ಕಪಿಲಾ ನದಿಯಲ್ಲಿ ಪ್ರವಾಹ: ಮುಳುಗಡೆಯಾದ ಹಲವು ದೇವಾಲಯಗಳು

| Published : Aug 01 2024, 12:15 AM IST

ಸಾರಾಂಶ

ಕಪಿಲಾ ನದಿಯಲ್ಲಿ ಸಾಗರೋಪಾದಿಯಲ್ಲಿ ನೀರು ಹರಿಯುತ್ತಿರುವುದರಿಂದ ಮೈಸೂರು- ಕೇರಳ ಮತ್ತು ಊಟಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಪಟ್ಟಣದ ಮಲ್ಲನಮೂಲೆ ಸಮೀಪ ನದಿಯ ನೀರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿರುವುದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಿ, ಬದಲಿ ಮಾರ್ಗದಲ್ಲಿ ವಾಹನಗಳನ್ನು ಬಿಡಲಾಗುತ್ತಿದೆ. ಇದರಿಂದಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ವಯನಾಡಿನಲ್ಲಿ ಸುರಿದ ಭೀಕರ ಮಳೆ ಮತ್ತು ಗುಡ್ಡ ಕುಸಿತದಿಂದ ಉಂಟಾಗಿರುವ ಪ್ರವಾಹದ ನೀರು ಕಬಿನಿ ಜಲಾಶಯ ಸೇರುತ್ತಿರುವ ಹಿನ್ನೆಲೆಯಲ್ಲಿ ಎಚ್.ಡಿ.ಕೋಟೆ, ನಂಜನಗೂಡು ಸುತ್ತಮುತ್ತ ಅಪಾಯದ ಪರಿಸ್ಥಿತಿ ತಲೆದೂರಿದೆ.

ಕಬಿನಿ ನದಿಯ ಉಗಮ ಸ್ಥಳವಾದ ಕೇರಳ ವಯನಾಡುವಿನಲ್ಲಿ ಮಳೆಯ ರುದ್ರ ನರ್ತನದಿಂದಾಗಿ ಕಪಿಲಾ ನದಿಯು ಉಕ್ಕಿ ಹರಿಯುತ್ತಿದೆ.

ಪರಿಣಾಮ ದಕ್ಷಿಣ ಕಾಶಿ ನಂಜನಗೂಡಿನಲ್ಲಿ ನದಿಯು ಸಾಗರೋಪಾದಿಯಲ್ಲಿ ತುಂಬಿ ಹರಿಯುತ್ತಿದೆ. ಸರಗೂರು ಸಮೀಪದ ಕಬಿನಿ ಜಲಾಶಯದಲ್ಲಿ ನೀರು ಅಪಾಯದ ಮಟ್ಟ ಮೀರುತ್ತಿದ್ದ ಹಿನ್ನೆಲೆಯಲ್ಲಿ ಜಲಾಶಯದಿಂದ ಮಂಗಳವಾರ 70 ಸಾವಿರ ಕ್ಯುಸೆಕ್ ಗೂ ಹೆಚ್ಚು ನೀರನ್ನು ನದಿಗೆ ಬಿಡಲಾಗಿದೆ.

ಪರಿಣಾಮವಾಗಿ ನದಿ ಪಾತ್ರದಲ್ಲಿನ ಹುಲ್ಲಹಳ್ಳಿ, ನಂಜನಗೂಡಿನಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಮತ್ತೊಂದೆಡೆ ಕಾವೇರಿ ನದಿಯಿಂದಲೂ ಹೆಚ್ಚು ನೀರನ್ನು ನದಿಗೆ ಬಿಟ್ಟಿರುವುದರಿಂದ ಕಾವೇರಿ ಮತ್ತು ಕಪಿಲಾ ನದಿಗಳ ಸಂಗಮ ಸ್ಥಳವಾದ ಟಿ. ನರಸೀಪುರದಲ್ಲಿಯೂ ನದಿ ಅಪಾಯದ ಮಟ್ಟ ಮೀರುತ್ತಿದೆ.

ಇನ್ನು ಪ್ರವಾಸಿ ತಾಣವಾದ ತಲಕಾಡು ಮತ್ತು ಸುತ್ತಮುತ್ತಲ ಪ್ರದೇಶ ನೀರಿನಿಂದ ಆವೃತ್ತವಾದರೆ ಹೆಮ್ಮಿಗೆ ಸೇತುವೆ, ಹುಲ್ಲಹಳ್ಳಿ ಸಮೀಪದ ಶ್ರೀರಾಂಪುರ ಸೇತುವೆ, ನಂಜನಗೂಡಿನ ಹೆಜ್ಜಿಗೆ ಸೇತುವೆ, ಕಲ್ಲಹಳ್ಳಿ ಸೇತುವೆ, ಸುತ್ತೂರು ಸೇತುವೆ ಮತ್ತು ಹೆಮ್ಮಿಗೆ ಸೇತುವೆಯಲ್ಲಿ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿದೆ.

