ಹರಿಹರದಲ್ಲಿ ಫ್ಲೆಕ್ಸ್‌ ಹಾವಳಿ: ಡಿಸಿ ಸೂಚನೆಗೂ ಕಿಮ್ಮತ್ತಿಲ್ಲ!

| Published : Mar 12 2025, 12:50 AM IST

ಹರಿಹರದಲ್ಲಿ ಫ್ಲೆಕ್ಸ್‌ ಹಾವಳಿ: ಡಿಸಿ ಸೂಚನೆಗೂ ಕಿಮ್ಮತ್ತಿಲ್ಲ!
Share this Article
  • FB
  • TW
  • Linkdin
  • Email

ಸಾರಾಂಶ

ಮಾ.18ರಿಂದ ಆರಂಭವಾಗುವ ಹರಿಹರ ಗ್ರಾಮದೇವತೆ ಉತ್ಸವದ ಹಿನ್ನೆಲೆ ನಗರದ ಹಲವಾರು ರಸ್ತೆ, ವೃತ್ತಗಳಲ್ಲಿ ಕೆಲ ಬೃಹತ್‌ ಫ್ಲೆಕ್ಸ್, ಬೋರ್ಡ್‍ಗಳನ್ನು ನಿಯಯ ಉಲ್ಲಂಘಿಸಿ ಅಳವಡಿಸಲಾಗಿದೆ. ಸಾಲು ಮರಗಳು, ರಸ್ತೆಗಳ ತಿರುವುಗಳಲ್ಲಿಯೂ ಅಳವಡಿಸಿರುವ ಫ್ಲೆಕ್ಸ್‌ ಬೋರ್ಡ್‍ಗಳು ಪಾದಚಾರಿ, ವಾಹನಗಳ ಸುಗಮ ಸಂಚಾರಕ್ಕೆ ಸಮಸ್ಯೆ ಸೃಷ್ಠಿಸುತ್ತಿವೆ.

- ಅನಧಿಕೃತ ಫ್ಲೆಕ್ಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಆದೇಶ ಸ್ಪಷ್ಟ ಉಲ್ಲಂಘನೆ

- - - ಕನ್ನಡಪ್ರಭ ವಾರ್ತೆ ಹರಿಹರ ಮಾ.18ರಿಂದ ಆರಂಭವಾಗುವ ಹರಿಹರ ಗ್ರಾಮದೇವತೆ ಉತ್ಸವದ ಹಿನ್ನೆಲೆ ನಗರದ ಹಲವಾರು ರಸ್ತೆ, ವೃತ್ತಗಳಲ್ಲಿ ಕೆಲ ಬೃಹತ್‌ ಫ್ಲೆಕ್ಸ್, ಬೋರ್ಡ್‍ಗಳನ್ನು ನಿಯಯ ಉಲ್ಲಂಘಿಸಿ ಅಳವಡಿಸಲಾಗಿದೆ. ಸಾಲು ಮರಗಳು, ರಸ್ತೆಗಳ ತಿರುವುಗಳಲ್ಲಿಯೂ ಅಳವಡಿಸಿರುವ ಫ್ಲೆಕ್ಸ್‌ ಬೋರ್ಡ್‍ಗಳು ಪಾದಚಾರಿ, ವಾಹನಗಳ ಸುಗಮ ಸಂಚಾರಕ್ಕೆ ಸಮಸ್ಯೆ ಸೃಷ್ಠಿಸುತ್ತಿವೆ.

10ರಿಂದ 20 ಅಡಿವರೆಗಿನ ಬೋರ್ಡ್‍ಗಳ ಅಳವಡಿಕೆಯಿಂದ ಅಂಗಡಿ ಮುಂಗಟ್ಟುಗಳು ಜನರಿಗೆ ಗೋಚರವಾಗದಂತಾಗಿವೆ. ಈಗಾಗಲೇ ಲಾಭದಾಯಕ ವ್ಯಾಪಾರವೇ ಇಲ್ಲ ಎಂದು ಹೋಟೆಲ್, ಕಿರಾಣಿ, ಬಟ್ಟೆ ಮತ್ತಿತರೆ ವರ್ತಕರು ಬೇಸರದಲ್ಲಿದ್ದಾರೆ. ಈಗ ದೊಡ್ಡ ದೊಡ್ಡ ಫ್ಲೆಕ್ಸ್‌ ಬೋರ್ಡ್‌ಗಳಿಂದಾಗಿ ಇನ್ನಷ್ಟು ಆರ್ಥಿಕ ನಷ್ಟ ಕಾಣಬೇಕಾದ ಆತಂಕ ವ್ಯಕ್ತಪಡಿಸಿದ್ದಾರೆ.

