ಹಾಲು ಉತ್ಪಾದನೆಯಲ್ಲಿ ರಾಜ್ಯಕ್ಕೆ ಮಂಡ್ಯ ಜಿಲ್ಲೆ ಪ್ರಥಮ: ಬಿ.ಆರ್‌.ರಾಮಚಂದ್ರ

| Published : Jul 04 2024, 01:00 AM IST

ಹಾಲು ಉತ್ಪಾದನೆಯಲ್ಲಿ ರಾಜ್ಯಕ್ಕೆ ಮಂಡ್ಯ ಜಿಲ್ಲೆ ಪ್ರಥಮ: ಬಿ.ಆರ್‌.ರಾಮಚಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಅತಿ ಹೆಚ್ಚು ಹಾಲು ಸರಬರಾಜು ಮಾಡುವ ಒಕ್ಕೂಟವಾಗಿದೆ. ಒಕ್ಕೂಟದಿಂದ 10 ಕೋಟಿ ರು.ಗೂ ಹೆಚ್ಚು ವಿಮೆ ಮಾಡಿಸಲಾಗಿದ್ದು, ಹಸುಗಳಿಗೆ ತೊಂದರೆಯಾದರೆ ರೈತರಿಂದ ನಷ್ಟ ಭರಿಸಲು ಸಾಧ್ಯವಾಗುವುದಿಲ್ಲ ಎಂದು ಒಕ್ಕೂಟದಿಂದ ರಾಸು ವಿಮೆ ಮಾಡಿಸಲಾಗಿದೆ. ಉತ್ಪಾದಕರು ಇದರ ಪ್ರಯೋಜನ ಪಡೆಯಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ನಿತ್ಯ ಹನ್ನೊಂದೂವರೆ ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುವ ಮೂಲಕ ರಾಜ್ಯದಲ್ಲೇ ಮೊದಲನೇ ಸ್ಥಾನದಲ್ಲಿದೆ ಎಂದು ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ ತಿಳಿಸಿದರು.

ತಾಲೂಕಿನ ಜಿ.ಹೊಸಹಳ್ಳಿ, ಹಾಲು ಉತ್ಪಾದಕರ ಸಹಕಾರ ಸಂಘದ ಹಾಲು ಶೀತಲೀಕರಣ (ಬಿಎಂಸಿ) ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಒಕ್ಕೂಟ ಗುಣಮಟ್ಟದಲ್ಲೂ ಒಳ್ಳೆಯ ಸ್ಥಾನದಲ್ಲಿದೆ. ಎಲ್ಲರ ಸಹಕಾರವಿಲ್ಲದೆ ಹೋದರೆ ಯಾವುದೇ ಸಂಘಗಳು ಮುಂದೆ ಬರಲು ಸಾಧ್ಯವಿಲ್ಲ ಎಂದರು.

ಸಹಕಾರ ಸಂಘಗಳು, ಮನ್‌ಮುಲ್ ಅಭಿವೃದ್ಧಿಯತ್ತ ಮುನ್ನಡೆಯಬೇಕಾದರೆ ಉತ್ಪಾದಕರು ಗುಣಮಟ್ಟದ ಹಾಲನ್ನು ಡೇರಿಗೆ ಹಾಕಬೇಕು. ಸಹಕಾರ ಸಂಘಗಳು ನಮ್ಮದು ಎನ್ನುವ ಮನೋಭಾವ ಬಂದಾಗ ಸಂಘಗಳು ಅಭಿವೃದ್ಧಿ ಹೊಂದುತ್ತವೆ ಎಂದರು.

ಎರಡು ಹಸುಗಳನ್ನು ಸಾಕಿ ಉತ್ಪಾದಕರು ಡೇರಿಗೆ ಹಾಲು ಸರಬರಾಜು ಮಾಡಿದರೆ ಪ್ರತಿವಾರ ಹಣ ಸಂದಾಯವಾಗುತ್ತದೆ. ಆದ್ದರಿಂದ ನಿರುದ್ಯೋಗಿ ಯುವಕ ಮಿತ್ರರು ಉದ್ಯೋಗಕ್ಕೆ ಅಲೆಯದೆ ಹೈನುಗಾರಿಕೆ ಕೈಗೊಂಡರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದರು.

