ಸೈಬರ್‌ ಕ್ರೈಮ್‌ಗೆ ಅಕ್ರಮವಾಗಿ 42 ಸಿಮ್‌ ಖರೀದಿ?

| Published : Feb 05 2024, 01:45 AM IST / Updated: Feb 05 2024, 12:20 PM IST

cyber crime in india

ಸಾರಾಂಶ

ಅನ್ಯರ ಹೆಸರಿನಲ್ಲಿ ಅಕ್ರಮವಾಗಿ 42 ಸಿಮ್‌ ಖರೀದಿಸಿ ಬೆಂಗಳೂರಿಗೆ ಕೊಂಡೊಯ್ಯುತ್ತಿದ್ದ ಐವರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಗಳನ್ನು ನಂತರ ನ್ಯಾಯಾಲಯವು ಜಾಮೀನು ಮೇಲೆ ಬಿಡುಗಡೆ ಮಾಡಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಅನ್ಯರ ಹೆಸರಿನಲ್ಲಿ ಅಕ್ರಮವಾಗಿ 42 ಸಿಮ್‌ ಖರೀದಿಸಿ ಬೆಂಗಳೂರಿಗೆ ಕೊಂಡೊಯ್ಯುತ್ತಿದ್ದ ಐವರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಗಳನ್ನು ನಂತರ ನ್ಯಾಯಾಲಯವು ಜಾಮೀನು ಮೇಲೆ ಬಿಡುಗಡೆ ಮಾಡಿದೆ.

ಆನ್‌ಲೈನ್‌ ಆರ್ಥಿಕ ಅಪರಾಧಕ್ಕೆ ಆರೋಪಿಗಳು ಇಷ್ಟೊಂದು ಪ್ರಮಾಣದಲ್ಲಿ ಸಿಮ್‌ ಖರೀದಿಸಿರುವ ಆರೋಪ ಕೇಳಿಬಂದಿರುವುದು ಮತ್ತು ಆರೋಪಿಯೊಬ್ಬನಿಗೆ ದುಬೈ ನಂಟಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ಅಧಿಕಾರಿಗಳು ಪ್ರಕರಣದ ಕುರಿತು ಮಾಹಿತಿ ಪಡೆದಿದ್ದು, ಶೀಘ್ರದಲ್ಲೇ ಬೆಳ್ತಂಗಡಿಗೆ ಭೇಟಿ ನೀಡುವ ಸಾಧ್ಯತೆ ಇದೆ.

ರಮೀಜ್‌ (20), ಅಕ್ಬರ್ ಆಲಿ (24), ಮೊಹಮ್ಮದ್ ಮುಸ್ತಫಾ (22), ಮಹಮ್ಮದ್ ಸಾದಿಕ್ (27) ಮತ್ತು 17 ವರ್ಷದ ಅಪ್ರಾಪ್ತ ಬಾಲಕ ಬಂಧನಕ್ಕೆ ಒಗಳಾಗಿದ್ದವರು. ಖಚಿತ ಮಾಹಿತಿ ಮೇರೆಗೆ ಐವರನ್ನು ಧರ್ಮಸ್ಥಳ ಕೆಎಸ್‌ಆರ್‌ಟಿಸಿ ನಿಲ್ದಾಣ ಬಳಿ ಗುರುವಾರ ವಶಕ್ಕೆ ಪಡೆಯಲಾಗಿದೆ. 

ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಕಲಂ 420, 120 ಬಿ ಜತೆಗೆ 34 ಐಪಿಸಿರಂತೆ ವಂಚನೆ, ಒಳಸಂಚು ಪ್ರಕರಣ ದಾಖಲಾಗಿದೆ. ಬಂಧಿತರಲ್ಲಿ ನಾಲ್ವರನ್ನು ಫೆ.2ರಂದು ಸಂಜೆ ಧರ್ಮಸ್ಥಳ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಬಳಿಕ ಆರೋಪಿಗಳಿಗೆ ಜಾಮೀನು ನೀಡಿದೆ.

ಎನ್‌ಐಎ ಭೇಟಿ: ಪ್ರಕರಣದ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಎನ್‌ಐಎ ಅಧಿಕಾರಿಗಳು ಸ್ಥಳೀಯ ಪೊಲೀಸರಿಂದ ಈ ಕುರಿತು ಮಾಹಿತಿ ಪಡೆದಿದ್ದಾರೆ. ಅಲ್ಲದೆ, ಎನ್‌ಐಎ ತಂಡ ಶೀಘ್ರ ಬೆಳ್ತಂಗಡಿಗೆ ಭೇಟಿ ನೀಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.

ಆರೋಪಿಯೊಬ್ಬ ದುಬೈನಲ್ಲಿ ಎರಡು ವರ್ಷ ಇದ್ದು, ನಾಲ್ಕು ತಿಂಗಳ ಹಿಂದಷ್ಟೇ ಊರಿಗೆ ಬಂದಿದ್ದ. ದುಬೈನಲ್ಲಿದ್ದುಕೊಂಡೇ ಅಕ್ರಮ ಸಿಮ್ ಖರೀದಿ ಮಾಡಿಸಿದ್ದ ಎಂದು ಹೇಳಲಾಗುತ್ತಿದೆ. 

ವಿದೇಶಿ ನಂಟು ಇರುವುದರಿಂದ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಒಂದು ಸಿಮ್ ಕಾರ್ಡ್‌ಗೆ 800 ರು.ನಂತೆ ಕಮಿಷನ್ ಕೊಡಲಾಗಿತ್ತು ಮತ್ತು ಹಲವರು ತಮ್ಮ ವಿಳಾಸ ಕೊಟ್ಟು ಸಿಮ್ ಕಾರ್ಡ್ ಖರೀದಿಸಿ ಕೊಟ್ಟಿದ್ದರು ಎಂದು ಹೇಳಲಾಗುತ್ತಿದೆ.

ಮೋಸದ ಕೃತ್ಯಕ್ಕೆ ಸಿಮ್‌ ಬಳಕೆ: ಈ ಸಿಮ್‌ ಕಾರ್ಡ್‌ ಅನ್ನು ಆನ್‌ಲೈನ್‌ ವ್ಯವಹಾರ ಹಾಗೂ ಆನ್‌ಲೈನ್‌ ಮೂಲಕ ವಂಚನೆ ಎಸಗುವ ಉದ್ದೇಶದಿಂದಲೇ ಆರೋಪಿಗಳು ಸಂಗ್ರಹಿಸಿಟ್ಟುಕೊಂಡಿದ್ದರು ಎಂದು ದ.ಕ. ಎಸ್ಪಿ ರಿಷ್ಯಂತ್‌ ತಿಳಿಸಿದ್ದಾರೆ.