ಮತ್ತೆ ಫ್ಲೆಕ್ಸ್‌ಗಳ ಆರ್ಭಟ : ಕಣ್ಣುಮುಚ್ಚಿ ಕುಳಿತ ಪಾಲಿಕೆ

| N/A | Published : Apr 21 2025, 01:33 AM IST / Updated: Apr 21 2025, 06:41 AM IST

ಸಾರಾಂಶ

ರಾಜಧಾನಿಯಲ್ಲಿ ಮತ್ತೆ ಅಕ್ರಮ ಜಾಹೀರಾತು ಫಲಕಗಳು, ಫ್ಲೆಕ್ಸ್‌ ಹಾಗೂ ಹೋರ್ಡಿಂಗ್‌ಗಳ ಹಾವಳಿ ಮೀತಿ ಮೀರುತ್ತಿರಿದ್ದು, ನಿಯಂತ್ರಿಸಬೇಕಾದ ಬಿಬಿಎಂಪಿ ಮತ್ತು ಪೊಲೀಸ್‌ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಂತೆ ಕಾಣುತ್ತಿದೆ.

  ಬೆಂಗಳೂರು : ರಾಜಧಾನಿಯಲ್ಲಿ ಮತ್ತೆ ಅಕ್ರಮ ಜಾಹೀರಾತು ಫಲಕಗಳು, ಫ್ಲೆಕ್ಸ್‌ ಹಾಗೂ ಹೋರ್ಡಿಂಗ್‌ಗಳ ಹಾವಳಿ ಮೀತಿ ಮೀರುತ್ತಿರಿದ್ದು, ನಿಯಂತ್ರಿಸಬೇಕಾದ ಬಿಬಿಎಂಪಿ ಮತ್ತು ಪೊಲೀಸ್‌ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಂತೆ ಕಾಣುತ್ತಿದೆ.

ಫ್ಲೆಕ್ಸ್‌, ಬ್ಯಾನರ್‌ ಹಾಗೂ ಹೋಲ್ಡಿಂಗ್‌ ವಿಚಾರದಲ್ಲಿ ಬಿಬಿಎಂಪಿಗೆ ಈಗಾಗಲೇ ಹಲವು ಬಾರಿ ಹೈಕೋರ್ಟ್‌ ಛೀಮಾರಿ ಹಾಕಿದರೂ ಬಿಬಿಎಂಪಿಯ ಅಧಿಕಾರಿ ಸಿಬ್ಬಂದಿ ಎಚ್ಚೆತ್ತುಕೊಂಡಿಲ್ಲ. ಮುಖ್ಯಮಂತ್ರಿಯ ಸರ್ಕಾರದ ಅಧಿಕೃತ ನಿವಾಸದ ಇರುವ ರಸ್ತೆಯ ಸೇರಿದಂತೆ ನಗರದ ಕೇಂದ್ರ ಭಾಗದ ಬಡಾವಣೆಗಳಲ್ಲಿ ಫ್ಲೆಕ್ಸ್‌ ಮತ್ತು ಹೋಲ್ಡಿಂಗ್‌ಗಳು ರಾಜಾಜಿಸುತ್ತಿವೆ. ಆದರೂ ಬಿಬಿಎಂಪಿಯ ಅಧಿಕಾರಿ ಸಿಬ್ಬಂದಿ ಕ್ರಮ ಕೈಕೊಳ್ಳುತ್ತಿಲ್ಲ.

ಸದ್ಯ ನಗರದಲ್ಲಿ ಫ್ಲೆಕ್ಸ್‌ ಬ್ಯಾನರ್‌ ಅಳವಡಿಕೆ ಮಾಡಿದವರ್‍ಯಾರೂ ಜನ ಸಾಮಾನ್ಯರಲ್ಲ. ಎಲ್ಲರೂ ಪ್ರಭಾವಿಗಳಾಗಿದ್ದಾರೆ ಎಂಬುದೇ ಇಲ್ಲಿ ಪ್ರಮುಖವಾಗಿ ಗಮನಿಸಬೇಕಾದ ಸಂಗತಿಯಾಗಿದೆ. ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆ ಮಾಡುವುದರಲ್ಲಿ ರಾಜಕಾರಣಗಳು ಪಕ್ಷಾತೀತವಾಗಿದ್ದಾರೆ, ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಎಲ್ಲರೂ ಹುಟ್ಟುಹಬ್ಬ, ಜಾತ್ರೆ, ಹಬ್ಬ ಬಂದರೆ ಸಾಕು ಶುಭಾಷಯ ಕೋರುವ ನೆಪದಲ್ಲಿ ಫ್ಲೆಕ್ಸ್‌, ಬ್ಯಾನರ್‌ ಹಾಕುವುದಕ್ಕೆ ಮುಂದಾಗುತ್ತಾರೆ.

