ಸಾರಾಂಶ
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಕಳೆದ ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕುಮಾರಧಾರ ನದಿ ಉಕ್ಕಿ ಹರಿಯುತ್ತಿದ್ದು ಅಪಾಯ ಮಟ್ಟದಲ್ಲಿದೆ. ಕುಮಾರಧಾರ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ.ಕುಮಾರಧಾರ ನದಿಯ ಉಪ ನದಿ ದರ್ಪಣತೀರ್ಥ ನದಿ ಕೂಡ ತುಂಬಿ ಹರಿಯುತ್ತಿರುವುದರಿಂದ ಶುಕ್ರವಾರ ಮುಂಜಾನೆ ವೇಳೆ ಎರಡೂ ನದಿಗಳ ಹರಿವು ಹೆಚ್ಚಾಗಿ ನೀರು ಹೆದ್ದಾರಿಯನ್ನು ಆವರಿಸಿತು. ಪರಿಣಾಮವಾಗಿ ಸುಬ್ರಹ್ಮಣ್ಯ- ಪುತ್ತೂರು ರಸ್ತೆ ಬ್ಲಾಕ್ ಆಗಿ ಸಂಚಾರ ಸ್ಥಗಿತಗೊಂಡಿತು. ದೇವರ ಜಳಕದ ಕಟ್ಟೆ ಮುಳುಗಡೆ: ಸುಬ್ರಹ್ಮಣ್ಯ ಸೇರಿದಂತೆ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಕುಮಾರಧಾರ ನದಿ ಪ್ರವಾಹದಿಂದ ಹರಿಯುತ್ತಿದೆ. ಕುಮಾರಧಾರ ಸ್ನಾನಘಟ್ಟ ಕಳೆದ ಐದು ದಿನಗಳಿಂದ ಮುಳುಗಡಯಾಗಿಯೇ ಇದೆ. ನದಿ ತೀರದಲ್ಲಿರುವ ದೇವರ ಜಳಗದ ಕಟ್ಟೆಯು ನದಿಯ ಪ್ರವಾಹದಿಂದ ಮುಳುಗಡೆಗೊಂಡಿದೆ. ಅಲ್ಲದೆ ಇಲ್ಲಿನ ಶೌಚಾಲಯ ಕಟ್ಟಡವು ಮುಕ್ಕಾಲು ಭಾಗ ಮುಳುಗಡೆಗೊಂಡಿದ್ದು ಛಾವಣಿ ಮಾತ್ರ ಗೋಚರಿಸುತ್ತಿದೆ. ಇಲ್ಲಿನ ಡ್ರೆಸ್ಸಿಂಗ್ ಕೊಠಡಿಗಳು ಸಂಪೂರ್ಣ ಮುಳುಗಡೆಗೊಂಡಿದೆ. ಲಗೇಜ್ ಕೊಠಡಿ, ಅಂಗಡಿಗಳು ಜಲಾವೃತ: ಕುಮಾರಧಾರ ನದಿಯ ಪ್ರವಾಹವು ಶುಕ್ರವಾರ ವಿರೀತವಾಗಿ ಏರುತ್ತಿದೆ. ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ನದಿಯು ಕುಮಾರಧಾರ ವೃತ್ತದ ಸಮೀಪ ಬಂದಿದೆ. ಸ್ನಾನಘಟ್ಟದಿಂದ ಸುಮಾರು ೧೦೦ ಮೀಟರ್‌ಗೂ ಅಧಿಕ ದೂರ ನೀರು ವ್ಯಾಪಿಸಿದ್ದು, ಕುಮಾರಧಾರ ದ್ವಾರದ ತನಕ ನೀರು ಆಗಮಿಸುವ ನಿರೀಕ್ಷೆ ಇದೆ. ಇದರಿಂದಾಗಿ ಅಕ್ಕಪಕ್ಕದ ಮನೆಯವರು ಆತಂಕಕ್ಕೊಳಗಾಗಿದ್ದಾರೆ. ಕುಮಾರಧಾರದ ಲಗೇಜ್ ಕೊಠಡಿಯ ಕಟ್ಟಡವು ನೀರಿನಿಂದ ಆವರಿಸಿದೆ. ಇಲ್ಲಿನ ಅಂಗಡಿಗಳಿಗೆ ನೀರು ನುಗ್ಗಿದೆ. ಸ್ನಾಘಟ್ಟದ ಸಮೀಪವಿದ್ದ ಅಂಗಡಿಯು ಸಂಪೂರ್ಣ ಮುಳುಗಡೆಗೊಂಡಿದೆ.