ಕನ್ನಡಪ್ರಭ ವಾರ್ತೆ ಬೆಳಗಾವಿ ರಾಜ್ಯಾದ್ಯಂತ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಗೆ ಅಡಚಣೆ ಮಾಡುತ್ತಿರುವ ಸರ್ವರ್ ಸಮಸ್ಯೆಯನ್ನು ತಕ್ಷಣ ಬಗೆಹರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಜ್ಯಾದ್ಯಂತ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಗೆ ಅಡಚಣೆ ಮಾಡುತ್ತಿರುವ ಸರ್ವರ್ ಸಮಸ್ಯೆಯನ್ನು ತಕ್ಷಣ ಬಗೆಹರಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಪಡಿತರ ವಿತರಣಾ ವ್ಯವಸ್ಥೆಯಲ್ಲಿ ವ್ಯಕ್ತಿಯ ಹೆಬ್ಬೆರಳಿನ ಬಯೋಮೆಟ್ರಿಕ್ ಅನ್ನು ಒಂದೇ ಬಾರಿ ಪಡೆದು ಪಡಿತರ ವಿತರಿಸುವ ವ್ಯವಸ್ಥೆ ಜಾರಿಗೊಳಿಸಬೇಕು. ರಾಜ್ಯದಲ್ಲಿ ಸುಮಾರು 22 ಸಾವಿರ ನ್ಯಾಯಬೆಲೆ ಅಂಗಡಿಗಳಿದ್ದು, ತಿಂಗಳ ಆರಂಭದಿಂದಲೂ ಸರ್ವರ್ ಸಮಸ್ಯೆ ತೀವ್ರವಾಗಿದೆ. ಇದರಿಂದ ಪಡಿತರ ಪಡೆಯಲು ಬರುವ ಫಲಾನುಭವಿಗಳಿಗೆ ಸರಿಯಾಗಿ ಧಾನ್ಯ ವಿತರಿಸಲು ಆಗುತ್ತಿಲ್ಲ ಎಂದು ದೂರಿದರು.
ಸರ್ವರ್ ವೈಫಲ್ಯದಿಂದಾಗಿ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಿಗೆ ಪದೇ ಪದೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರ ಅಸಮಾಧಾನಕ್ಕೆ ಅಂಗಡಿ ಮಾಲೀಕರು ಗುರಿಯಾಗುತ್ತಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಇದೇ ಸಮಸ್ಯೆ ಇದೆ.ಬೆಳಗಾವಿ ಜಿಲ್ಲೆಯಲ್ಲಿ 1,735 ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಣೆ ನಡೆಯುತ್ತಿದ್ದು, ಸರ್ವರ್ ಸಮಸ್ಯೆಯಿಂದ ಎತ್ತುವಳಿ ಹಾಗೂ ವಿತರಣೆ ಪ್ರಕ್ರಿಯೆ ವಿಳಂಬವಾಗಿದೆ. ಈ ತಿಂಗಳು ಮುಕ್ತಾಯಗೊಳ್ಳಲು ನಾಲ್ಕೈದು ದಿನಗಳು ಮಾತ್ರ ಬಾಕಿ ಇರುವ ಸಂದರ್ಭದಲ್ಲಿ ಇನ್ನೂ ಶೇ.60ರಷ್ಟು ಪಡಿತರ ವಿತರಣೆ ಬಾಕಿಯಿದೆ. ಹೀಗಾಗಿ, ಅನೇಕ ಕಾರ್ಡುದಾರರಿಗೆ ಈ ತಿಂಗಳ ಧಾನ್ಯ ಸಿಗದೇ ಉಳಿಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೂಡಲೇ ಸರ್ವರ್ ಸಮಸ್ಯೆ ಸರಿಪಡಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.ಸಂಘದ ರಾಜ್ಯ ಉಪಾಧ್ಯಕ್ಷ ರಾಜಶೇಖರ ತಳವಾರ, ದಿನೇಶ ಚಂದ್ರಶೇಖರ ಬಾಗಡೆ, ಶಾಂತಿನಾಥ ಬುಡವಿ, ಉಮಾ ಸೊನವಾಡಕರ, ಬಾಳು ಪಾಟೀಲ, ಬಸವರಾಜ ದೊಡಮನಿ ಸೇರಿದಂತೆ ಹಲವರು ಇದ್ದರು.