ರಸ್ತೆ ಮಧ್ಯದ ವಿದ್ಯುತ್ ಕಂಬ, ರಸ್ತೆ ಬದಿಯ ಮರಗಳನ್ನೂ ಬಿಡದೇ ಫ್ಲೆಕ್ಸ್ ಹಾಕಲಾಗಿದೆ. ಇದರಿಂದ ಸಹಜವಾಗಿ ನಗರ ಸೌಂದರ್ಯಕ್ಕೆ ಅಡ್ಡಿಯಾಗಿದೆ. ಈ ಬೋರ್ಡ್‌ಗಳಿಂದಾಗಿ ಮುಂದೆ, ಹಿಂದೆ ಯಾವ ವಾಹನಗಳು ಬರುತ್ತಿವೆ ಎಂಬುದು ಚಾಲಕರಿಗೆ, ಪಾದಚಾರಿಗಳಿಗೆ ಗೋಚರವಾಗದೇ ಕಿರಿಕಿರಿ ಆಗುತ್ತಿದೆ. ರಸ್ತೆಗಳ ತಿರುವುಗಳ ಮಧ್ಯದಲ್ಲಿ ಅಳವಡಿಸಿರುವ ಬೋರ್ಡ್‍ಗಳ ಅಂಚುಗಳು, ಕಟ್ಟಿಗೆಯು ವಾಹನ ಸವಾರರ ಕಣ್ಣು, ತಲೆಗೆ ನೇರವಾಗಿ ತಾಕುವಂತಿವೆ. ಜೊತೆಗೆ ರಸ್ತೆಯಿಂದ ಮುಂದೆ ಸಾಗುವಾಗ ಎದುರುಗಡೆಯಿಂದ ಬರುವ ವಾಹನಗಳು ಗೋಚರಿಸದಂತಾಗಿ ಜನರು ಕೈಯಲ್ಲಿ ಪ್ರಾಣ ಹಿಡಿದುಕೊಂಡು ಸಾಗುವಂತಾಗಿದೆ.

ಜಾತ್ರೆಗೆ ಶುಭಾಶಯ, ಸ್ವಾಗತ ಕೋರುವಂಥ ಫ್ಲೆಕ್ಸ್‌ ಬೋರ್ಡ್‍ಗಳ ಪೈಕಿ ಕೆಲವು ಜನಸಾಮಾನ್ಯರದಾಗಿದ್ದರೆ, ಬಹುತೇಕ ಬೋರ್ಡ್‍ಗಳು ರಾಜಕಾರಣಿಗಳು, ಪ್ರಭಾವಿಗಳದ್ದಾಗಿವೆ. ಕೆಲವರಂತೂ ತಮಗೆ ಸೇರಿದ ಬೋರ್ಡ್‍ಗಳನ್ನು ಲೆಕ್ಕಕ್ಕೆ ಸಿಗದಷ್ಟು ಸಂಖ್ಯೆಯಲ್ಲಿ ನಗರದ ತುಂಬ ಅಳವಡಿಸಿದ್ದಾರೆ. ಅನಧಿಕೃತ ಫ್ಲೆಕ್ಸ್‌ಗಳಿಂದಾಗಿ ನಗರಸಭೆಗೆ ಲಕ್ಷಾಂತರ ರು. ಆದಾಯ ನಷ್ಟವಾಗುತ್ತಿದೆ.

