುದಾನ ಹಂಚಿಕೆ ಮಾಡಿದ್ದೇನೆ. ಹೆಚ್ಚುವರಿ ಅನುದಾನ ಹಾಗೂ ವಿಶೇಷ ಯೋಜನೆಗಳನ್ನು ತರಲು ಸಾಧ್ಯವಾಗಿಲ್ಲ ಎಂಬ ನೋವು ಇದೆ. ಆದರೆ ಕ್ಷೇತ್ರದ ಜನರ ವಿಶ್ವಾಸಕ್ಕೆ ಕಿಂಚಿತ್ತು ಅಪಚಾರವಾಗದಂತೆ ಸ್ವಾಭಿಮಾನಿಯಾಗಿ ಕೆಲಸ ಮಾಡಿದ್ದೇನೆ. ಎಲ್ಲಾ ವರ್ಗದವರಿಗೆ ಸ್ಪಂದಿಸುವ ಮೂಲಕ ನನ್ನ ರಾಜಕೀಯ ಜೀವನದಲ್ಲಿ ಕಳಂಕ ರಹಿತನಾಗಿ ಸಾರ್ವಜನಿಕರ ಸೇವೆ ಮಾಡಿದ್ದೇನೆ ಎಂಬ ಆತ್ಮತೃಪ್ತಿ ಇದೆ ಎಂದರು. ಪಾದರ್ಪಣೆ ದಿನವೇ ರಾಜಕೀಯ ನಿವೃತ್ತಿ: ನಾನು ರಾಜಕೀಯಕ್ಕೆ ಪಾದರ್ಪಣೆ ಮಾಡಿ, ಮಾ. ೧೭ ೨೦೨೪ಕ್ಕೆ ೫೦ ವರ್ಷಗಳು ತುಂಬಲಿದೆ. ಈ ಹಿನ್ನೆಲೆಯಲ್ಲಿ ಮಾ.೧೭ರಂದೇ ಮೈಸೂರಿನ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯ ಘಟಿಕೋತ್ಸವ ಸಭಾಂಗಣದಲ್ಲಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಚುನಾವಣಾ ರಾಜಕೀಯ ಸುವರ್ಣ ಮಹೋತ್ಸವ ಅಭಿನಂದನಾ ಸಮಾರಂಭದಲ್ಲಿ ನಿವೃತ್ತಿ ಘೋಷಣೆ ಮಾಡುವುದಾಗಿ ತಿಳಿಸಿದರು.

ಅಂದು ಬೆಳಗ್ಗೆ ೧೧ ಕ್ಕೆ ನಡೆಯುವ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಿರಿಯ ಸಾಹಿತಿ ಡಾ. ಚಂದ್ರಶೇಖರ್ ಕಂಬಾರ ಸ್ವಾಭಿಮಾನಿ ನೆನಪುಗಳು ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಲಿದ್ದಾರೆ. ಮಾಜಿ ಸಭಾಪತಿ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಭಾಗವಹಿಸಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

೨೦೧೯ರಲ್ಲಿ ಸಂವಿಧಾನ ಹಾಗೂ ಅಂಬೇಡ್ಕರ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರಪ್ರಥಮವಾಗಿ ಕ್ಷೇತ್ರದ ಎಲ್ಲಾ ಪ್ರೌಢಶಾಲೆ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಸಂವಿಧಾನ ಓದು ಪುಸ್ತಕಗಳನ್ನು ಬಿಡುಗಡೆ ಗೊಳಿಸಿ, ಹಂಚಿಕೆ ಮಾಡಿ ಜಾಗೃತಿ ಮೂಡಿಸಿದ್ದೆ. ಈಗ ಸಿದ್ದರಾಮಯ್ಯ ಕಾಪಿ ಮಾಡುವ ಮೂಲಕ ದೊಡ್ಡದಾಗಿ ಸಂವಿಧಾನ ಉಳಿಸುತ್ತಿದ್ದೇವೆ ಎಂದು ಬೊಬ್ಬೆ ಹಾಕುತ್ತಿದ್ದಾರೆ ಎಂದು ವಿ. ಶ್ರೀನಿವಾಸಪ್ರಸಾದ್ ಲೇವಡಿ ಮಾಡಿದರು.

