ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳ ಕಬ್ಬು ಬೆಳೆಗಾರರಿಗೆ ಒಂದೇ ದರ ನಿಗದಿ ಮಾಡಬೇಕು. ಹಾವೇರಿ ಜಿಲ್ಲೆಯ ರೈತರಿಗೂ ಪ್ರತಿ ಟನ್ಗೆ ₹3,600 ಮೊದಲ ಕಂತಿನ ಹಣ ನೀಡಬೇಕು. ಬೆಳಗಾವಿ ಭಾಗದ ರೈತರಿಗೆ ನೀಡುವ ದರವನ್ನು ಹಾವೇರಿ ಜಿಲ್ಲೆಯ ರೈತರಿಗೂ ಅನ್ವಯಿಸಬೇಕು. ರೈತರಲ್ಲಿ ತಾರತಮ್ಯ ಮಾಡದೆ ನ್ಯಾಯ ಒದಗಿಸಬೇಕು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರ ಆಗ್ರಹಿಸಿದರು.
ಹಾವೇರಿ: ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳ ಕಬ್ಬು ಬೆಳೆಗಾರರಿಗೆ ಒಂದೇ ದರ ನಿಗದಿ ಮಾಡಬೇಕು. ಹಾವೇರಿ ಜಿಲ್ಲೆಯ ರೈತರಿಗೂ ಪ್ರತಿ ಟನ್ಗೆ ₹3,600 ಮೊದಲ ಕಂತಿನ ಹಣ ನೀಡಬೇಕು. ಬೆಳಗಾವಿ ಭಾಗದ ರೈತರಿಗೆ ನೀಡುವ ದರವನ್ನು ಹಾವೇರಿ ಜಿಲ್ಲೆಯ ರೈತರಿಗೂ ಅನ್ವಯಿಸಬೇಕು. ರೈತರಲ್ಲಿ ತಾರತಮ್ಯ ಮಾಡದೆ ನ್ಯಾಯ ಒದಗಿಸಬೇಕು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರ ಆಗ್ರಹಿಸಿದರು.
ನಗರದ ಜಿಲ್ಲಾಡಳಿತ ಭವನದ ಎದುರು ನಡೆದ ಕಬ್ಬು ಬೆಳೆಗಾರರ ಸಭೆಯಲ್ಲಿ ಅವರು ಮಾತನಾಡಿ, ಕಬ್ಬಿಗೆ ₹4,500 ಕಾರ್ಖಾನೆಗಳು ಹಾಗೂ ₹1,000 ಸರ್ಕಾರ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ನಡೆಸಿದ್ದೇವೆ. ಎಂಎಸ್ಪಿ ದರ ಹೆಚ್ಚಳ, ಎಥೆನಾಲ್ ಸೇರಿದಂತೆ ಕಬ್ಬಿನ ಉಪ ಉತ್ಪನ್ನಗಳ ವಾಣಿಜ್ಯ ಮೌಲ್ಯ ಆಧರಿಸಿ ರೈತರಿಗೆ ನ್ಯಾಯಯುತ ಬೆಲೆ ಸಿಗಬೇಕು. ಹಾವೇರಿ ಜಿಲ್ಲೆಯಲ್ಲಿ ಕಬ್ಬು ಒಣಗುತ್ತಿದ್ದರೂ ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಹಾವೇರಿ ಜಿಲ್ಲೆಯ ಕೆಲವು ಕಾರ್ಖಾನೆಗಳು ₹2,950, ಮತ್ತೊಂದು ಕಾರ್ಖಾನೆ ₹3,100 ನೀಡುವುದಾಗಿ ಹೇಳುತ್ತಿವೆ. ಬೆಳಗಾವಿ ಭಾಗದಲ್ಲಿ ಶೇ.12.50 ರಿಕವರಿ ಬರುತ್ತಿದ್ದರೆ, ಇಲ್ಲಿಯೂ ಕಬ್ಬು ಬೆಳೆಯಲು ಅಷ್ಟೇ ವೆಚ್ಚವಾಗುತ್ತದೆ. ರಿಕವರಿ ನಿರ್ಧರಿಸುವುದು ಕಾರ್ಖಾನೆಗಳೇ ಆಗಿರುವುದರಿಂದ ಸರ್ಕಾರ ಎಲ್ಲ ಕಾರ್ಖಾನೆಗಳಲ್ಲೂ ರಿಕವರಿ ಪರಿಶೀಲನಾ ಯಂತ್ರ ಅಳವಡಿಸಬೇಕು. ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಹಾಗೂ ಮುಖ್ಯಮಂತ್ರಿ ಅವರು ಈ ಬಗ್ಗೆ ಪರಿಶೀಲಿಸಬೇಕು ಎಂದರು.ರೈತರ ಮೇಲೆ ಜಿ.ಎಂ. ಶುಗರ್ಸ್ ಹಾಗೂ ವಿಎನ್ಪಿ ಸಕ್ಕರೆ ಕಾರ್ಖಾನೆ ಮಾಲೀಕರು ದಾಖಲಿಸಿರುವ ಪ್ರಕರಣಗಳನ್ನು ಕಾರ್ಖಾನೆ ಆರಂಭವಾಗುವ ಮುನ್ನವೇ ಹಿಂಪಡೆಯಬೇಕು. ಇಲ್ಲದಿದ್ದರೆ ಕಾರ್ಖಾನೆ ಬಂದ್ ಮಾಡುವ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ರೈತ ಮುಖಂಡ ಶಶಿಕಾಂತ್ ಗುರೂಜಿ ಮಾತನಾಡಿ, ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳ ರೈತರಿಗೆ ಒಂದೇ ದರ ನೀಡಬೇಕು. ರೈತರ ಹೋರಾಟದ ನಡುವೆಯೂ ಸಕ್ಕರೆ ಸಚಿವರು ಸ್ಥಳಕ್ಕೆ ಬಂದು ಸ್ಪಂದಿಸಿಲ್ಲ. ಬೆಳಗಾವಿ ಭಾಗದಲ್ಲಿ ನೀಡುವ ದರವನ್ನು ಹಾವೇರಿ ರೈತರಿಗೆ ನೀಡದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ನೀಡಬೇಕು. ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯದ ಕಾರ್ಖಾನೆ ಮಾಲೀಕರು ಜಿಲ್ಲೆಗೆ ಬಂದಾಗ ಘೇರಾವ್ ಹಾಕಬೇಕು ಎಂದು ಕರೆ ನೀಡಿದರು.₹3,600 ದರಕ್ಕೆ ಒಪ್ಪಿಕೊಂಡಿದ್ದಾರೆ ಎಂಬ ಆರೋಪ ಸರಿಯಲ್ಲ. ಆ ಹಣ ರೈತರ ಖಾತೆಗೆ ಜಮೆಯಾಗಬೇಕೇ ಹೊರತು ನಮ್ಮ ಖಾತೆಗಲ್ಲ. ರೈತರ ಹಿತ ಕಾಪಾಡಲು ಎಲ್ಲ ಶಾಸಕರು ಧ್ವನಿ ಎತ್ತಬೇಕು. ಮುಂದಿನ ವರ್ಷ ರಾಜ್ಯದಲ್ಲಿ ಕಬ್ಬಿನ ದರ ನಿಗದಿಪಡಿಸುವಾಗ ಗುರ್ಲಾಪುರ ಮಾದರಿಯ ಘೋಷಣೆಯಂತೆ ಹಾವೇರಿ ರೈತರಿಗೆ ಒಂದು ರುಪಾಯಿಯೂ ಕಡಿಮೆಯಾಗದಂತೆ ಸಮಾನ ದರ ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಕಬ್ಬು ಬೆಳೆಗಾರರ ಸಂಘಟನೆಯ ಪ್ರಮುಖರಾದ ಭುವನೇಶ್ವರ ಶಿಡ್ಲಾಪುರ, ಅಶೋಕ ಮರ್ಚರಡ್ಡೇರ್, ಹನುಮಂತಪ್ಪ ಕಬ್ಬಾರ, ಹನುಮಂತಪ್ಪ ಹುಚ್ಚಣ್ಣನವರ ಇತರರಿದ್ದರು.