ಕೃಷ್ಣಾ ನದಿ ತೀರದಲ್ಲಿ ಪ್ರವಾಹದ ಆತಂಕ

| Published : Aug 21 2025, 02:00 AM IST

ಸಾರಾಂಶ

ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ನದಿಗೆ ನೀರು ಸಾಕಷ್ಟು ಪ್ರಮಾಣದಲ್ಲಿ ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಅಥಣಿ ತಹಶೀಲ್ದಾರ ಶಿದರಾಯ ಬೋಸಗಿ ನೇತೃತ್ವದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ತಂಡ ನದಿ ಪಾತ್ರದ ಹುಲಗಬಾಳಿ ಗ್ರಾಮದ ಮಾಂಗವಸ್ತಿ, ನದಿ ಇಂಗಳಗಾವ, ಸಪ್ತಸಾಗರ, ತೀರ್ಥ ಮತ್ತು ಚಿಕ್ಕೂಡ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ ನದಿಗೆ ನೀರು ಸಾಕಷ್ಟು ಪ್ರಮಾಣದಲ್ಲಿ ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಅಥಣಿ ತಹಶೀಲ್ದಾರ ಶಿದರಾಯ ಬೋಸಗಿ ನೇತೃತ್ವದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ತಂಡ ನದಿ ಪಾತ್ರದ ಹುಲಗಬಾಳಿ ಗ್ರಾಮದ ಮಾಂಗವಸ್ತಿ, ನದಿ ಇಂಗಳಗಾವ, ಸಪ್ತಸಾಗರ, ತೀರ್ಥ ಮತ್ತು ಚಿಕ್ಕೂಡ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದರು.

ನದಿ ಪಾತ್ರದ ನದಿ ಇಂಗಳಗಾವ, ಹುಲಗಬಾಳ, ಸಪ್ತಸಾಗರ, ತೀರ್ಥ ಗ್ರಾಮಗಳಲ್ಲಿ ಗ್ರಾಮಸ್ಥರ ಸಭೆಗಳನ್ನು ನಡೆಸಿ ನದಿ ಪಾತ್ರದ ಜನರು ಸದ್ಯದ ಪರಿಸ್ಥಿತಿಯಲ್ಲಿ ಆತಂಕಪಡುವ ಅಗತ್ಯವಿಲ್ಲ. ಅದರೆ ಮಳೆ ಇದೇ ರೀತಿ ಮುಂದುವರಿದು ನದಿಗೆ ನೀರು ಹೆಚ್ಚಾದರೆ ಹಂತ ಹಂತವಾಗಿ ಜನಜಾನುವಾರುಗಳನ್ನು ಸ್ಥಳಾಂತರಿಸುವುದು ಅನಿವಾರ್ಯವಾಗುತ್ತದೆ. ಹೀಗಾಗಿ ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ಗ್ರಾಮಸ್ಥರಿಗೆ ಸಲಹೆ ನೀಡಿದರು.ನದಿಗೆ ತೆರಳದಂತೆ ಸೂಚನೆ:

