ಹಸಿ ಅಡಕೆ ಖರೀದಿಸುವ ವೇಳೆ ಉಂಟಾಗುತ್ತಿರುವ ಅನಾನುಕೂಲತೆ ಸರಿಪಡಿಸಿಕೊಡಬೇಕು. ಈ ಮೂಲಕ ನಾವು ಅನುಭವಿಸುತ್ತಿರುವ ಹಾನಿ ತಪ್ಪಿಸಲು ಮುಂದಾಗಬೇಕು ಎಂದು ಹಸಿ ಅಡಕೆ ಖರೀದಿ ವರ್ತಕರು ಎಪಿಎಂಸಿ ನಿರ್ದೇಶಕರಿಗೆ ಗುರುವಾರ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಶಿರಸಿ

ಹಸಿ ಅಡಕೆ ಖರೀದಿಸುವ ವೇಳೆ ಉಂಟಾಗುತ್ತಿರುವ ಅನಾನುಕೂಲತೆ ಸರಿಪಡಿಸಿಕೊಡಬೇಕು. ಈ ಮೂಲಕ ನಾವು ಅನುಭವಿಸುತ್ತಿರುವ ಹಾನಿ ತಪ್ಪಿಸಲು ಮುಂದಾಗಬೇಕು ಎಂದು ಹಸಿ ಅಡಕೆ ಖರೀದಿ ವರ್ತಕರು ಎಪಿಎಂಸಿ ನಿರ್ದೇಶಕರಿಗೆ ಗುರುವಾರ ಮನವಿ ಸಲ್ಲಿಸಿದರು.

ನಗರದ ಸಹಕಾರಿ ಸಂಸ್ಥೆಗಳಲ್ಲಿ ಹಸಿ ಅಡಕೆ ಖರೀದಿ ಕುರಿತಂತೆ ಬುಧವಾರ ಗೊಂದಲ ಮೂಡಿದ್ದ ಹಿನ್ನೆಲೆ ವರ್ತಕರು ಎಪಿಎಂಸಿ ನಿರ್ದೇಶಕರನ್ನು ಭೇಟಿಯಾಗಿ ತಮ್ಮ ಸಮಸ್ಯೆ ತೋಡಿಕೊಂಡರು.

ಪ್ರಸಕ್ತ ಸಾಲಿನಲ್ಲಿ ಅಡಿಕೆ ಗೊನೆಯಲ್ಲಿ ಜಿಂಗಿನ ಪ್ರಮಾಣ ಜಾಸ್ತಿ ಬರುತ್ತಿದೆ. ಸಂಘಗಳು ಮತ್ತು ನಮ್ಮ ನಡುವೆ ಹಿಂದಿನಿಂದಲೂ ಅವಿನಾಭಾವ ಸಂಬಂಧವಿದೆ. ನಾವು ಇಲ್ಲಿ ಹಸಿ ಅಡಕೆ ಖರೀದಿ ಮಾಡಿಕೊಂಡು ಬಂದಿದ್ದೇವೆ. ಆದರೆ, ಹಸಿ ಅಡಕೆಯ ಜೊತೆ ಜಿಂಗನ್ನೂ ಇದುವರೆಗೂ ಖರೀದಿಸಿದ್ದೇವೆ. ಆದರೆ, ಈ ವರ್ಷ ಅಡಿಕೆಯ ದರವೂ ಜಾಸ್ತಿ, ಜಿಂಗಿನ ಪ್ರಮಾಣ ಜಾಸ್ತಿ ಇರುವ ಕಾರಣ ನಾವೂ ಹಾನಿ ಅನುಭವಿಸುವಂತಾಗಿದೆ. ಹೀಗಾಗಿ, ಜಿಂಗಿನ ತೂಕವನ್ನು ಕಡಿಮೆ ಮಾಡಿಕೊಡಿ ಎಂಬುದು ನಮ್ಮ ಆಗ್ರಹ ಎಂದರು.

ಪ್ರತಿ ಕ್ವಿಂಟಲ್ ಹಸಿ ಅಡಿಕೆಗೆ 10 ಕೆಜಿ ಜಿಂಗಿನ ತೂಕ, 1 ಕೆಜಿ ವೇಸ್ಟೇಜ್ ಕಡಿಮೆ ಮಾಡಬೇಕು. ನಾವು ಖರೀದಿ ಮಾಡಿದ ಅಡಕೆಗೆ ಶೇ. 2.85ರಿಂದ ಶೇ. 3.5ರಷ್ಟು ಕಮಿಷನ್ ನೀಡುತ್ತಿದ್ದೇವೆ. ಈ ಹಣದ ಬಗ್ಗೆಯೂ ಪರಿಶೀಲಿಸಬೇಕು. ಹಸಿ ಅಡಿಕೆ ಖರೀದಿ ಮಾಡಿದಾಗ ಕಚ್ಚಾ ತೂಕ ಮಾತ್ರ ಮಾಡುತ್ತಿದ್ದಾರೆ. ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಪಕ್ಕಾ ತೂಕ ಮಾಡಲಾಗುತ್ತಿಲ್ಲ. ಇದರಿಂದಾಗಿ ನಮಗೆ ತೂಕ ಕಡಿಮೆ ಸಿಗುತ್ತಿದೆ ಎಂದು ವರ್ತಕರು ಆರೋಪಿಸಿದರು.

ನಾವು ಖರೀದಿ ಮಾಡಿದ ಹಸಿ ಅಡಕೆಗೆ ಹಣವನ್ನು ಚೆಕ್ ಮೂಲಕ ಪಾವತಿಸಲು ಸಹಕಾರಿ ಸಂಸ್ಥೆ ಅವಕಾಶ ನೀಡುತ್ತಿಲ್ಲ. ಅಲ್ಲದೇ ನಗದು ಮೂಲಕವೇ ಹಣ ಪಾವತಿಸಬೇಕು ಎಂದು ಆಗ್ರಹಿಸುತ್ತಿರುವುದರಿಂದ ಸಮಸ್ಯೆ ಆಗಿದೆ. ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಹಸಿ ಅಡಕೆ ವ್ಯಾಪಾರಸ್ಥರಾದ ಎಂ.ಜಿ. ಹೆಗಡೆ, ಖಾಲಿದ್ ಸಾಬ್, ಅಶೋಕ ಹೆಗಡೆ, ನಿಸಾರ್ ಅಮು, ಸುಬೇಜ್ ಸಾಬ್, ಶರೀಫ್ ಸಾಬ್ ಮತ್ತಿತರರು ಇದ್ದರು.