ಸಾರಾಂಶ
ಗದಗ: 2023-24ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ಕುಸುಬೆ ಉತ್ಪನ್ನ ಖರೀದಿಸಲು ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ನೋಂದಣಿ ಪ್ರಕ್ರಿಯೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಹೇಳಿದರು.
ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಮಂಗಳವಾರ 2023-24ನೇ ಸಾಲಿನ ಹಿಂಗಾರು ಹಂಗಾಮಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕುಸುಬೆ ಹುಟ್ಟುವಳಿ ಖರೀದಿಸುವ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸರ್ಕಾರದ ಮಾನದಂಡಗಳನ್ವಯ ಎಫ್.ಎ.ಕ್ಯೂ ಗುಣಮಟ್ಟ ದೃಢೀಕರಿಸಲು ಕ್ರಮ ವಹಿಸಬೇಕು.ಖರೀದಿ ಏಜೆನ್ಸಿಯವರು ತಮ್ಮ ಸಂಸ್ಥೆಯ ಹಿರಿಯ ಅಧಿಕಾರಿಗಳು ಮೇಲುಸ್ತುವಾರಿ ತಪಾಸಣೆ ಕೈಗೊಳ್ಳಬೇಕು. ಪ್ರತಿ ಖರೀದಿ ಕೇಂದ್ರಕ್ಕೆ ಗ್ರೇಡರ್‌ಗಳನ್ನು ನೇಮಿಸಬೇಕು. ಜಿಲ್ಲೆಯ ಪ್ರತಿ ರೈತರಿಂದ ಎಕರೆಗೆ 5 ಕ್ವಿಂಟಲ್ ನಂತೆ ಗರಿಷ್ಟ 15 ಕ್ವಿಂಟಲ್ ಎಫ್.ಎ.ಕ್ಯೂ ಗುಣಮಟ್ಟದ ಕುಸುಬೆ ಖರೀದಿಸಲು ಹಾಗೂ ಖರೀದಿ ಸಂಸ್ಥೆಗಳು ಯಾವುದೇ ರೀತಿಯ ದುರುಪಯೋಗ ಆಗದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ವಹಿಸಬೇಕೆಂದು ಸೂಚಿಸಿದರು.
ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಮಾತನಾಡಿ, ಎಫ್.ಎ.ಕ್ಯೂ ಗುಣಮಟ್ಟದ ಕುಸುಬೆ ಹುಟ್ಟುವಳಿಗೆ ಪ್ರತಿ ಕ್ವಿಂಟಲ್‍ಗೆ ₹5800 ರಂತೆ ಬೆಲೆ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರದ ಆದೇಶ ಜು.1ರ ಅನುಸಾರ ನ್ಯಾಪೆಡ್ ಸಂಸ್ಥೆಯನ್ನು ಕೇಂದ್ರದ ಖರೀದಿ ಏಜೆನ್ಸಿಯಾಗಿ ಮತ್ತು ಇವರನ್ನು ರಾಜ್ಯ ಮಟ್ಟದ ಖರೀದಿ ಏಜೆನ್ಸಿಯನ್ನಾಗಿ ನೇಮಿಸಿದ್ದು, ರೈತರು ನೋಂದಣಿ ಕಾಲಾವಧಿಯನ್ನು ಆದೇಶದ ದಿನಾಂಕದಿಂದ 45 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನೋಂದಣಿ ಕಾರ್ಯದ ಜತೆಗೆ ಖರೀದಿ ಪ್ರಕ್ರಿಯೆ ಜರುಗಿಸಲಾಗುವುದು ಎಂದರು.ಜಿಲ್ಲೆಯ 10 ಕಡೆ ಖರೀದಿ ಕೇಂದ್ರ ತೆರೆಯಲು ತೀರ್ಮಾನಿಸಲಾಯಿತು.ಸಭೆಯಲ್ಲಿ ಕೃಷಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ತೋಟಗಾರಿಕೆ ಇಲಾಖೆ, ಸಹಕಾರಿ ಸಂಘಗಳ ಇಲಾಖೆಯ ಕೆಓಎಫ್ ವ್ಯವಸ್ಥಾಪಕರು ಇದ್ದರು.
ಕುಸುಬೆ ಖರೀದಿ ಕೇಂದ್ರಗಳು: ಗದಗ ತಾಲೂಕು-ಬಳಗಾನೂರ, ಹೊಂಬಳ, ಮುಳಗುಂದ, ಶಿರಹಟ್ಟಿ ತಾಲೂಕು-ರಣತೂರ, ಮಾಗಡಿ,ರೋಣ ತಾಲೂಕು-ಅಬ್ಬಿಗೇರಿ, ಸೂಡಿ, ನಿಡಗುಂದಿ, ಮುಂಡರಗಿ- ಬರದೂರ, ನರಗುಂದ- ಕಣಕಿಕೊಪ್ಪ