ಕುಕ್ಕೆ- ಮಂಜೇಶ್ವರ ಸಂಪರ್ಕ ಬಂದ್: ದರ್ಪಣತೀರ್ಥ ನದಿಯು ತುಂಬಿ ಹರಿದ ಕಾರಣ ಕುಕ್ಕೆಸುಬ್ರಹ್ಮಣ್ಯ- ಪುತ್ತೂರು-ಮಂಜೇಶ್ವರ ಅಂತಾರಾಜ್ಯ ಹೆದ್ದಾರಿಯ ದರ್ಪಣತೀರ್ಥ ಸೇತುವೆಯು ಮುಳುಗಡೆಗೊಂಡಿತು. ನದಿ ನೀರು ಸುಮಾರು ಅರ್ಧ ಕಿ.ಮೀ. ದೂರದ ತನಕ ಹೆದ್ದಾರಿಯನ್ನು ಆಕ್ರಮಿಸಿಕೊಂಡಿತ್ತು. ದರ್ಪಣತೀರ್ಥ ಸೇತುವೆಯಿಂದ ಸುಮಾರು ೧೦೦ಮೀ ದೂರವಿರುವ ತಿರುಗಣೆಗುಂಡಿ ತನಕ ಹೆದ್ದಾರಿಯನ್ನು ಪ್ರವಾಹ ಆಕ್ರಮಿಸಿಕೊಂಡಿದೆ. ದರ್ಪಣ ತೀರ್ಥ ನದಿ ದಡದ ಎಲ್ಲಾ ಕೃಷಿ ತೋಟಗಳು ನೀರಿನಿಂದ ತುಂಬಿತ್ತು. ಸಮೀಪದ ಮನೆಗಳು ಜಲಾವೃತಗೊಂಡಿತ್ತು. ತೋಟ ಜಲಾವೃತ: ಕುಮಾರಧಾರ ನದಿಯ ಪ್ರವಾಹದಿಂದಾಗಿ ದೋಣಿಮಕ್ಕಿ, ಕುಲ್ಕುಂದ ಕಾಲನಿ, ನೂಚಿಲ ಬೈಲು, ಕುದುರೆಮಜಲು, ಕುಮಾರಧಾರ ಮೊದಲಾದ ಕಡೆ ತೋಟಗಳಿಗೆ ನೀರು ನುಗ್ಗಿದೆ. ಅಡಕೆ, ತೆಂಗಿನ ಫಲಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ನೀರು ಶೇಖರಣೆಯಾದ ಕಾರಣ ಬಾಳೆಗಿಡಗಳು ಧರಾಶಾಹಿಯಾಗಿವೆ.
ಭಾಗಶಃ ದ್ವೀಪವಾದ ದೋಣಿಮಕ್ಕಿ: ದರ್ಪಣ ತೀರ್ಥ ನದಿಯಲ್ಲಿ ಪ್ರವಾಹ ಉಕ್ಕಿದ ಕಾರಣ ಸುಬ್ರಹ್ಮಣ್ಯದ ಕುಮಾರಧಾರದ ದೋಣಿಮಕ್ಕಿ ಪರಿಸರವು ಬಾಗಶಃ ದ್ವೀಪವಾಯಿತು. ಇಲ್ಲಿಗೆ ತೆರಳುವ ರಸ್ತೆಯು ಸಂಪೂರ್ಣವಾಗಿ ಜಲಾವೃತವಾಯಿತು. ಅಲ್ಲದೆ ಇಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಈ ಭಾಗದ ಸುಮಾರು ೪೦ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಡಿತಗೊಂಡಿದೆ. ಕಿಟ್ಟಣ್ಣ ರೈ, ಮೋಹನದಾಸ ರೈ, ರವಿ ಕಕ್ಕೆಪದವು, ಗಿರಿಯಪ್ಪ ಗೌಡ, ದಿನೇಶ್, ಮೋನಪ್ಪ ಡಿ., ಸುಬ್ರಹ್ಮಣ್ಯ ಕೆ.ಯು, ಹಲ್ಕುರೆ ಗೌಡ, ಉದಯ ಕುಮಾರ್, ಶೇಷಪ್ಪ ಗೌಡ ಮೊದಲಾದ ಮನೆಯವರು ಸಂಕಷ್ಠ ಎದುರಿಸಬೇಕಾಯಿತು.