ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಮಹಾರಾಷ್ಟ್ರ ಭಾಗದಲ್ಲಿ ಮಳೆ ಹೆಚ್ಚಾಗಿದ್ದು ಹಾಗೂ ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ ಭೀಮಾನದಿಗೆ ನೀರಿನ ಪ್ರಮಾಣ ಹರಿ ಬಿಡುತ್ತಿರುವುದರಿಂದ ನದಿಪಾತ್ರದ ಜನ-ಜಾನುವಾರಗಳಿಗೆ ಸುರಕ್ಷಿತ ಸ್ಥಳಗಳಿಗೆ ಸಾಗಿಸುವಂತೆ ಮುಂಜಾಗ್ರತಾ ಕ್ರಮವಾಗಿ ಡಂಗೂರು ಸಾರಬೇಕು. ಸಾರ್ವಜನಿಕರು ಜಾಗೃತವಾಗಿ ಇರುವಂತೆ ಹೇಳಬೇಕು ಎಂದು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ರಾಜಶೇಖರ ಡಂಬಳ ಅಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಪ್ರವಾಹ ಕುರಿತು ಆಯೋಜಿಸಿದ ತಾಲೂಕುಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಾರಾಷ್ಟ್ರದಲ್ಲಿ ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಜ್ಜನಿ ಜಲಾಶಯದಿಂದ ಭೀಮಾನದಿಗೆ ಸುಮಾರು 1 ಲಕ್ಷ ಕ್ಯುಸೆಕ್ಸ್ ನೀರು ಬಿಡುವ ಸಂಭವ ಇದೆ. ಆದ್ದರಿಂದ ಭೀಮಾನದಿ ಪಾತ್ರದ ಜನರು ಹಾಗೂ ಜಾನುವಾರಗಳ ಬಗ್ಗೆ ಹೆಚ್ಚಿನ ಕಾಳಜೀವಹಿಸಬೇಕು. ಈಗಾಗಲೇ ಮಹಾರಾಷ್ಟ್ರ ಸರ್ಕಾರ ಜಿಲ್ಲಾಧಿಕಾರಿಗೆ ನೀರು ಬಿಡುವುದಾಗಿ ಹೇಳಿರುವುದರಿಂದ 1 ಲಕ್ಷ ಕ್ಯು. ನೀರು ಬಂದರೆ ತೊಂದರೆಯಾಗುವ ಸಾಧ್ಯತೆ ಇದೆ. ಭೀಮಾನದಿಯ ದಂಡೆಯ ಗ್ರಾಮ ಹಾಗೂ ವಸತಿ ಪ್ರದೇಶ ನೀರಿನ ಒತ್ತಡದಿಂದ ಜಮೀನುಗಳು ಹಾಳಾಗುವ ಸಂಭವ ಇದೆ. ಹಿನ್ನೀರಿನಿಂದ ರಸ್ತೆಗಳು, ಸೇತುವೆ, ಬಾಂದಾರಗಳು ಮುಳುಗಡೆ ಆಗಬಹುದು. ಆದಷ್ಟು ತಾಲೂಕು ನೋಡಲ್ ಅಧಿಕಾರಿಗಳು ಜನರ ಬಗ್ಗೆ ಕಾಳಜಿ ವಹಿಸಬೇಕು ಎಂದು ಸೂಚಿಸಿದರು.
ಭೀಮಾನದಿಗೆ ನೀರು ಹೆಚ್ಚಾಗಿ ಜಮೀನುಗಳಿಗೆ ನುಗ್ಗಿ, ಕೆರೆಕಟ್ಟೆಗಳು ಒಡೆಯಬಹುದು. ವಸತಿ ಪ್ರದೇಶಗಳಲ್ಲಿ ನೀರು ನುಗ್ಗಿ ರೈತರ ದವಸ-ಧಾನ್ಯ ಇತರೆ ವಸ್ತುಗಳು ಹಾನಿಯಾಗದಂತೆ ನಿಗಾ ವಹಿಸಬೇಕು. ಈ ಕುರಿತು ರೈತರಿಗೆ ಎಚ್ಚರ ವಹಿಸಲು ತಿಳಿಸಬೇಕು. ಪ್ರಮುಖ ತೋಟಗಾರಿಕೆ ಬೆಳೆಗಳ ಹಾನಿ ಬಗ್ಗೆ ನೋಡಲ್ ಅಧಿಕಾರಿಗಳು ಸಂಪೂರ್ಣ ವರದಿ ಸಲ್ಲಿಸಬೇಕು. ಪ್ರವಾಹ ಕುರಿತಾಗಿ ತಾಲೂಕಾಡಳಿತ ಸದಾ ಎಚ್ಚರಿಕೆ ವಹಿಸಬೇಕು. ನೋಡಲ್ ಅಧಿಕಾರಿಗಳು ಟಾಸ್ಕಪೋರ್ಸ್ ಸಭೆ ಕರೆದು ಎರಡ್ಮೂರು ದಿನಗಳಲ್ಲಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು. ಜನ-ಜಾನುವಾರಗಳ ಕುರಿತು ಸಹ ಮಾಹಿತಿ ನೀಡಬೇಕು ಎಂದು ತಿಳಿಸಿದರು.