ಸಾರಾಂಶ
ನಿಗದಿತ ಸಮಯಕ್ಕೆ ವಿಮಾನಯಾಣ ಸೌಲಭ್ಯ ಒದಗಿಸುವುದಾಗಿ ಹೇಳಿ ವಿಮಾನಯಾಣ ಶುಲ್ಕ ಪಡೆದುಕೊಂಡು ವಿಳಂಬ ಮಾಡುವುದು ತಪ್ಪು. ವಿಮಾನ ವಿಳಂಬದ ಪರಿಣಾಮವಾಗಿ ದೂರುದಾರರು ಖರ್ಚು ಮಾಡಿದ ಶುಲ್ಕ ಸೇರಿದಂತೆ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಧಾರವಾಡ:
ವಿಮಾನಯಾಣ ವಿಳಂಬ ಮಾಡಿದ ಅಲಾಯನ್ಸ್ ಏರ್ ಏವಿಲೇಷನ್ ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿ, ಪರಿಹಾರಕ್ಕೆ ಆದೇಶ ಮಾಡಿದೆ.ಕ್ಯಾರಕೊಪ್ಪದ ಜವಾಹರ ನವೋದಯ ವಿದ್ಯಾಲಯದ ಶಿಕ್ಷಕರಾದ ಸರೋಜನಿ, ರಾಘವೇಂದ್ರ ಮತ್ತು ರವೀಂದ್ರ ಪಾಂಶುಪಾಲರ ಆದೇಶದ ಮೇರೆಗೆ ತಮ್ಮ 24 ವಿದ್ಯಾರ್ಥಿಗಳನ್ನು ಉತ್ತರ ಪ್ರದೇಶದ ಪಿಲಿಬಿಟ್ ಜವಾಹರ ನವೋದಯ ವಿದ್ಯಾಲಯದಿಂದ 2023ರ ಅಕ್ಟೋಬರ್ 20ರಂದು ಹೊರಟಿದ್ದರು. ಅಲ್ಲಿ ವಿದ್ಯಾರ್ಥಿಗಳನ್ನು ಬಿಟ್ಟು ಮರಳಿ ಕ್ಯಾರಕೊಪ್ಪಕ್ಕೆ ಬರಬೇಕಾಗಿತ್ತು. ಅದಕ್ಕಾಗಿ ರಾಯಬರೇಲಿಯಿಂದ ದೆಹಲಿಗೆ ಹಾಗೂ ದೆಹಲಿಯಿಂದ ಬೆಳಗಾವಿಗೆ ವಿಮಾನಯಾಣ ಟಿಕೆಟ್ ಬುಕ್ ಮಾಡಿದ್ದರು. ಆದರೆ, ರಾಯಬರೇಲಿಯಿಂದ ಮೂರು ಗಂಟೆ ವಿಮಾನ ತಡವಾಗಿದ್ದರಿಂದ ಅದೇ ದಿನ ದೆಹಲಿಯಿಂದ ಬೆಳಗಾವಿಗೆ ಹೋಗುವ ವಿಮಾನ ಸಹ ತಪ್ಪಿ ತೊಂದರೆ ಅನುಭವಿಸಿದ್ದರು. ಈ ರೀತಿ ವಿಮಾನಯಾಣ ವಿಳಂಬದಿಂದ ತಮಗೆ ಸೇವಾ ನ್ಯೂನತೆಯಾಗಿ ತೊಂದರೆ ಹಾಗೂ ಮಾನಸಿಕ ಹಿಂಸೆಯಾಗಿದೆ ಎಂದು ಹೇಳಿ ಅವರ ವಿರುದ್ಧ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಕ್ರಮಕೈಗೊಳ್ಳುವಂತೆ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪಿ.ಸಿ. ಹಿರೇಮಠ ಸದಸ್ಯರು, ನಿಗದಿತ ಸಮಯಕ್ಕೆ ವಿಮಾನಯಾಣ ಸೌಲಭ್ಯ ಒದಗಿಸುವುದಾಗಿ ಹೇಳಿ ವಿಮಾನಯಾಣ ಶುಲ್ಕ ಪಡೆದುಕೊಂಡು ವಿಳಂಬ ಮಾಡುವುದು ತಪ್ಪು. ವಿಮಾನ ವಿಳಂಬದ ಪರಿಣಾಮವಾಗಿ ದೂರುದಾರರು ಖರ್ಚು ಮಾಡಿದ ಎಲ್ಲ ವಿಮಾನ ಶುಲ್ಕ ಹಾಗೂ ಅವರ ವಸತಿ ಹಾಗೂ ಇತ್ಯಾದಿ ಖರ್ಚಿಗಾಗಿ ತಲಾ ₹ 5 ಸಾವಿರ ಖರ್ಚು ಕೊಡುವಂತೆ ಆಯೋಗ ಅಲಾಯನ್ಸ್ ಏರ್ ಏವಿಲೇಷನ್‌ಗೆ ನಿರ್ದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ತೊಂದರೆಗಾಗಿ ಪ್ರತಿಯೊಬ್ಬರಿಗೆ ತಲಾ ₹ 50 ಸಾವಿರ ಪರಿಹಾರ ಮತ್ತು ತಲಾ ₹ 10 ಸಾವಿರ ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಆಯೋಗವು ಸಂಸ್ಥೆಗೆ ಆದೇಶಿಸಿದೆ.