ಸಾರಾಂಶ
ಗದಗ: ಬಿಪಿಎಲ್ ಪಡಿತರ ಚೀಟಿ ಪಡೆಯಲು ಆಗುವ ತೊಂದರೆ ಸರಿಪಡಿಸುವಂತೆ ಆಗ್ರಹಿಸಿ ಸ್ಲಂ ಜನಾಂದೋಲನ ರಾಜ್ಯ ಸಮಿತಿಯ ಕರೆಯ ಮೇರೆಗೆ ಜಿಲ್ಲಾ ಸ್ಲಂ ಸಮಿತಿ ನೇತೃತ್ವದಲ್ಲಿ ನೂರಾರು ಸ್ಲಂ ನಿವಾಸಿಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಆಹಾರ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ.ಆರ್.ಮಾನ್ವಿ ಮಾತನಾಡಿ, ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಕೆಗೆ ಕಳೆದೊಂದು ವರ್ಷದಿಂದ ಸ್ಥಗಿತಗೊಳಿಸಲಾಗಿತ್ತು. ರಾಜ್ಯ ಸರ್ಕಾರ ಇದೀಗ ಲೋಕಸಭೆ ಚುನಾವಣೆಯ ಫಲಿತಾಂಶದ ಬಳಿಕ ಮತ್ತೇ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಟ್ಟಿದೆ, ಆದರೆ ರಾಜ್ಯಾದ್ಯಂತ ಹೊಸ ಪಡಿತರ ಚೀಟಿಗೆ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಲಕ್ಷಾಂತರ ಬಡ ಕುಟುಂಬಗಳು ಪ್ರತಿ ನಿತ್ಯ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಈ ತೊಂದರೆ ಸರ್ಕಾರ ಸರಿಪಡಿಸಬೇಕು ಎಂದು ಆಗ್ರಹಿಸಿದರು.ರಾಜ್ಯ ಕಾಂಗ್ರೆಸ್ ಸರ್ಕಾರ ಪಂಚಗ್ಯಾರಂಟಿ ಯೋಜನೆ ಜಾರಿ ತಂದಿರುವುದನ್ನು ಸ್ವಾಗತಿಸುತ್ತೇವೆ, ಆದರೆ ಈ ಯೋಜನೆ ಪಡೆಯಲು ಪಡಿತರ ಚೀಟಿಗಾಗಿ ಲಕ್ಷಾಂತರ ಜನ ಅರ್ಜಿ ಸಲ್ಲಿಕೆಗೆ ಮುಂದಾದಾಗ ರಾಜ್ಯ ಸರ್ಕಾರ ಆನ್‌ಲೈನ್ ಪೋರ್ಟಲ್ ಬಂದ ಮಾಡಿತ್ತು, ಅಂದಿನಿಂದಲೂ ಲಕ್ಷಾಂತರ ಜನರು ಹೊಸ ಪಡಿತರ ಚೀಟಿ ಪಡೆಯಲು ಕಾಯುತ್ತಿದ್ದಾರೆ. ಸರ್ಕಾರದ ಯೋಜನೆ ಪಡೆಯಲು ಪಡಿತರ ಚೀಟಿ ಬೇಕು ಅದನ್ನ ಪಡೆಯಲು ಆನ್ ಲೈನ್ ಸೆಂಟರ್‌ಗಳಿಗೆ ಜನರು ಹೋಗಿ ಅರ್ಜಿ ಸಲ್ಲಿಸಬೇಕಾದರೆ ಬೆಳಗ್ಗೆಯಿಂದ ಸರದಿ ಸಾಲನಲ್ಲಿ ನಿಲ್ಲಬೇಕಾಗಿದ್ದು, ದಿನಗಟ್ಟಲೆ ನಿಂತರು ಸರ್ವರ್, ತಾಂತ್ರಿಕ ಸಮಸ್ಯೆಯಿಂದ ಲಕ್ಷಾಂತರ ಬಡ ಕುಟುಂಬದ ಮಹಿಳೆಯರು ತಮ್ಮ ಅರ್ಜಿ ಸಲ್ಲಿಸದೇ ಬರಿಗೈಲಿ ಹಿಂತಿರುಗಿದ ಘಟನೆಗಳು ಸಾಮಾನ್ಯವಾಗಿದೆ. ಸರ್ಕಾರ ಕೂಡಲೇ ಈ ಸಮಸ್ಯೆಗಳಿಗೆ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ತಿದ್ದುಪಡೆ ಮತ್ತು ಹೆಸರು ಸೇರ್ಪಡೆ ಮಾಡಿರುವ ಪಡಿತರ ಚೀಟಿಗಳನ್ನು ಕೊಡಲೇ ಫಲಾನುಭವಿಗಳಿಗೆ ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಈ ವೇಳೆ ಕಾರ್ಯದರ್ಶಿ ಅಶೋಕ ಕುಸಬಿ, ಇಬ್ರಾಹಿಂ ಮುಲ್ಲಾ, ಮಂಜುನಾಥ ಶ್ರೀಗಿರಿ, ಮೆಹರುನಿಸಾ ಢಾಲಾಯತ, ಮೈಮುನ ಬೈರಕದಾರ, ಪ್ರೇಮಾ ಮಣವಡ್ಡರ, ಸುಶೀಲಮ್ಮ ಗೊಂದಾರ, ಮೆಹಬೂಬಸಾಬ ಬಳ್ಳಾರಿ, ಸಾಕ್ರುಬಾಯಿ ಗೋಸಾವಿ, ಖಾಜೇಸಾಬ ಇಸ್ಮಾಯಿಲನವರ, ಮಕ್ತುಮಸಾಬ ಮುಲ್ಲಾನವರ, ಮಲೇಶಪ್ಪ ಕಲಾಲ, ಮೆಹರುನಿಸಾ ಡಂಬಳ, ಚಂದ್ರಪ್ಪ ಲಕ್ಕುಂಡಿ, ದುರ್ಗಪ್ಪ ಮಣವಡ್ಡರ, ಶರಣಪ್ಪ ಬಿಂಗದಕಟ್ಟಿ, ಈರಮ್ಮ ಬೇವಿನಮರದ, ನಜೀರಅಹ್ಮದ ಹಾವಗಾರ, ಭಾಷಾಸಾಬ ಡಂಬಳ, ನಾಗರಾಜ ಮಣವಡ್ಡರ, ಶಿವಾನಂದ ಶಿಗ್ಲಿ, ರಾಜೇಸಾಬ್ ಸೈಯದ್, ಮಂಜುನಾಥ ಒಂಟಿಯಲಿ ಹಾಗೂ ಸ್ಲಂ ನಿವಾಸಿಗಳು ಇದ್ದರು.