ಅಧಿಕಾರಿ-ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಸಮತಟ್ಟು ಸ್ಥಳ, ಮೆಟ್ಟಿಲು ಧ್ವಂಸ

| Published : May 23 2024, 01:04 AM IST

ಅಧಿಕಾರಿ-ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಸಮತಟ್ಟು ಸ್ಥಳ, ಮೆಟ್ಟಿಲು ಧ್ವಂಸ
Share this Article
  • FB
  • TW
  • Linkdin
  • Email

ಸಾರಾಂಶ

ಹುಕ್ಕೇರಿ ತಾಲೂಕಿನ ಸಾರಾಪುರ ಗ್ರಾಮದ ಪರಿಶಿಷ್ಟ ಜಾತಿ (ಎಸ್‌ಸಿ) ಕಾಲೋನಿಯಲ್ಲಿ ಲಕ್ಷಾಂತರ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ಸಮತಟ್ಟು ಪ್ರದೇಶ ಮತ್ತು ಮೆಟ್ಟಿಲುಗಳನ್ನು ಧ್ವಂಸ ಮಾಡಲಾಗಿದೆ. ಜಲಜೀವನ ಮಿಷನ್ (ಜೆಜೆಎಂ) ಯೋಜನೆಯಡಿ ಓವರ್ ಹೆಡ್ ಟ್ಯಾಂಕ್ (ಒಎಚ್‌ಟಿ) ನಿರ್ಮಿಸಲು ಈ ಸ್ಥಳವನ್ನು ಅಪಾರ ಪ್ರಮಾಣದಲ್ಲಿ ಅಗೆದು ಕಂದಕ ಸೃಷ್ಟಿಸಲಾಗಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ತಾಲೂಕಿನ ಸಾರಾಪುರ ಗ್ರಾಮದ ಪರಿಶಿಷ್ಟ ಜಾತಿ (ಎಸ್‌ಸಿ) ಕಾಲೋನಿಯಲ್ಲಿ ಲಕ್ಷಾಂತರ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ಸಮತಟ್ಟು ಪ್ರದೇಶ ಮತ್ತು ಮೆಟ್ಟಿಲುಗಳನ್ನು ಧ್ವಂಸ ಮಾಡಲಾಗಿದೆ. ಜಲಜೀವನ ಮಿಷನ್ (ಜೆಜೆಎಂ) ಯೋಜನೆಯಡಿ ಓವರ್ ಹೆಡ್ ಟ್ಯಾಂಕ್ (ಒಎಚ್‌ಟಿ) ನಿರ್ಮಿಸಲು ಈ ಸ್ಥಳವನ್ನು ಅಪಾರ ಪ್ರಮಾಣದಲ್ಲಿ ಅಗೆದು ಕಂದಕ ಸೃಷ್ಟಿಸಲಾಗಿದೆ.