ನಗರದಲ್ಲಿ ಅನಧಿಕೃತವಾಗಿ ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆ ಮಾಡುವವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ ಆದೇಶ ನೀಡಲಾಗಿದೆ. ನಗರದಲ್ಲಿ ಸದ್ಯ ರಾಜಾಜಿಸುತ್ತಿರುವ ಫ್ಲೆಕ್ಸ್‌, ಬ್ಯಾನರ್‌ ನೋಡಿದರೆ ಬಿಬಿಎಂಪಿಯ ಆದೇಶ ಕೇವಲ ಜನ ಸಾಮಾನ್ಯರಿಗೆ ಮಾತ್ರ ಅನ್ವಯ ಅನಿಸುತ್ತಿದೆ.

ಅಪ್ಪ-ಮಗಳಿಗೆ ಶುಭಾಶಯದ ಫ್ಲೆಕ್ಸ್‌:

ಕುಮಾರ ಕೃಪಾ ರಸ್ತೆಯಲ್ಲಿ ಸಮಾಜಕಲ್ಯಾಣ ಇಲಾಖೆಯ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹಾಗೂ ಮಹದೇವಪ್ಪನ ಮಗಳು ಡಾ.ಎಚ್‌.ಎಂ. ಅನಿತಾ ಬೋಸ್‌ ಅವರಗಳ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಳವಡಿಕೆ ಮಾಡಲಾಗಿದೆ. ರಸ್ತೆ ಮಾತ್ರವಲ್ಲದೇ ಸಚಿವ ಮಹದೇವಪ್ಪ ಅವರ ಸರ್ಕಾರಿ ನಿವಾಸ ಇರುವ ರಸ್ತೆ ಹಾಗೂ ನಿವಾಸದ ದ್ವಾರ ಮತ್ತು ಆವರಣದಲ್ಲಿ ದೊಡ್ಡ ಗಾತ್ರದ ಫ್ಲೆಕ್ಸ್‌, ಬ್ಯಾನರ್‌ ಗಳನ್ನು ಅಳವಡಿಕೆ ಮಾಡಲಾಗಿದೆ.

ಅಪ್ಪ-ಮಗನ ಅಬ್ಬರ:

ವಿಜಯನಗರ ಮತ್ತು ಗೋವಿಂದರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೃಷ್ಣಪ್ಪ ಹಾಗೂ ಪ್ರಿಯಾಕೃಷ್ಣ ಅವರ ಜನ್ಮದಿನದ ಅಂಗವಾಗಿ ಮೆಟ್ರೋ ಕಂಬದಿಂದ ಗಲ್ಲಿ-ಗಲ್ಲಿಗೂ ಫ್ಲೆಕ್ಸ್‌- ಬ್ಯಾನರ್‌ ಅಳವಡಿಕೆ ಮಾಡಲಾಗಿದೆ. ಶಾಸಕ ಕೃಷ್ಣಪ್ಪ ಅವರ ಜನ್ಮದಿನ ಏ.16ಕ್ಕೆ ಹಾಗೂ ಶಾಸಕ ಪ್ರಿಯಾ ಕೃಷ್ಣ ಅವರ ಹುಟ್ಟುಹಬ್ಬ ಏ.27ಕ್ಕೆ ಎರಡೂ ಶುಭಾಷಯಗಳನ್ನು ಒಟ್ಟಿಗೆ ಫ್ಲೆಕ್ಸ್‌, ಬ್ಯಾನರ್‌ನಲ್ಲಿ ಹಾಕಲಾಗಿದೆ. ಹೀಗಾಗಿ, ಸುಮಾರು ಒಂದು ತಿಂಗಳು ಈ ಫ್ಲೆಕ್ಸ್‌, ಬ್ಯಾನರ್‌ಗಳು ರಾಜಾಜಿಸಲಿವೆ.