ರಾಷ್ಟ್ರೀಯ ಹೆದ್ದಾರಿ ಬಂದ್:

ಕಪಿಲಾ ನದಿಯಲ್ಲಿ ಸಾಗರೋಪಾದಿಯಲ್ಲಿ ನೀರು ಹರಿಯುತ್ತಿರುವುದರಿಂದ ಮೈಸೂರು- ಕೇರಳ ಮತ್ತು ಊಟಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಪಟ್ಟಣದ ಮಲ್ಲನಮೂಲೆ ಸಮೀಪ ನದಿಯ ನೀರು ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿರುವುದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಿ, ಬದಲಿ ಮಾರ್ಗದಲ್ಲಿ ವಾಹನಗಳನ್ನು ಬಿಡಲಾಗುತ್ತಿದೆ. ಇದರಿಂದಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ.

ಕಪಿಲಾ ನದಿ ಪ್ರವಾಹದಿಂದಾಗಿ ಮಲ್ಲನ ಮೂಲೆ ಮಠವೂ ಸೇರಿದಂತೆ ಕಪಿಲಾ ನದಿ ತೀರದಲ್ಲಿರುವ ಶ್ರೀ ಬಸವೇಶ್ವರ, ಲಿಂಗಭಟರ ಗುಡಿ, ಕಾಶಿ ವಿಶ್ವನಾಥ ಸ್ವಾಮಿ ದೇವಾಲಯ, ಚಾಮುಂಡೇಶ್ವರಿ, ಅಯ್ಯಪ್ಪ ಸ್ವಾಮಿ, ದತ್ತಾತ್ರೇಯ ಸ್ವಾಮಿ, ಹಾಗೂ ಪರಶುರಾಮ ದೇವಾಲಯಗಳು ಸಂಪೂರ್ಣ ಜಲಾವೃತಗೊಂಡಿವೆ. ಅಲ್ಲದೆ ಐತಿಹಾಸಿಕ 16 ಕಾಲು ಮಂಟಪ ಭಾಗಶಃ ಮುಳುಗಡೆಯಾಗಿದೆ.

ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಇಕ್ಕೆಲಗಳಲ್ಲಿನ ತಗ್ಗು ಪ್ರದೇಶದಲ್ಲಿನ ಮನೆಗಳು ಜಲಾವೃತಗೊಂಡಿವೆ. ಇಲ್ಲಿನ ಸ್ಮಶಾನ ಕೂಡ ಪ್ರವಾಹದಲ್ಲಿ ಸಿಲುಕಿದೆ. ಹಾಗೆಯೇ ದೇವಾಲಯದ ಸುತ್ತಮುತ್ತ ಮುಡಿಕಟ್ಟೆ, ಸೋಪಾನಕಟ್ಟೆ, ದಾಸೋಹ ಭವನ ಸೇರಿದಂತೆ ದೇವಸ್ಥಾನದ ಪಾರ್ಕಿಂಗ್ ಮತ್ತು ಚಾಮರಾಜನಗರ ಬೈಪಾಸ್ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ನೂತನ ಶ್ರೀಕಂಠೇಶ್ವರ ಮಂಗಳ ಮಂಟಪ, ಕಲ್ಯಾಣ ಮಂಟಪ ಮತ್ತು ಹಳ್ಳದಕೇರಿಯಲ್ಲಿ ಕೆಲವು ವಾಸದ ಮನೆಗಳು ಕೂಡ ಜಲಾವೃತಗೊಂಡಿವೆ.

ವಯನಾಡುವಿನಲ್ಲಿ ಇದೇ ಪರಿಸ್ಥಿತಿ ಮುಂದುವರೆದರೆ ಇನ್ನೂ ಹೆಚ್ಚಿನ ಅಪಾಯ ಉಂಟಾಗುವ ಸಾಧ್ಯತೆ ಇದೆ. ಪ್ರವಾಹದ ಮುನ್ನೆಚ್ಚರಿಕೆಯಿಂದ ನಂಜನಗೂಡು ತಾಲೂಕು ಆಡಳಿತ ಎಲ್ಲಾ ಶಾಲಾ- ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಿತು. ಎಚ್.ಡಿ. ಕೋಟೆಯ ಮೂರು ಹೋಬಳಿ ಮತ್ತು ಸರಗೂರಿನ ಎರಡು ಹೋಬಳಿ ವ್ಯಾಪ್ತಿಯ ಶಾಲಾ- ಕಾಲೇಜಿಗೆ ರಜೆ ಘೋಷಿಸಲಾಗಿತ್ತು.