ಡಿಸಿ ಸೂಚನೆಗೆ ಕಿಮ್ಮತ್ತಿಲ್ಲ:

ವಾರದ ಹಿಂದೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ.ಎಂ. ಅವರು ನಗರಸಭೆಯಲ್ಲಿ ನಡೆಸಿದ ಅಭಿವೃದ್ಧಿ ಸಭೆಯಲ್ಲಿ ಅನಧಿಕೃತ ಫ್ಲೆಕ್ಸ್ ಬೋರ್ಡ್‌ಗಳವಿರುದ್ಧ ದೂರು ದಾಖಲಿಸಿಕೊಳ್ಳಲು, ಅನಧಿಕೃತ ಫ್ಲೆಕ್ಸ್ ಕಂಡಲ್ಲಿ ಎಫ್‍ಐಆರ್ ದಾಖಲಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೆ, ಡಿಸಿ ಸೂಚನೆಗೆ ಹರಿಹರದಲ್ಲಿ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ ಎಂಬಂತಾಗಿದೆ. ನಗರಸಭಾ ಅಧಿಕಾರಿಗಳು ಹಾಗೂ ಪೊಲೀಸರು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

- - - ಬಾಕ್ಸ್‌-1 * ಫ್ಲೆಕ್ಸ್‌ಗೆ ಅನುಮತಿ ಪಡೆಯದಿದ್ದರೆ ದೂರು: ಪೌರಾಯುಕ್ತ ಫ್ಲೆಕ್ಸ್ ಅಳವಡಿಸಲು ಪ್ರತಿ ದಿನಕ್ಕೆ, ವಾರಕ್ಕೆ, ಹದಿನೈದು ದಿನ, ತಿಂಗಳಿಗೆ ಇಷ್ಟಿಷ್ಟು ದರ ನಿಗದಿಪಡಿಸಲಾಗಿದೆ. ಜತೆಗೆ ನೆಲಬಾಡಿಗೆ ಸಹ ಇರುತ್ತದೆ. ಜೊತೆಗೆ ಶೇ.15ರಷ್ಟು ಸೆಸ್ ಸೇರಿಸಿ ಹಣ ಪಾವತಿಸಿ, ಫ್ಲೆಕ್ಸ್‌ ಅಳವಡಿಕೆಗೆಂದೇ ಅನುಮತಿ ಪಡೆಯಬೇಕು. ಅನೇಕರು ಅನುಮತಿ ಪಡೆಯದೇ ಫ್ಲೆಕ್ಸ್ ಅಳವಡಿಸಿದ್ದಾರೆ ಎಂದು ನಗರಸಭೆ ಪೌರಾಯುಕ್ತ ಸುಬ್ರಹ್ಮಣ್ಯ ಪಿ. ಶ್ರೇಷ್ಠಿ ತಿಳಿಸಿದ್ದಾರೆ. ಅನೇಕ ರಾಜಕೀಯ ಮುಖಂಡರು ಫ್ಲೆಕ್ಸ್‌ ಅಳವಡಿಸಲು ಅಡ್ಡಿಪಡಿಸದಂತೆ ಒತ್ತಡ ಹಾಕುತ್ತಿದ್ದಾರೆ. ಆದರೂ ಫ್ಲೆಕ್ಸ್ ತಯಾರಿಸಿ ಹಾಕುವವರಿಗೆ ನೋಟಿಸ್ ಕಳಿಸಿದ್ದೇವೆ. ಕೆಲವು ನೋಟಿಸ್‌ ಸ್ವೀಕರಿಸಿಲ್ಲ. ಕೆಲ ರಾಜಕೀಯ ಮುಖಂಡರು ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅವರ ಮನವೊಲಿಸಿ, ಉಚಿತ ಫ್ಲೆಕ್ಸ್‌ ಅಳವಡಿಕೆಗೆ ಅನುಮತಿ ಪಡೆಯುತ್ತೇವೆ, ಸಮಯ ನೀಡಿ ಎನ್ನುತ್ತಿದ್ದಾರೆ. ಅವರಿಗೆಲ್ಲ ತಕ್ಷಣ ಹಣ ಪಾವತಿಸಿ ಫ್ಲೆಕ್ಸ್‌ ಹಾಕಲು ಅನುಮತಿ ಪಡೆಯಲು ತಿಳಿಸಿದ್ದೇವೆ. ಕೆಲವರು ಬಂದು ಹಣ ಪಾವತಿಸುತ್ತಿದ್ದಾರೆ. ನಾಳೆ ಅನುಮತಿ ಪಡೆಯದವರು ಕಡ್ಡಾಯವಾಗಿ ಫ್ಲೆಕ್ಸ್ ತೆರವು ಮಾಡುವಂತೆ ಸೂಚಿಸಿದ್ದೇವೆ. ಇಲ್ಲದಿದ್ದಲ್ಲಿ ನಗರ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ಪೌರಾಯುಕ್ತರು ಸ್ಪಷ್ಟಪಡಿಸಿದ್ದಾರೆ.