ತೆರವಿಗೆ ಮುಂದಾಗುವ ಸಿಬ್ಬಂದಿಗೆ ಧಮ್ಮಿಕಿ?

ಧಾರ್ಮಿಕ ಸಭೆ ಸಮಾರಂಭಗಳಿಗೆ ಮಾತ್ರ ಮೂರು ದಿನ ಮಾತ್ರ ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆಗೆ ಬಿಬಿಎಂಪಿಯ ಅಧಿಕಾರಿಗಳು ಅವಕಾಶ ನೀಡುತ್ತಿದ್ದಾರೆ. ಹುಟ್ಟುಹಬ್ಬ ಸೇರಿದಂತೆ ಯಾವುದೇ ವೈಯಕ್ತಿಯ ಸಮಾರಂಭಗಳಿಗೆ ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆ ಮಾಡುವುದಕ್ಕೆ ಬಿಬಿಎಂಪಿಯಿಂದ ಅನುಮತಿ ನೀಡುತ್ತಿಲ್ಲ. ಆದರೂ ಅನಧಿಕೃವಾಗಿ ತಿಂಗಳಾನುಗಟ್ಟಲೆ ಫ್ಲೆಕ್ಸ್‌ ಅವಳಡಿಕೆ ಮಾಡಲಾಗುತ್ತಿದೆ. ಆ ಫ್ಲೆಕ್ಸ್‌ಗಳನ್ನು ತೆರವು ಮಾಡುವುದಕ್ಕೆ ಬಿಬಿಎಂಪಿಯ ಸ್ಥಳೀಯ ಸಿಬ್ಬಂದಿ ಮುಂದಾದರೆ ಅವರಿಗೆ ಧಮ್ಮಕಿ ಹಾಕಿ ಕಳುಹಿಸಲಾಗುತ್ತಿದೆ. ಇನ್ನೂ ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಫ್ಲೆಕ್ಸ್‌ ತೆರವಿನ ವಿಚಾರದಲ್ಲಿ ದಕ್ಷತೆ ತೋರುತ್ತಿಲ್ಲ ಎಂಬ ಆರೋಪ ಕೇಳಿ ಬಂದಿವೆ.

ವಾಹನ ಸವಾರರಿಗೆ ಸಂಚಕಾರ

ರಸ್ತೆಯ ಅಕ್ಕ-ಪಕ್ಕದಲ್ಲಿ ದೊಡ್ಡ ದೊಡ್ಡ ಕಟೌಟ್‌, ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆ ಮಾಡಿರುವುದರಿಂದ ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ಪೂರ್ವ ಮುಂಗಾರಿನ ಗಾಳಿ- ಮಳೆ ಜೋರಾಗಿ ಬೀಸುತ್ತಿರುವುದರಿಂದ ಯಾವಾಗ ಬೇಕಾದರೂ ಇವುಗಳು ರಸ್ತೆಯಲ್ಲಿ ಸಂಚರಿಸುವ ವಾಹನಗಳ ಮೇಲೆ ಬೀಳಬಹುದಾಗಿದೆ. ನಾಗರಬಾವಿಯ ವೃತ್ತದಲ್ಲಿ ಶಾಸಕ ಕೃಷ್ಣ ಅವರ ಬೆಂಬಲಿಗರು ಹಾಕಿದ್ದ ಕಟೌಟ್‌ ಬಿದ್ದು ತೀವ್ರ ತೊಂದರೆ ಉಂಟಾಗಿದ್ದನ್ನು ಗಮನಿಸಬಹುದಾಗಿದೆ. ಆದರೂ, ಎಚ್ಚೆತ್ತುಕೊಂಡಿಲ್ಲ. ತೆರವುಗೊಳಿಸುವುದಕ್ಕೆ ಬಿಬಿಎಂಪಿ ಮತ್ತು ಪೊಲೀಸ್‌ ಅಧಿಕಾರಿಗಳು ಮುಂದಾಗಿಲ್ಲ.