ಕಬ್ಬಿಗೆ ಪ್ರತಿ ಟನ್ಗೆ 3,600 ರು. ಬೆಂಬಲ ಬೆಲೆ ನಿಗದಿಪಡಿಸುವವರೆಗೆ ಹೋರಾಟ ನಿಲ್ಲುವುದಿಲ್ಲ. ಸರ್ಕಾರಕ್ಕೆ ಎರಡು ದಿನಗಳ ಗಡುವು ನೀಡಲಾಗಿದ್ದು, ಅಷ್ಟರೊಳಗೆ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ರಾಜ್ಯಮಟ್ಟದಲ್ಲಿ ಉಗ್ರ ಹೋರಾಟ ಆರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಎಚ್ಚರಿಕೆ ನೀಡಿದರು.
ಕನ್ನಡಪ್ರಭ ವಾರ್ತೆ ಅಫಜಲಪುರ
ಕಬ್ಬಿಗೆ ಪ್ರತಿ ಟನ್ಗೆ 3,600 ರು. ಬೆಂಬಲ ಬೆಲೆ ನಿಗದಿಪಡಿಸುವವರೆಗೆ ಹೋರಾಟ ನಿಲ್ಲುವುದಿಲ್ಲ. ಸರ್ಕಾರಕ್ಕೆ ಎರಡು ದಿನಗಳ ಗಡುವು ನೀಡಲಾಗಿದ್ದು, ಅಷ್ಟರೊಳಗೆ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ರಾಜ್ಯಮಟ್ಟದಲ್ಲಿ ಉಗ್ರ ಹೋರಾಟ ಆರಂಭಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಎಚ್ಚರಿಕೆ ನೀಡಿದರು.ತಾಲೂಕಿನ ಚೌಡಾಪುರ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಳೆದ ಒಂಬತ್ತು ದಿನಗಳಿಂದ ನಡೆಯುತ್ತಿರುವ ಕಬ್ಬು ಬೆಳೆಗಾರರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಬೆಂಬಲ ಸೂಚಿಸಿ ಅವರು ಮಾತನಾಡಿದರು. ಅನ್ನ ನೀಡುವ ರೈತರ ಬೇಡಿಕೆ ನ್ಯಾಯಯುತವಾಗಿದೆ. ರೈತರು ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯಬಾರದು. ರೈತರಿಗೆ ನ್ಯಾಯ ದೊರೆಯುವವರೆಗೆ ನಾನು ನಿಮ್ಮೊಂದಿಗೇ ಇರುತ್ತೇನೆ. ರೈತರು ಒಗ್ಗಟ್ಟಿನಿಂದ ಹೋರಾಡಿದರೆ ಯಾವುದೇ ಶಕ್ತಿಯೂ ಅವರ ನ್ಯಾಯಯುತ ಬೇಡಿಕೆಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹೇಳಿದರು.
ಬೆಳಗಾವಿ ಭಾಗದಲ್ಲಿ ಕಬ್ಬಿಗೆ ಪ್ರತಿ ಟನ್ಗೆ 3,600 ರೂ. ದರ ನೀಡಲಾಗುತ್ತಿದೆ. ಅದೇ ದರವನ್ನು ಕಲಬುರಗಿ ಜಿಲ್ಲೆಯ ರೈತರಿಗೂ ನೀಡಬೇಕು. ಗೊಬ್ಬರ, ಬೀಜ ಸೇರಿದಂತೆ ಕೃಷಿ ಪರಿಕರಗಳ ಬೆಲೆ ಏರಿಕೆಯಾದಂತೆ ಕಬ್ಬಿನ ಬೆಲೆಯನ್ನೂ ಕಾಲಕಾಲಕ್ಕೆ ಪರಿಷ್ಕರಿಸಬೇಕು. ಎಂಎಸ್ಪಿ ದರವನ್ನು ಪ್ರತಿ ಕೆ.ಜಿ.ಗೆ 60 ರು. ಗೆ ನಿಗದಿಪಡಿಸಬೇಕು. ಎಫ್ಆರ್ಪಿ ನಿಯಮದಡಿ ರೈತರಿಗೆ ನ್ಯಾಯಯುತ ಬೆಲೆ ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಸಕ್ಕರೆಯ ಮಾರಾಟ ದರ ಹಾಗೂ ಲಾಭಾಂಶ ಪರಿಗಣಿಸಿದರೆ ಮುಂದಿನ ದಿನಗಳಲ್ಲಿ ರೈತರಿಗೆ ಪ್ರತಿ ಟನ್ಗೆ 4,350 ರು. ವರೆಗೆ ಬೆಲೆ ನೀಡಲು ಅವಕಾಶವಿದೆ. ರೈತರ ಹಿತಾಸಕ್ತಿಯ ಪ್ರಶ್ನೆಯಲ್ಲಿ ಯಾವುದೇ ಸಕ್ಕರೆ ಕಾರ್ಖಾನೆ ಮಾಲೀಕರ ಒತ್ತಡಕ್ಕೂ ನಾವು ಮಣಿಯುವುದಿಲ್ಲ ಎಂದು ಹೇಳಿದರು.