- - -

ಕೋಟ್ಸ್‌ ಫ್ಲೆಕ್ಸ್ ಅನುಮತಿ ನೀಡುವ, ಅದಕ್ಕೆ ನಿಗದಿತ ದರ ಪಾವತಿಸಿಕೊಳ್ಳುವ ಕಾರ್ಯ ನಗರಸಭೆ ವ್ಯಾಪ್ತಿಗೆ ಬರುತ್ತದೆ. ನಗರಸಭೆಯಿಂದ ಇದುವರೆಗೆ ಯಾವುದೇ ದೂರು ಬಂದಿಲ್ಲ. ದೂರು ಬಂದಲ್ಲಿ ಅಂಥ ಅನಧಿಕೃತ ಫ್ಲೆಕ್ಸ್ ತೆರವು ಮಾಡಲು ರಕ್ಷಣೆ ನೀಡುತ್ತೇವೆ. ಈ ಸಂದರ್ಭ ಯಾರಾದರೂ ವಿರೋಧ ವ್ಯಕ್ತಪಡಿಸಿದಲ್ಲಿ ಅವರ ಮೇಲೆ ದೂರು ದಾಖಲಿಸಲಾಗುವುದು - ಎಸ್.ದೇವಾನಂದ, ಇನ್‌ಸ್ಪೆಕ್ಟರ್‌, ನಗರ ಠಾಣೆ, ಹರಿಹರ

ಜಾತ್ರೆ ನೆಪದಲ್ಲಿ ಹರಿಹರ ನಗರದ ತುಂಬ ಫ್ಲೆಕ್ಸ್ ಹಾವಳಿ ಹೆಚ್ಚಾಗಿದೆ. ಕೆಲವರು ಫ್ಲೆಕ್ಸ್ ನೋಡುತ್ತಾ ರಸ್ತೆಯಲ್ಲಿ ನಿಂತು ಬಿಡುತ್ತಾರೆ. ಅನೇಕ ಫ್ಲೆಕ್ಸ್‌ಗಳಿಂದಾಗಿ ರಸ್ತೆಯ ಹಿಂದಿರುವವರು ಗೊತ್ತಾಗುವುದಿಲ್ಲ. ಹಠಾತ್ತನೆ ರಸ್ತೆಯ ಮುಂದೆ ಬರುತ್ತಾರೆ. ಆಗ ಆಕ್ಸಿಡೆಂಟ್ ಆಗುವ ಸಂಭವ ಇರುತ್ತದೆ. ರಸ್ತೆಯ ಅಕ್ಕಪಕ್ಕದ ಲೈಟು ಕಂಬ, ಮುಂತಾದವುಗಳಿಗೆ ಮನಬಂದಂತೆ ಫ್ಲೆಕ್ಸ್‌ಗಳನ್ನು ಕಟ್ಟಿದ್ದಾರೆ, ಇಂಥ ಫ್ಲೆಕ್ಸ್‌ ಅಳವಡಿಕೆಗೆ ಅನುಮತಿಸಬಾರದು - ಮಾರುತಿ ಅಗಡಿ, ಆಟೊ ಚಾಲಕ, ಹರಿಹರ

- - - -10ಎಚ್‍ಆರ್‍ಆರ್03-03ಎ:

ಹರಿಹರದ ಶಿವಮೊಗ್ಗ ಹೆದ್ದಾರಿಯಲ್ಲಿ ಜನರಿಗೆ ಹಾಗೂ ವಾಹನ ಸವಾರರಿಗೆ ತೊಡಕುಂಟಾಗುವಂತೆ ಅಳವಡಿಸಿರುವ ಫ್ಲೆಕ್ಸ್ ಬೋರ್ಡ್‍ಗಳು.