ಗುಂಡಡ್ಕ ಸೇತುವೆ ಜಲಾವೃತ: ಭಾರಿ ಮಳೆಗೆ ಐನೆಕಿದುವಿನ ಗುಂಡಡ್ಕ ಸೇತುವೆಯು ಶುಕ್ರವಾರ ಬಂದ್ ಆಗಿದೆ. ಹರಿಹರ ಹೊಳೆಯಲ್ಲಿ ಹರಿದು ಬಂದ ಪ್ರವಾಹದಿಂದಾಗಿ ಸೇತುವೆಯು ಸಂಪೂರ್ಣವಾಗಿ ಜಲಾವೃತಗೊಂಡು ಸುಬ್ರಹ್ಮಣ್ಯದಿಂದ ಐನೆಕಿದು ಮೂಲಕ ಹರಿಹರ ಪಲ್ಲತ್ತಡ್ಕ ಬಾಳುಗೋಡು, ಕೊಲ್ಲಮೊಗ್ರು ಸಂಪರ್ಕ ಸ್ಥಗಿತಗೊಂಡಿತು. ಹರಿಹರ ಹೊಳೆಯಲ್ಲಿ ಪ್ರವಾಹ ಬಂದುದರಿಂದ ಹರಿಹರೇಶ್ವರ ಸಂಗಮ ಕ್ಷೇತ್ರ ಜಲಾವೃತ್ತವಾಗಿದೆ.ಪಂಜ-ಸುಬ್ರಹ್ಮಣ್ಯ ಹೆದ್ದಾರಿ ಜಲಾವೃತ: ಪಂಜ ಹೊಳೆಯಲ್ಲಿ ಭಾರೀ ಪ್ರವಾಹ ಹರಿದು ಬಂದ ಕಾರಣ ಬೊಳ್ಮಲೆ ಸೇತುವೆ ಬ್ಲಾಕ್ ಆಯಿತು. ಇದರಿಂದಾಗಿ ಬೊಳ್ಮಲೆ, ಬಸ್ತಿಕಾಡು ಪ್ರದೇಶದ ನಡುವೆ ಸಂಪರ್ಕ ಕಡಿತಗೊಂಡಿತು. ಪ್ರವಾಹ ನೀರು ಸುಬ್ರಹ್ಮಣ್ಯ- ಪಂಜ- ಪುತ್ತೂರು ಅಂತಾರಾಜ್ಯ ಹೆದ್ದಾರಿಗೆ ವ್ಯಾಪಿಸಿದೆ. ಇದರಿಂದಾಗಿ ಪಂಜ-ಸುಬ್ರಹ್ಮಣ್ಯ ಸಂಪರ್ಕವೂ ಕಡಿತಗೊಂಡಿತು. ಕಡಬ- ಪಂಜ ಸಂಪರ್ಕ ರಸ್ತೆಯ ಪುಳಿಕುಕ್ಕು ಎಂಬಲ್ಲಿ ಕುಮಾರಧಾರ ನದಿಯು ರಸ್ತೆಯನ್ನು ಆಕ್ರಮಿಸಿಕೊಂಡ ಕಾರಣ ಪಂಜ- ಕಡಬ ರಸ್ತೆ ಸಂಚಾರವು ಸ್ಥಗಿತಗೊಂಡಿದೆ.ಎನ್‌ಡಿಆರ್‌ಎಫ್ ಆಗಮನ: ನದಿಗಳು ಪ್ರವಾಹರೂಪಿಯಾಗಿ ಹರಿಯುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಎನ್‌ಡಿಆರ್‌ಎಫ್ ಪಡೆ ಕುಕ್ಕೆ ಕ್ಷೇತ್ರದಲ್ಲಿ ಬೀಡು ಬಿಟ್ಟಿದೆ. ಸುಳ್ಯ ಹಾಗೂ ಪುತ್ತೂರಿನ ಆಗ್ನಿಶಾಮಕ ದಳವು ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿದೆ.
ದೇವರಹಳ್ಳಿ ರಸ್ತೆ ಬ್ಲಾಕ್: ಯೇನೆಕಲ್ಲಿನ ಮಧುವನ ಬಳಿಯಿಂದ ದೇವರಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಕಲ್ಲಾಜೆ ಹೊಳೆಯಲ್ಲಿನ ಪ್ರವಾಹದಿಂದ ಮುಳುಗಡೆಯಾಗಿ ಈ ರಸ್ತೆ ಸಂಚಾರವೂ ಸ್ಥಗಿತವಾಗಿದೆ. ಬಾಳುಗೋಡಿನ ಪದಕ ಸೇತುವೆಯು ಕಳೆದ ಎರಡು ದಿನಗಳಿಂದ ನಿರಂತರವಾಗಿ ಬಂದ್ ಆಗಿದೆ. ಬಾಳುಗೋಡು ಹೊಳೆಯಲ್ಲಿ ಪ್ರವಾಹ ಮತ್ತಷ್ಟು ಅಧಿಕಗೊಂಡ ಕಾರಣ ಸೇತುವೆ ಕೊಚ್ಚಿ ಹೋಗುವ ಭೀತಿ ಜನತೆಯಲ್ಲಿ ಉಂಟಾಗಿದೆ.