ಸಂಸತ್ ಸದಸ್ಯನಾಗಿ ಕಳೆದ ಐದು ವರ್ಷಗಳ ಅವಧಿಯಲ್ಲಿ ವಿಕಲಚೇತನರಿಗೆ ಸಾಧನ ಸಲಕರಣೆ ವಿತರಣೆ, ಬೃಹತ್ ಆರೋಗ್ಯ ತಪಾಸಣೆ ಶಿಬಿರ ಹಾಗೂ ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿ ಅನುದಾನ ನೀಡಿದ್ದೇನೆ. ಅಲ್ಲದೇ, ಮೈಸೂರು-ಚಾಮರಾಜನಗರದಲ್ಲಿ ಕಚೇರಿ ತೆರೆದು ಕ್ಷೇತ್ರದ ಮತದಾರರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಕೆಲಸವನ್ನು ನಮ್ಮ ಅಪ್ತ ಸಹಾಯಕರು ಮಾಡಿದ್ದಾರೆ. ಇದು ಸೇವೆ ಅಲ್ಲವೇ? ಕೋವಿಡ್‌ನಿಂದಾಗಿ ೨ ವರ್ಷಗಲ ಕಾಲ ೬೦ ತುಂಬಿದ ನಾನು ಹೊರಗೆ ಬರಲು ಸಾಧ್ಯವಾಗಲಿಲ್ಲ. ಅದರೂ ಸಹ ಕ್ಷೇತ್ರದಲ್ಲಿ ಕೋವಿಡ್ ವೈರಸ್ ತಡೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದೇವೆ. ೫೦ ಲಕ್ಷ ರು.ಗಳ ಅನುದಾನವನ್ನು ನೀಡಿದ್ದೇನೆ. ಯಾರೇ ಏನು ಪ್ರಶ್ನೆ ಮಾಡಿದರು ಸ್ವಾಭಿಮಾನವನ್ನು ರಾಜಕಾರಣದಲ್ಲಿ ಬಿಟ್ಟು ಕೊಟ್ಟಿಲ್ಲ ಎಂದು ವಿಪಕ್ಷಗಳ ಟೀಕೆಗೆ ಟಾಂಗ್ ಕೊಟ್ಟರು.

೧೦ ಲಕ್ಷ ವಾಪಸ್: ಪ್ರದೇಶಾಭಿವೃದ್ದಿ ನಿಧಿಯಿಂದ ಚಾ.ನಗರ ತಾಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ನೀಡಿದ್ದ ಅನುದಾನವನ್ನು ವಾಪಸ್ ಪಡೆದುಕೊಂಡಿದ್ದೇನೆ ಎಂದು ಸಂಸದ ವಿ. ಶ್ರೀನಿವಾಸ್‌ಪ್ರಸಾದ್ ತಿಳಿಸಿದರು. ಆದಿ ಕರ್ನಾಟಕ ಅಭಿವೃದ್ಧಿ ಸಂಘದಲ್ಲಿ ನಡೆದಿದ ಎನ್ನಲಾದ ಅವ್ಯವಹಾರ ಹಾಗೂ ಇತ್ತೀಚೆಗೆ ಆಸ್ತಿ ಪರಭಾರೆ ಕುರಿತು ವಿವಾದಗಳಿಂದ ಎಚ್ಚೆತ್ತುಕೊಂಡು ನನ್ನ ಅನುದಾನವನ್ನು ವಾಪಸ್ ಪಡೆದುಕೊಂಡಿದ್ದೇನೆ. ಕಳೆದ ೫೦ ವರ್ಷಗಳ ಅವಧಿಯಲ್ಲಿ ಸರ್ಕಾರ ಸಂಘಕ್ಕೆ ನೀಡಿದ್ದ ಭೂಮಿಯನ್ನು ಅಭಿವೃದ್ಧಿಪಡಿಸಲು ವಿಫಲವಾಗಿತ್ತು. ಇತ್ತೀಚಿನ ದಿನಗಳಲ್ಲಿ ಸಂಘದ ವಿರುದ್ಧ ವಿವಾದಗಳು, ಆರೋಪಗಳು ಕೇಳಿ ಬಂದಿತ್ತು. ಈ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ನೈಜ ವರದಿಯನ್ನು ನೀಡುವಂತೆ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್‌ಗೆ ಸೂಚನೆ ನೀಡಿದ್ದೇನೆ ಎಂದು ಪ್ರಸಾದ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ಎಂ.ಎಸ್. ಮೋಹನ್, ಜಿಪಂ. ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ಹಾಪ್‌ಕಾಮ್ಸ್ ಅಧ್ಯಕ್ಷ ಕೆ.ಆರ್. ಲೋಕೇಶ್, ಜಿಲ್ಲಾ ಬಿಜೆಪಿ ವಕ್ತಾರ ಬಸವರಾಜಪ್ಪ, ಜಿಲ್ಲಾ ಉಪಾಧ್ಯಕ್ಷೆ ಸರೋಜ ಇತರರು ಇದ್ದರು.