ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ರೈತರಿಗೆ ಅನುಕೂಲವಾಗಲು ಕಂಬೈಂಡ್ ಹಾರ್ವೆಸ್ಟರ್ ಯಂತ್ರಗಳ ಮೂಲಕ ಭತ್ತ ಹಾಗೂ ರಾಗಿ ಬೆಳೆಗಳ ಕಟಾವಿನ ಬಾಡಿಗೆ ದರ ನಿಗದಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.ನಗರದ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಸಭೆ ನಡೆಸಿ ಮಾತನಾಡಿ, 2024 -25ನೇ ಸಾಲಿನಲ್ಲಿ ಮಂಡ್ಯ ಜಿಲ್ಲೆಯ ನೆರೆಯ ಜಿಲ್ಲೆಗಳ ವ್ಯಾಪ್ತಿಯಲ್ಲಿ ಭತ್ತ ಕಂಬೈಂಡ್ ಹಾರ್ವೆಸ್ಟರ್‌ಗಳ ಬಾಡಿಗೆ ದರ ನಿಗದಿಪಡಿಸಿದರು.
ಚೈನ್ ಮಾದರಿ ಭತ್ತದ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ 2,500 ರು., ಟೈರ್ (ಗ್ರೀಪ್) ಮಾದರಿ ಭತ್ತದ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ 2000 ರು, ಟೈರ್ (ಸಾಮಾನ್ಯ) ಮಾದರಿ ಭತ್ತದ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ 1,800 ರು. ಹಾಗೂ ರಾಗಿ ಯಂತ್ರಕ್ಕೆ ಪ್ರತಿ ಗಂಟೆಗೆ 2,900 ರು. ನಿಗದಿ ಪಡಿಸಿದರು.ಜಿಲ್ಲೆಯಲ್ಲಿ 2024-25 ನೇ ಸಾಲಿನ ಮುಂಗಾರು ಹಂಗಾಮಿನ ಭತ್ತ ಬೆಳೆಯ ಒಟ್ಟು ವಿಸ್ತೀರ್ಣ - 57,804 ಹೆಕ್ಟೇರ್, ರಾಗಿ- 54,018 ಹೆಕ್ಟೇರ್ ಹಾಗೂ ಕಬ್ಬು ಬೆಳೆಯ ವಿಸ್ತೀರ್ಣವು- 40,361 ಹೆಕ್ಟೇರ್ ಇದೆ ಎಂದರು.
ಕರ್ನಾಟಕ ರೈತ ಸುರಕ್ಷಾ -ಪ್ರಧಾನ ಮಂತ್ರಿ ಬಿಮಾ (ವಿಮಾ) ಯೋಜನೆಯಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಅಕಾಲಿಕ ಮಳೆ ಮುಂತಾದ ಪ್ರಕೃತಿ ವಿಕೋಪಗಳು ಸೇರಿದಂತೆ ಹಲವು ಕಾರಣಗಳಿಂದ ಬೆಳಗಿನಷ್ಟ ಸಂಭವಿಸಿದ್ದರೆ ರೈತರಿಗೆ ಪರಿಹಾರ ನೀಡಿ ಭದ್ರತೆ ಒದಗಿಸುವುದು. ರೈತರಿಗೆ ಕೃಷಿಯಲ್ಲಿ ಆಧುನಿಕ ಬೇಸಾಯ ಪದ್ಧತಿ ಹೆಚ್ಚಿನ ಪರಿಕರ ಹಾಗೂ ಉನ್ನತ ಮಟ್ಟದ ತಂತ್ರಜ್ಞಾನವನ್ನು ಅಳವಡಿಸಲು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಭೀಮಾ ಯೋಜನೆಯು ಗ್ರಾಪಂ ಮಟ್ಟದಲ್ಲಿ ಹಿಂಗಾರು ಹಂಗಾಮಿಗೆ ಮದ್ದೂರು, ಮಂಡ್ಯ, ನಾಗಮಂಗಲ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲೂಕುಗಳ ಅಧಿಸುಚಿತ ಗ್ರಾಪಂಗಳಲ್ಲಿ ಹುರುಳಿ (ಮಳೆಯಾಶ್ರಿತ) ಬೆಳೆಗೆ ರೈತರು ಬೆಳೆ ವಿಮೆಗೆ, ಬೇಸಿಗೆ ಹಂಗಾಮಿಗೆ ಮಂಡ್ಯ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲೂಕುಗಳ ಅಧಿಸೂಚಿತ ಗ್ರಾಪಂಗಳಲ್ಲಿ ಭತ್ತ (ನೀರಾವರಿ) ಬೆಳೆಗೆ ರೈತರು ಬೆಳೆ ವಿಮೆಗೆ ನೋಂದಾಯಿಸಬಹುದು ಎಂದರು.
