ಸಾರಾಂಶ
- ಹೊಸಕೆರೆ ಗ್ರಾಪಂ ಬಳಿ ಲಕ್ಕಂಪುರ ಗ್ರಾಮಸ್ಥರ ಪ್ರತಿಭಟನೆಯಲ್ಲಿ ದಸಂಸ ಸತೀಶ್ ಒತ್ತಾಯ- - - ಕನ್ನಡಪ್ರಭ ವಾರ್ತೆ ಜಗಳೂರು
ಲಕ್ಕಂಪುರ ಗ್ರಾಮದಲ್ಲಿ ಚರಂಡಿ ಅವ್ಯವಸ್ಥೆ ಆಗಿರುವ ಹಿನ್ನೆಲೆ ಹೊಸಕೆರೆ ಗ್ರಾಮ ಪಂಚಾಯಿತಿ ಆಡಳಿತ ಕ್ರಮಕೈಗೊಳ್ಳದೇ ಮೌನ ವಹಿಸಿದೆ. ಆದ್ದರಿಂದ ಲಕ್ಕಂಪುರ ಗ್ರಾಮಸ್ಥರು ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಹೊಸಕೆರೆ ಗ್ರಾಮ ಪಂಚಾಯಿತಿಗೆ ದೌಡಾಯಿಸಿ ಪಂಚಾಯಿತಿ ವಿರುದ್ಧ ಪ್ರತಿಭಟಿಸಿ, ಸಹಾಯಕ ನಿರ್ದೇಶಕ ಅರವಿಂದ್ ಮುಖೇನ ಕಾರ್ಯನಿರ್ವಹಣಾ ಅಧಿಕಾರಿಗೆ ಮನವಿ ಸಲ್ಲಿಸಿದರು.ದಸಂಸ ತಾಲೂಕು ಅಧ್ಯಕ್ಷ ಸತೀಶ್ ಬಿ. ಮಲೆಮಾಚಿಕೆರೆ ಮಾತನಾಡಿ, ಲಕ್ಕಂಪುರ ಹೊಸೂರು ಗ್ರಾಮದಲ್ಲಿ ಸುಮಾರು ವರ್ಷಗಳಿಂದ ದಲಿತರು ವಾಸಿಸುವ ಕೇರಿಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಆದಕಾರಣ ಬಳಸಿದ ನೀರು ಮುಂದಕ್ಕೆ ಹರಿದುಹೋಗದೇ ತೊಂದರೆಯಾಗಿದೆ. ಜೊತೆಗೆ ಕೆಲವರು ಕೊಚ್ಚೆ ನೀರಿನ ಹರಿವಿಗೆ ಅಡ್ಡತಡೆ ಹಾಕಿದ್ದಾರೆ. ಇದರಿಂದ ಕೊಳಕು ನೀರು ಅಲ್ಲಲ್ಲಿ ಸಂಗ್ರಹಣೆಯಾಗಿ ಸೊಳ್ಳೆ ಕಾಟ ಹೆಚ್ಚಾಗುತ್ತಿದೆ. ಇದರಿಂದ ಗ್ರಾಮದಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತ ಇದ್ದಾರೆ ಎಂದು ಆರೋಪಿಸಿದರು.
ಈ ಅವ್ಯವಸ್ಥೆಯಿಂದ ಸಾಂಕ್ರಾಮಿಕ ರೋಗಗಳು ಹಾರಾಡುವ ಭೀತಿ ಎದುರಾಗಿದೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಇದುವರೆಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾತ್ರ ಸ್ಥಳಕ್ಕೆ ಆಗಮಿಸದೇ ಬೇಜವಾಬ್ದಾರಿ ತೋರಿದ್ದಾರೆ. ಈ ಚರಂಡಿ ಅವ್ಯವಸ್ಥೆ ವಿಚಾರವಾಗಿ ಜನಾಂಗೀಯ ಗಲಾಟೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಕೂಡಲೇ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ರಮ ಕೈಗೊಂಡು ಸರಿಯಾದ ಚರಂಡಿ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯಿತಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ದಸಂಸ ಸಂಘಟನಾ ಸಂಚಾಲಕ ಹನುಮಂತಪ್ಪ ಕ್ಯಾಸೇನಹಳ್ಳಿ, ಭರಮಣ್ಣ ನಾಯಕ, ರಮೇಶ್, ರೇಣುಕ ಪ್ರಸಾದ್, ಹನುಮಂತಪ್ಪ, ರಮೇಶ್, ರಾಮಣ್ಣ, ಪಾಲಮ್ಮ, ಶಾರದಮ್ಮ, ಕರಿಯಮ್ಮ, ಅಂಜಿನಮ್ಮ, ಲಕ್ಷ್ಮಿ, ಪ್ರಕಾಶ್ ಸೇರಿದಂತೆ ಅನೇಕ ಗ್ರಾಮಸ್ಥರು ಇದ್ದರು.
- - - -11ಜೆ.ಜಿ.ಎಲ್.2.ಜೆಪಿಜಿ:ಲಕ್ಕಂಪುರ ಗ್ರಾಮದಲ್ಲಿ ಚರಂಡಿ ಅವ್ಯವಸ್ಥೆ ಖಂಡಿಸಿ ಗ್ರಾಮಸ್ಥರು ಹೊಸಕೆರೆ ಗ್ರಾಪಂ ಬಳಿ ದೌಡಾಯಿಸಿ ಪ್ರತಿಭಟಿಸಿ, ಶೀಘ್ರ ಕ್ರಮಕ್ಕಾಗಿ ಮನವಿ ಸಲ್ಲಿಸಿದರು.