ಕೃಷ್ಣಾ ನದಿಯಲ್ಲಿ ನೀರು ರಭಸವಾಗಿ ಹರಿಯುತ್ತಿದೆ. ಜನರು ಯಾವುದೇ ಕಾರಣಕ್ಕೂ ನದಿಗೆ ತೆರಳಬಾರದು. ಜತೆಗೆ ತಮ್ಮ ದನ-ಕರುಗಳನ್ನು ನದಿಗೆ ತೆರಳದಂತೆ ನೋಡಿಕೊಳ್ಳಬೇಕು. ರಭಸವಾಗಿ ಧುಮ್ಮಿಕ್ಕುವ ನೀರಿನ ಜೊತೆಗೆ ಮೊಸಳೆಗಳು ಬರುವುದರಿಂದ ಪ್ರಾಣ ಹಾನಿಯಾಗುವ ಸಾಧ್ಯತೆ ಇರುತ್ತದೆ. ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅಳವಡಿಸಿರುವ ಪಂಪ್‌ಸೆಟ್‌ಗಳನ್ನು ಹೊರತೆಗೆಯುವ ಸಾಹಸ ಕೂಡ ಮಾಡಬಾರದು ಎಂದು ಗ್ರಾಮಸ್ಥರಿಗೆ ಸಲಹೆ ನೀಡಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ ಪ್ರವಾಹ ಎದುರಾಗುವ ಪ್ರಾಥಮಿಕ ಹಂತದ ಗ್ರಾಮಗಳಲ್ಲಿ ಈಗಾಗಲೇ ಗ್ರಾಪಂಗಳಿಂದ ಡಂಗೂರ ಸಾರಲಾಗಿದೆ. ಜತೆಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಅಗತ್ಯ ಬಿದ್ದರೆ 23 ಕಾಳಜಿ ಕೇಂದ್ರಗಳ, ಮೇವು ಬ್ಯಾಂಕುಗಳನ್ನು ಆರಂಭಿಸಲು ತಾಲೂಕಾಡಳಿತ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.ನೀರಾವರಿ ಇಲಾಖೆಯ ಅಧಿಕಾರಿ ಪ್ರವೀಣ ಹುಣಸಿಕಟ್ಟಿ ಮಾತನಾಡಿ, ಮಹಾರಾಷ್ಟ್ರದ ನೀರಾವರಿ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದ್ದು, ಕೊಯ್ನಾ ಅಣೆಕಟ್ಟು ಶೇ.90ರಷ್ಟು ಭರ್ತಿಯಾಗಿದೆ. ಇನ್ನೂ ಒಂದೆರಡು ದಿನಗಳಲ್ಲಿ ಮಳೆ ಪ್ರಮಾಣ ಹೆಚ್ಚಾದರೆ ಕೃಷ್ಣಾ ನದಿಗೆ 1 ಲಕ್ಷ 50 ಸಾವಿರ ಕ್ಯೂಸೆಕ್‌ ನೀರು ಹರಿದು ಬರುವ ಸಾಧ್ಯತೆ ಇದೆ. ನದಿ ಪಾತ್ರದ ಗ್ರಾಮಗಳಲ್ಲಿ ಪ್ರವಾಹ ತಡೆಗಟ್ಟುವ ನಿಟ್ಟಿನಲ್ಲಿ ಆಲಮಟ್ಟಿ ಜಲಾಶಯದಿಂದ 2 ಲಕ್ಷ ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕು. ನಡುಗಡ್ಡೆಯಾಗಿರುವ ಕೆಲವು ವಸತಿಗಳ ರಸ್ತೆಯ ಮೇಲೆ ನೀರು ಆವರಿಸಿದ್ದು, ಗ್ರಾಮಸ್ಥರು ಎಚ್ಚರಿಕೆ ವಹಿಸಬೇಕೆಂದು ತಿಳಿವಳಿಕೆ ನೀಡಿದರು.ಶಾಶ್ವತ ಪುನರ್ವಸತಿಗೆ ಹುಲಗಬಾಳಿ ಗ್ರಾಮಸ್ಥರ ಆಗ್ರಹ

ಅಥಣಿ: ಹುಲಗಬಾಳಿ ಗ್ರಾಮದ ಮಾಂಗವಸತಿ ತೋಟದಲ್ಲಿ 40ಕ್ಕೂ ಅಧಿಕ ಕುಟುಂಬಗಳು ವಾಸವಾಗಿವೆ. ಇಲ್ಲಿನ ರಸ್ತೆ ಸಂಪರ್ಕ ಕಡಿತವಾಗಿದ್ದು, ತಾಲೂಕು ಮಟ್ಟದ ಅಧಿಕಾರಿಗಳು ಕೂಡ ಅದೇ ರಸ್ತೆ ನೀರಿನಲ್ಲಿ ದಾಟಿ ಮಾಂಗ ವಸತಿ ಜನರಿಗೆ ಪ್ರವಾಹ ಪರಿಸ್ಥಿತಿ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದರು. ಅಲ್ಲಿನ ಗ್ರಾಮಸ್ಥರು ನಮಗೆ ಶಾಶ್ವತ ಪುನರ್ವಸತಿ ಕಲ್ಪಿಸುವಂತೆ ಅನೇಕ ವರ್ಷಗಳಿಂದ ಕೇಳುತ್ತಿದ್ದೇವೆ. ಸರ್ಕಾರ ಮತ್ತು ತಾಲೂಕಾಡಳಿತ ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಪ್ರವಾಹ ಬಂದಾಗ ಮಾತ್ರ ಇಲ್ಲಿ ಬರುತ್ತಿರಿ. ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ ಎಂದು ಅಧಿಕಾರಿಗಳಿಗೆ ಒತ್ತಾಯಿಸಿದರು. ತಹಶೀಲ್ದಾರ ಸಿದರಾಯ ಬೋಸಗಿ ಮಾತನಾಡಿ, ನಿಮಗೆ ಶಾಶ್ವತ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ ಈಗಾಗಲೇ ಚಿಂತನೆ ನಡೆದಿದೆ. ಆದರೂ ಮತ್ತೊಮ್ಮೆ ತಾಲೂಕಾಡಳಿತದಿಂದ ಸರ್ಕಾರಕ್ಕೆ ತಮ್ಮ ಸಮಸ್ಯೆ ಬಗ್ಗೆ ಪ್ರಸ್ತಾವ ಸಲ್ಲಿಸುತ್ತೇವೆ. ಪ್ರವಾಹ ಸಂದರ್ಭದಲ್ಲಿ ಈ ರೀತಿ ಹಠ ಸಾಧಿಸುವುದು ಒಳ್ಳೆಯದಲ್ಲ, ನಿಮ್ಮೆಲ್ಲರಿಗೆ ಕಾಳಜಿ ಕೇಂದ್ರಗಳನ್ನು ಆರಂಭಿಸುತ್ತೇವೆ. ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಸಿಪಿಐ ಸಂತೋಷ ಹಳ್ಳೂರ, ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ, ಸ್ಥಳೀಯ ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.