ಹೋಬಳಿ ಮಟ್ಟದಲ್ಲಿ ಹಿಂಗಾರು ಹಂಗಾಮಿಗೆ ಮಂಡ್ಯ, ಮದ್ದೂರು, ಮಳವಳ್ಳಿ, ಪಾಂಡವಪುರ, ಕೆ.ಆರ್.ಪೇಟೆ, ನಾಗಮಂಗಲ ಅಧಿಸೂಚಿತ ಹೋಬಳಿಗಳಲ್ಲಿ ಭತ್ತ (ನೀರಾವರಿ), ರಾಗಿ (ನೀರಾವರಿ), ರಾಗಿ (ಮಳೆ ಆಶ್ರಿತ) ಮತ್ತು ಹುರುಳಿ (ಮಳೆಯಾಶ್ರಿತ) ಬೆಳೆಗಳಿಗೆ ರೈತರು ಬೆಳೆ ವಿಮೆಗೆ, ಪಾಂಡವಪುರ ತಾಲೂಕಿನ ಚಿನಕುರಳಿ, ಮೇಲುಕೋಟೆ ಮತ್ತು ಕಸಬಾ ಹೋಬಳಿಗಳಲ್ಲಿ ಟಮೋಟ ಬೆಳೆಗೆ ವಿಮೆಗೆ ನೋಂದಾಯಿಸಬಹುದು ಎಂದರು.ಬೇಸಿಗೆ ಹಂಗಾಮಿಗೆ ಮಂಡ್ಯ, ಮದ್ದೂರು, ಮಳವಳ್ಳಿ, ಪಾಂಡವಪುರ, ಕೆ.ಆರ್.ಪೇಟೆ, ನಾಗಮಂಗಲ ಅಧಿಸೂಚಿತ ಹೋಬಳಿಗಳಲ್ಲಿ ಭತ್ತ (ನೀರಾವರಿ) ಮತ್ತು ರಾಗಿ (ನೀರಾವರಿ) ಬೆಳೆಗಳಿಗೆ ರೈತರು ಬೆಳೆ ವಿಮೆಗೆ ಹಾಗೂ ಪಾಂಡವಪುರ ತಾಲೂಕಿನ ಮೇಲುಕೋಟೆ ಹೋಬಳಿಯಲ್ಲಿ ಟಮೋಟ ಬೆಳೆಗೆ ನೋಂದಾಯಿಸಬಹುದು ಎಂದರು.
2024 -25 ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮದಲ್ಲಿ ನೀರಿನ ಮಿತ ಬಳಕೆ ಹಾಗೂ ಲಭ್ಯವಿರುವ ನೀರನ್ನು ಸಮರ್ಥ ಬಳಕೆ ಮಾಡುವಲ್ಲಿ ಅನುವಾಗುವಂತೆ ಸೂಕ್ಷ್ಮ ನೀರಾವರಿ ಘಟಕಗಳಾದ ತುಂತುರು ಹಾಗೂ ಹನಿ ನೀರಾವರಿ ಘಟಕಗಳನ್ನು ಅಳವಡಿಸಿಕೊಳ್ಳಲು ಎಲ್ಲಾ ಅರ್ಹ ಸಣ್ಣ, ಅತಿ ಸಣ್ಣ ರೈತರಿಗೆ ಗರಿಷ್ಠ ಎರಡು ಹೆಕ್ಟೇರ್ ಪ್ರದೇಶದವರೆಗೆ ಶೇ.90% ರವರೆಗೂ ಸಹಾಯಧನ ನೀಡಲಾಗುವುದು ಎಂದರು.ಎರಡು ಹೆಕ್ಟೇರ್ ಮೇಲ್ಪಟ್ಟ ದೊಡ್ಡ ರೈತರಿಗೆ ಶೇ.45% ರಷ್ಟು ಸಹಾಯಧನ ನೀಡಲಾಗುತ್ತದೆ. ಜಿಲ್ಲೆಯ ರೈತರಿಗೆ ಅನುಕೂಲವಾಗುವಂತೆ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿಯನ್ನು ಒದಗಿಸುವಲ್ಲಿ ಕೃಷಿ ಇಲಾಖೆ ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಪಂ ಸಿಇಒ ಶೇಖ್ ತನ್ವಿರ್ ಆಸೀಫ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್ ಸೇರಿದಂತೆ ಅಧಿಕಾರಿಗಳು, ರೈತ ಮುಖಂಡರು ಇದ್ದರು.