ಸಮತಟ್ಟು ಪ್ರದೇಶ ಮತ್ತು ಮೆಟ್ಟಿಲುಗಳನ್ನು ನಾಶಪಡಿಸಿ ವರ್ಷ ಕಳೆದರೂ ಸಂಬಂಧಿಸಿದವರು ಅದನ್ನು ಮರು ಸೃಷ್ಟಿಸಿ ಸಮಸ್ಯೆ ಸರಿಪಡಿಸುವ ಗೋಜಿಗೆ ಹೋಗಿಲ್ಲ ಎಂಬ ಅಸಮಾಧಾನಗಳು ಕೇಳಿ ಬಂದಿವೆ. ಈ ಸ್ಥಳದಲ್ಲಿಯೇ ಈ ಹಿಂದೆಯೂ ಶುದ್ಧ ಕುಡಿಯುವ ನೀರಿನ ಘಟಕ, ಜಲಕುಂಭ ನಿರ್ಮಿಸಿದ್ದರೂ ಇಲ್ಲಿನ ಜನರಿಗೆ ಸರಿಯಾಗಿ ನೀರು ಪೂರೈಸಲು ಸಾಧ್ಯವಾಗಿರಲಿಲ್ಲ.ಸಾರಾಪುರ ಗ್ರಾಮದ ಎಸ್‌ಸಿ ಕಾಲೋನಿಯ ಸಮುದಾಯ ಭವನ ಮತ್ತು ಯುವಜನ ಕೇಂದ್ರದ ಮುಂಭಾಗದ ಆವರಣವನ್ನೇ ಧ್ವಂಸಗೊಳಿಸುವ ಮೂಲಕ ಗುತ್ತಿಗೆದಾರ ಮಾಡಿರುವ ಕೆಲಸ ದಲಿತರ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿ ಮತ್ತು ಅಧಿಕಾರಿಗಳೂ ಕೈಜೋಡಿಸಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ.ಈ ಕಿಷ್ಕಿಂಧೆ ಪ್ರದೇಶದಲ್ಲಿ ಒಎಚ್‌ಟಿ ಸ್ಥಾಪಿಸುವ ಮೂಲಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗದ ಅಧಿಕಾರಿ-ಸಿಬ್ಬಂದಿ ಮೂಲ ಉದ್ದೇಶವನ್ನೇ ಮಣ್ಣುಪಾಲು ಮಾಡಿದ್ದಾರೆ. ಈ ನಡುವೆ ಯೋಜನೆ ಯಶಸ್ಸಿಗೆ ಸಾಧಕ-ಬಾಧಕಗಳನ್ನು ಅವಲೋಕಿಸದೇ ಓವರ್ ಹೆಡ್ ಟ್ಯಾಂಕ್ ನಿರ್ಮಿಸುತ್ತಿರುವ ಕಾಮಗಾರಿಯೇ ಅವೈಜ್ಞಾನಿಕವಾಗಿದೆ. ಹಾಗಾಗಿ ಶುದ್ಧ ಕುಡಿಯುವ ನೀರು ಸೇವಿಸುವ ಎಸ್‌ಸಿ ಜನರ ಕನಸು ಇನ್ನೂ ಮರೀಚಿಕೆಯಾಗಿದೆ.ಇನ್ನು ಇದೇ ಆವರಣದಲ್ಲಿನ ಸಮುದಾಯ ಭವನದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಕ್ಕಳ ಪೂರ್ವ ಪ್ರಾಥಮಿಕ ಕಲಿಕೆಗೆ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ. ಜತೆಗೆ ಈ ಎಸ್‌ಸಿ ಕಾಲೋನಿಯ ಸಭೆ, ಸಮಾರಂಭಗಳನ್ನು ಆಯೋಜಿಸಲು ಈ ಪ್ರದೇಶವನ್ನೇ ಆಶ್ರಯಿಸಲಾಗಿದೆ. ಆದರೆ, ಅಪಾರ ಪ್ರಮಾಣದಲ್ಲಿ ನೆಲ ಅಗೆದು ತೆಗ್ಗು ಪ್ರದೇಶವನ್ನಾಗಿ ಮಾಡಿದ್ದರಿಂದ ಅಂಗನವಾಡಿ ಮಕ್ಕಳಿಗೆ ಯಾವ ಸಂದರ್ಭದಲ್ಲಿ ಅಪಾಯ ಎದುರಾಗಬಹುದೆಂಬ ಆತಂಕವನ್ನು ಪಾಲಕ-ಪೋಷಕರು ಹೊರಹಾಕಿದ್ದಾರೆ. ಇಲ್ಲಿನ ನಿವಾಸಿಗಳು ಕೂಡ ಆತಂಕದಲ್ಲಿಯೇ ಕಾಲ ಕಳೆಯಬೇಕಿದೆ.ಸಮತಟ್ಟು ಪ್ರದೇಶಲ್ಲಿ ನೆಲ ಅಗೆದು ಕಂದಕ ಸೃಷ್ಟಿಸಿರುವುದು ಮತ್ತು ಮೆಟ್ಟಿಲುಗಳನ್ನು ನಾಶಪಡಿಸಿರುವ ಗುತ್ತಿಗೆದಾರ ಹಾಗೂ ಅಧಿಕಾರಿಗಳ ಮೇಲೆ ಎಸ್ಸಿಎಸ್ಟಿ ದೌರ್ಜನ್ಯ ನಿಯಂತ್ರಣ (ಅಟ್ರ್ಯಾಸಿಟಿ) ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಲು ಇಲ್ಲಿನ ದಲಿತರು ಮುಂದಾಗಿದ್ದಾರೆ. ಇದೇ ವೇಳೆ ಈ ಸಂಬಂಧ ನ್ಯಾಯಾಲಯದಲ್ಲಿಯೂಸಂಬಂಧಿಸಿದವರ ಮೇಲೆ ಖಾಸಗಿ ದೂರು ದಾಖಲಿಸಲು ಕೂಡ ಅಗತ್ಯ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂಬ ಮಾಹಿತಿಯಿದೆ.ಸಾರಾಪುರ ಗ್ರಾಮದ ಎಸ್ಸಿ ಜನರು ವಾಸಿಸುವ ಪ್ರದೇಶದಲ್ಲಿ ಅಪಾಯಕಾರಿ ಟ್ಯಾಂಕ್ ನಿರ್ಮಿಸುತ್ತಿರುವ ಕುರಿತು ತನಿಖೆ ನಡೆಸಲಾಗುವುದು. ತಪ್ಪು ಕಂಡು ಬಂದಲ್ಲಿ ಅಂಥವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಸೂಚಿಸಲಾಗುವುದು.

-ರಾಹುಲ್ ಶಿಂಧೆ,

ಜಿಪಂ ಸಿಇಒ.ಜೆಜೆಎಂ ಯೋಜನೆಯಡಿ ಒಎಚ್‌ಟಿ ನಿರ್ಮಿಸಲು ಎಸ್‌ಸಿ ಕಾಲೋನಿಯಲ್ಲಿ ಅಭಿವೃದ್ಧಿಪಡಿಸಿದ ಸ್ಥಳವನ್ನೇ ನಾಶಪಡಿಸಿದ ಗುತ್ತಿಗೆದಾರ ಮತ್ತು ಇಂಜನೀಯರಗೆ ನೋಟಿಸ್ ನೀಡಲಾಗುವುದು. ಈ ಮೂಲಕ ಸಮಸ್ಯೆ ಇತ್ಯರ್ಥ ಪಡಿಸಲಾಗುವುದು.

-ರಾಜೇಂದ್ರ ಜಾಧವ,
ಪ್ರಭಾರಿ ಎಇಇ ಆರ್‌ಡಿಡಬ್ಲ್ಯೂಎಸ್