ಗ್ರಾಮಗಳು, ವಸತಿ ಪ್ರದೇಶ ಪ್ರವಾಹ ಆದರೆ ಕಾಳಜಿ ಕೇಂದ್ರ ತೆರೆಯಬೇಕು. ಕಾಳಜಿ ಕೇಂದ್ರಗಳು ತೆರೆಯಲು ವಸತಿ ನಿಲಯಗಳು, ಶಾಲೆಗಳು, ಸುವ್ಯವಸ್ಥಿತವಾಗಿ ಇರುವ ಬಗ್ಗೆ ಪರಿಶೀಲಿಸಬೇಕು. ಜಾನುವಾರಗಳಿಗೆ ಗೋಶಾಲೆ ತರೆದು ಮೇವಿನ ವ್ಯವಸ್ಥೆ ಮಾಡಬೇಕು. ಪ್ರವಾಹದಿಂದ ಗ್ರಾಮಗಳ ಜನರು ಕಲುಷಿತ ನೀರು ಸೇವಿಸದಂತೆ ತಿಳುವಳಿಕೆ ನೀಡಬೇಕು. ಕಾಳಜಿ ಕೇಂದ್ರಗಳಿಗೆ ಟ್ಯಾಂಕರ್ ಮೂಲಕ ಶುದ್ಧ ನೀರು ಒದಗಿಸಬೇಕು. ಬಹುತೇಕ ಗ್ರಾಮಗಳಲ್ಲಿ ನೀರಿನ ಓವರ್ ಟ್ಯಾಂಕ್‌ಗಳು ಇದ್ದು ಅವುಗಳ ನಿರ್ವಹಣೆ ಸರಿಯಾಗಿಲ್ಲ ಎಂಬ ದೂರುಗಳು ಕಂಡು ಬಂದಿವೆ. ಓವರ್ ಟ್ಯಾಂಕ್‌ಗಳಿಗೆ ನೀರು ತುಂಬಿ, ಸಾರ್ವಜನಿಕರಿಗೆ ಸರಬರಾಜು ಮಾಡಿದರೆ ಸಾಲದು, ಅವುಗಳ ನಿರ್ವಹಣೆ ಮುಖ್ಯ. ಟ್ಯಾಂಕ್‌ಗಳಲ್ಲಿ ಬಹುದಿನಗಳಿಂದ ಸ್ವಚ್ಛತೆ ಮಾಡದಿದ್ದರೆ ಕಸ ಕಡ್ಡಿ, ತ್ಯಾಜ್ಯ ವಸ್ತು ಬಿದ್ದು ನೀರು ಕಲುಷಿತಗೊಂಡಿರುತ್ತದೆ. ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನೀರು ಸಂಗ್ರಹಿಸುವ ಟ್ಯಾಂಕ್‌ಗಳು ಸ್ವಚ್ಛಗೊಳಿಸಿ, ಶುದ್ಧೀಕರಣ ಪೌಡರ್ ಹಾಕಬೇಕು ಎಂದು ಸೂಚಿಸಿದರು.
ತಹಸೀಲ್ದಾರ್ ಬಿ.ಎಸ್.ಕಡಕಭಾವಿ, ತಾಪಂ ಇಒ ಭೀಮಾಶಂಕರ ಕನ್ನೂರ, ತೋಟಗಾರಿಕೆ ಅಧಿಕಾರಿ ಎಚ್.ಎಸ್.ಪಾಟೀಲ, ಕೃಷಿ ಅಧಿಕಾರಿ ಮಹಾದೇವಪ್ಪ ಏವೂರ, ಹೆಸ್ಕಾಂ ಎಇಇ ಎಸ್.ಆರ್.ಮೆಂಡೆಗಾರ, ಜಿಪಂ ಎಇಇ ಸಿ.ಜೆ ಬನಸೋಡೆ, ಲೋಕೋಪಯೋಗಿ ಇಲಾಖೆ ಎಇಇ ದಯಾನಂದ ಮಠ, ಸಮಾಜ ಕಲ್ಯಾಣಾಧಿಕಾರಿ ಉಮೇಶ ಲಮಾಣಿ, ಡಾ.ರಾಜಶೇಖರ ಕೊಳೆಕರ, ಕಂದಾಯ ನೀರಿಕ್ಷಕ ಪಂಡೀತ ಕೊಡಹೊನ್ನ, ಬಿಸಿಎಂ ತಾಲೂಕಾಧಿಕಾರಿ ಎಸ್.ಆರ್ ಗದ್ಯಾಳ, ಸಂತೋಷ ಹೊಟಗಾರ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಸಭೆಯಲ್ಲಿ ಇದ್ದರು.;Resize=(128,128))