ಸ್ವಾಮಿನಾಥನ್ ಆಯೋಗದ ವರದಿಯನ್ನು ಸರ್ಕಾರ ಜಾರಿಗೊಳಿಸಬೇಕು. ಇದರಿಂದ ಎಲ್ಲ ಬೆಳೆಗಳಿಗೂ ವೈಜ್ಞಾನಿಕ ಹಾಗೂ ನ್ಯಾಯಯುತ ಬೆಂಬಲ ಬೆಲೆ ದೊರೆಯಲಿದೆ. ರೈತರ ಪರವಾಗಿ ಧ್ವನಿ ಎತ್ತಿದ ಮಾಶಾಳದ ಶ್ರೀ ಮರುಳಾರಾಧ್ಯ ಶಿವಾಚಾರ್ಯರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.ರೈತ ಮುಖಂಡ ಸಂತೋಷ ಮಲಗೊಂಡ ಮಾತನಾಡಿ, ಕಬ್ಬಿಗೆ ಪ್ರತಿ ಟನ್ಗೆ 3,600 ರು. ದರ ನಿಗದಿಯಾಗುವವರೆಗೆ ಯಾವುದೇ ಕಾರಣಕ್ಕೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಜೆಡಿಎಸ್ ಹಿಂದುಳಿದ ವರ್ಗಗಳ ಘಟಕದ ರಾಜ್ಯಾಧ್ಯಕ್ಷ ಶಿವಕುಮಾರ ನಾಟೀಕಾರ ಮಾತನಾಡಿದರು.
ಮಾಶಾಳದ ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಮಾತನಾಡಿ, ರೈತರಿಗೆ ಮೋಸ ಮಾಡಿದವರು ಎಂದಿಗೂ ಉದ್ಧಾರವಾಗುವುದಿಲ್ಲ. ನಾನು ರೈತರ ಪರವಾಗಿ ಧ್ವನಿ ಎತ್ತಿದ್ದಕ್ಕಾಗಿ ನನ್ನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ರೈತರ ಹಿತಕ್ಕಾಗಿ ಬೇಕಾದರೆ ನೇಣುಗಂಬ ಏರಲೂ ಸಿದ್ಧನಿದ್ದೇನೆ. ನನ್ನ ಜೀವ ಇರುವವರೆಗೂ ರೈತರ ಪರವಾಗಿಯೇ ನಿಲ್ಲುತ್ತೇನೆ. ನಾನು ಯಾರ ವಿರುದ್ಧವೂ ವೈಯಕ್ತಿಕವಾಗಿ ಮಾತನಾಡಿಲ್ಲ. ನನ್ನನ್ನು ಜೈಲಿಗೆ ಹಾಕಬೇಕಾದರೂ ಹಾಕಲಿ. ನನ್ನ ವಿರುದ್ಧ ಎಫ್ಐಆರ್ ದಾಖಲಿಸಿದವರಿಗೂ ದೇವರು ಒಳ್ಳೆಯದನ್ನೇ ಮಾಡಲಿ. ನಾನು ಒಂದು ದಿನ ಬದುಕಿದರೂ ಹುಲಿಯಂತೆ ಬದುಕುತ್ತೇನೆ ಎಂದು ಗುಡುಗಿದರು.ಮುಖಂಡರಾದ ಸಿದ್ದು ದಣ್ಣೂರ, ಅಶೋಕ್ ಹೂಗಾರ, ಶರಣಗೌಡ ಪಾಟೀಲ, ಬಸವರಾಜ ಚಾಂದಕವಟೆ, ಮಹೇಶ ಸುಬೇದಾರ, ಸಾಹೇಬಗೌಡ ಬಾಸಗಿ, ರಾಘವೇಂದ್ರ ಸ್ವಾಮಿ ಬಂದರವಾಡ, ಬಸವರಾಜ ಕಲಶೆಟ್ಟಿ, ಕಾಸಿಂ ಹಳ್ಯಾಳ, ಹರೀಶ್ ಸಾಸಣೆಕರ, ಸುಭಾಷ್ ಲಿಂಗಶೆಟ್ಟಿ, ವಿಜಯಕುಮಾರ, ಸಾಯಿಬಣ್ಣ ಜಮಾದಾರ, ರಮೇಶ್ ಯಲ್ಲಪ್ಪ, ಮಲ್ಕಪ್ಪಗೌಡ ಪಾಟೀಲ, ಅಣ್ಣಾರಾವ್ ಪಾಟೀಲ, ರಮೇಶ್ ಹೂಗಾರ, ಶ್ರೀಪಾದ ಸೆಂಡಗೆ, ಸಿದ್ದು ಹೂಗಾರ, ಬೋಜರಾಜಗೌಡ ಬಿರಾದಾರ, ಬಸಯ್ಯಸ್ವಾಮಿ ಆಕಾಶಮಠ, ಅವಧೂತ ಮೂರನೆತ್ತಿ ಸೇರಿದಂತೆ ವಿವಿಧ ಗ್ರಾಮಗಳ ಸಾವಿರಾರು ರೈತರು ಪಾಲ್ಗೊಂಡಿದ್ದರು.