ಸಾರಾಂಶ
ಧಾರವಾಡ:
ಕಳೆದ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಬಹುತೇಕ ಕೃಷಿ ಬೆಳೆಗಳು ಹಾನಿಗೀಡಾಗಿವೆ. ಹೀಗಾಗಿ ರೈತರು ಸಿಕ್ಕಾಪಟ್ಟೆ ಆರ್ಥಿಕ ತೊಂದರೆ ಅನುಭವಿಸಿದ್ದರು. ಸಂಕಷ್ಟದ ಈ ಸಂದರ್ಭದಲ್ಲಿ ತೋಟಗಾರಿಕೆ ಬೆಳೆಯಾಗಿ ಹೂವು ಬೆಳೆದ ರೈತರು ತುಸು ನೆಮ್ಮದಿಯ ನಿಟ್ಟಿಸಿರುವ ಬಿಡುವಂತಾಗಿದೆ. ಈ ಬಾರಿ ದೀಪಾವಳಿಗೆ ಹೂವಿಗೆ ಭಾರೀ ಬೇಡಿಕೆ ಬಂದಿದೆ.ದಸರಾ ಹಬ್ಬಕ್ಕೂ ಕೈ ಹಿಡಿದ ಹೂವಿನ ಬೆಳೆಯು ದೀಪಾವಳಿಗಂತೂ ರೈತರ ಜೇಬು ತುಂಬಿಸುತ್ತಿದೆ. ಬರೀ ಧಾರವಾಡ ಮಾತ್ರವಲ್ಲದೇ ಉತ್ತರ ಕರ್ನಾಟಕದಲ್ಲಿಯೇ ಮಳೆಯಿಂದ ಸಾಂಪ್ರದಾಯಿಕ ಕೃಷಿ ಬೆಳೆಗಳು ಹಾನಿಗೆ ಈಡಾಗಿವೆ. ಒಂದು ಕಡೆ ಇದುವರೆಗೂ ಬೆಳೆ ಪರಿಹಾರ ನೀಡದ ರಾಜ್ಯ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದು ಕಡೆ ಹಿಂಗಾರು ಬಿತ್ತನೆ ಮಾಡಲು ಆರ್ಥಿಕ ಶಕ್ತಿ ಇಲ್ಲದೇ ಒದ್ದಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಹೂವು ಬೆಳೆದ ರೈತರು ಸಮಧಾನದ ಉಸಿರು ಬಿಡುತ್ತಿದ್ದಾರೆ.
ಎಲ್ಲೆಲ್ಲಿ ಹೂ ಬೆಳೆ:ಧಾರವಾಡ ತಾಲೂಕಿನ ಯಾದವಾಡ, ಕುರಬಗಟ್ಟಿ, ಶಿಬಾರಗಟ್ಟಿ, ಮುಳಮುತ್ತಲ ಸೇರಿದಂತೆ ಗರಗ ಹೋಬಳಿ ಗ್ರಾಮಗಳಲ್ಲಿ ಹೂವಿನ ಬೆಳೆ ರೈತರಿಗೆ ಆಶಾದಾಯಕವಾಗಿದೆ. ಸೇವಂತಿ (ಬಿಳಿ, ಹಳದಿ), ಚೆಂಡು (ಹಳದಿ, ಕೆಂಪು), ಮಲ್ಲಿಗೆ, ಗಲಾಟಿ ಹೂವು ದೀಪಾವಳಿಗೆ ಅನುಕೂಲ ಕಲ್ಪಿಸಿದೆ. ದೀಪಾವಳಿಗೆ ಪ್ರತಿಯೊಂದು ಮನೆಯಲ್ಲಿ ಲಕ್ಷ್ಮೀಪೂಜೆ ಇರುತ್ತದೆ. ಅಂಗಡಿ-ಮುಂಗಟ್ಟು, ವಾಹನಗಳ ಪೂಜೆ ಸೇರಿದಂತೆ ಹೂ ಅಗತ್ಯವಾಗಿ ಬೇಕು. ಹೀಗಾಗಿ ಮಾರುಕಟ್ಟೆಯಲ್ಲಿ ಎಲ್ಲ ಬಗೆಯ ಹೂವುಗಳಿಗೆ ಉತ್ತಮ ದರ ಸಿಗುತ್ತಿದೆ.
ಇಷ್ಟು ದಿನಗಳ ಕಾಲ ಹೂವನ್ನು ಕಾಪಿಟ್ಟುಕೊಂಡು ಈಗ ದೀಪಾವಳಿಗೆ ರೈತರು ಹೂವನ್ನು ತರುತ್ತಿದ್ದಾರೆ. ಗ್ರಾಹಕರಿಂದಲೂ ಭಾರೀ ಬೇಡಿಕೆ ಇದೆ. ಸೇವಂತಿ ಹೂವಿಗಂತೂ ಉತ್ತಮ ಬೆಲೆ ದೊರೆಯುತ್ತಿದೆ. ಇಷ್ಟು ದಿನ ಕೆಜಿಗೆ ₹100ರೊಳಗೆ ಇದ್ದ ದರ ಮಂಗಳವಾರ ₹160ಕ್ಕೆ ಏರಿಕೆಯಾಗಿದೆ. ಜತೆಗೆ ಉಳಿದ ಹೂಗಳಿಗೂ ಬೆಲೆ ಬಂದಿದ್ದು, ರೈತರು ಸಂತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ.ಜಿಲ್ಲೆಯಲ್ಲಿ ಒಟ್ಟು 97 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಷ್ಟವಾಗಿದೆ. ಬೆಳೆಹಾನಿ ವರದಿಯನ್ನು ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಮುಟ್ಟಿಸಿದೆ. ಆದರೆ, ಸರ್ಕಾರ ಮಾತ್ರ ಇದುವರೆಗೂ ಒಂದು ರುಪಾಯಿ ಪರಿಹಾರ ರೈತನ ಖಾತೆಗೆ ಹಾಕಿಲ್ಲ. ಕಳೆದೊಂದು ತಿಂಗಳಿನಿಂದ ಒಂದು ವಾರದಲ್ಲಿ ಪರಿಹಾರ ಹಾಕುವುದಾಗಿ ಹೇಳಲಾಗುತ್ತಿದೆ. ಇಂತಹ ವೇಳೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಜಿಲ್ಲೆಯ ಕೆಲವು ರೈತರಿಗೆ ಇದೀಗ ಹೂವಿನ ಕೃಷಿ ಕೈ ಹಿಡಿದಿದೆ ಎನ್ನುತ್ತಾರೆ ಯಾದವಾಡ ರೈತ ಗದಿಗೆಪ್ಪ ಬೆಂಡಿಗೇರಿ.