ಕಾವೇರಿ ಕೊಳ್ಳದಲ್ಲಿ ಪ್ರವಾಹ ಮತ್ತಷ್ಟು ಉಲ್ಬಣ:

ಮಳೆಯ ಆರ್ಭಟಕ್ಕೆ ಕಾವೇರಿ ಕೊಳ್ಳದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಮತ್ತಷ್ಟು ಉಲ್ಬಣವಾಗಿದೆ. ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಕಾವೇರಿ ನದಿ ನೀರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ತಗ್ಗು ಪ್ರದೇಶಗಳಿಗೆ ನುಗ್ಗಿದ್ದು, ತಾಲೂಕಿನ ಮುತ್ತಿನಮುಳಸೋಗೆ ಗ್ರಾಮದಲ್ಲಿ ರೈತರ ಜಮೀನು, ರಸ್ತೆಗಳು ಜಲಾವೃತವಾಗಿದೆ. ಅಪಾರ ಪ್ರಮಾಣದ ಬೆಳೆ ಪ್ರವಾಹದ ನೀರಿನಲ್ಲಿ ಮುಳುಗಡೆಯಾಗಿದ್ದು, ಕ್ಷಣ ಕ್ಷಣಕ್ಕೂ ಪ್ರವಾಹದ ನೀರು ಹೆಚ್ಚುತ್ತಿದ್ದು, ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪ್ರವಾಹದ ಪರಿಸ್ಥಿತಿ ಹಿನ್ನೆಲೆಯಲ್ಲಿ ಜನತೆ ಆತಂಕಕ್ಕೀಡಾಗಿದ್ದಾರೆ.

ಕೆ.ಆರ್.ಎಸ್.ನಿಂದಲೂ ನೀರು ಬಿಡುಗಡೆ:

ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ ಜಲಾಶಯಕ್ಕೆ ಒಳಹರಿವು ಪ್ರಮಾಣ ಹೆಚ್ಚಾಗುತ್ತಿದೆ. ಬುಧವಾರ ಮಧ್ಯಾಹ್ನ 12 ಗಂಟೆಗೆ ಕೆ.ಆರ್.ಎಸ್ ಜಲಾಶಯದಿಂದ 1,50,000 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

ಕಾವೇರಿ ನದಿ ಪಾತ್ರದಲ್ಲಿನ ಸಾರ್ವಜನಿಕರು ಸ್ವಯಂ ಮುಂಜಾಗ್ರತೆ ವಹಿಸುವುದು. ಕಾವೇರಿ ನದಿ ಪಾತ್ರಕ್ಕೆ ಅಥವಾ ತಗ್ಗು ಪ್ರದೇಶಗಳಿಗೆ ಭೇಟಿ ನೀಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ನದಿಪಾತ್ರದಲ್ಲಿ ಮತ್ತು ತಗ್ಗು ಪ್ರದೇಶಗಳಲ್ಲಿ ರೈತರು ಕೃಷಿ ಚಟುವಟಿಕೆಗೆ ಹೋಗದಂತೆ ಹಾಗೂ ಜಾನುವಾರು ಬಿಡದಿರಲು ಸೂಚಿಸಲಾಗಿದೆ.

ನದಿಪಾತ್ರದಲ್ಲಿ ಮತ್ತು ಸೇತುವೆ ಇನ್ನಿತರ ಪ್ರೇಕ್ಷಣಿಯ ಸ್ಥಳಗಳಿಗೆ ಭೇಟಿ ನೀಡುವುದು, ನೀರಿನಲ್ಲಿ ಈಜುವುದು ಹಾಗೂ ಸೆಲ್ಫಿ ತೆಗೆಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ತಾಲೂಕು ಆಡಳಿತದ ವತಿಯಿಂದ ಈಗಾಗಲೇ ಮುನ್ನೆಚ್ಚರಿಕಾ ಕ್ರಮವಾಗಿ ಕೈಗೊಂಡಿರುವ ವ್ಯಾಪಕ ಪ್ರಚಾರ ಹಾಗೂ ಅಪಾಯಕಾರಿ ಸ್ಥಳಗಳಲ್ಲಿ ಅಳವಡಿಸಿರುವ ಸೂಚನಾ ಫಲಕ ಗಮನಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ ಮನವಿ ಮಾಡಿದ್ದಾರೆ.