ಮನ್‌ಮುಲ್ ಉಪಾಧ್ಯಕ್ಷ ಎಂ.ಎಸ್.ರಘುನಂದನ್ ಮಾತನಾಡಿ, ಜಿಲ್ಲಾ ಹಾಲು ಒಕ್ಕೂಟ ಅತಿ ಹೆಚ್ಚು ಹಾಲು ಸರಬರಾಜು ಮಾಡುವ ಒಕ್ಕೂಟವಾಗಿದೆ. ಒಕ್ಕೂಟದಿಂದ 10 ಕೋಟಿ ರು.ಗೂ ಹೆಚ್ಚು ವಿಮೆ ಮಾಡಿಸಲಾಗಿದ್ದು, ಹಸುಗಳಿಗೆ ತೊಂದರೆಯಾದರೆ ರೈತರಿಂದ ನಷ್ಟ ಭರಿಸಲು ಸಾಧ್ಯವಾಗುವುದಿಲ್ಲ ಎಂದು ಒಕ್ಕೂಟದಿಂದ ರಾಸು ವಿಮೆ ಮಾಡಿಸಲಾಗಿದೆ. ಉತ್ಪಾದಕರು ಇದರ ಪ್ರಯೋಜನ ಪಡೆಯುವಂತೆ ತಿಳಿಸಿದರು.

ಉತ್ಪಾದಕರು ಗುಣಮಟ್ಟದ ಹಾಲನ್ನು ಸರಬರಾಜು ಮಾಡಿದರೆ ಹಲವು ಸೌಲಭ್ಯ ಪಡೆಯಬಹುದು. ಉತ್ಪಾದಕರಿಗಾಗಿ ಮ್ಯಾಟ್, ಹಾಲು ಕರೆಯುವ ಯಂತ್ರ, ಚಾಪ್ ಕಟ್ಟರ್ ಸೇರಿದಂತೆ ಮನ್ಮುಲ್‌ನಿಂದ ಹಲವು ಯೋಜನೆ ರೂಪಿಸಲಾಗಿದೆ ಎಂದರು.

ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಆರ್.ಮಂಜೇಶ್ ಮಾತನಾಡಿ, ಜಾನುವಾರುಗಳನ್ನು ಸಾಕಿರುವ ಎಲ್ಲಾ ಹಾಲು ಉತ್ಪಾದಕರು ತಪ್ಪದೇ ರಾಸುಗಳಿಗೆ ವಿಮಾ ಸೌಲಭ್ಯ ಮಾಡಿಸಿಕೊಳ್ಳಬೇಕು. ರಾಸುಗಳು ಮರಣ ಹೊಂದಿದರೆ 40 ದಿನದಲ್ಲೇ ಇನ್ಷೂರೆನ್ಸ್ ಹಣ ಬರುತ್ತದೆ ಎಂದರು.

ಮನ್ ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್, ಮಂಡ್ಯ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಎ.ಎನ್. ಮಂಜೇಶ್ ಗೌಡ, ಮಾರ್ಗ ವಿಸ್ತರಣಾಧಿಕಾರಿ ಎಂ.ಲಕ್ಷ್ಮಿ, ನೌಕರರ ಯೂನಿಯನ್ ಅಧ್ಯಕ್ಷ ಜಿ.ಕೆ.ಶಿವಕುಮಾರ್, ಜಿ.ಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಲ್.ಧನಂಜಯ, ಉಪಾಧ್ಯಕ್ಷೆ ಸಾವಿತ್ರಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ನಾಗೇಶ್, ಗ್ರಾಪಂ ಅಧ್ಯಕ್ಷೆ ಇಂದ್ರಮ್ಮ, ಸದಸ್ಯರಾದ ಅಜಯ್, ಚಿಕ್ಕ ಬೋರಯ್ಯ ಇತರರಿದ್ದರು.