ರಾಜವೀರ ಮದಕರಿನಾಯಕನ ಪ್ರತಿಮೆಗೆ ಹೂಗಳ ಸಿಂಗಾರ

| Published : May 16 2024, 12:55 AM IST

ಸಾರಾಂಶ

ಮದಕರಿನಾಯಕನ 242ನೇ ಪುಣ್ಯತಿಥಿಯಂದು ಕೋಟೆನಾಡಿನ ಜನರಿಂದ ಪುಷ್ಪನಮನ ಸಲ್ಲಿಸಲಾಯಿತು. ಇನ್ನು, ಇದೇ ದಿನ ಸಂಜೆ ಪಂಜಿನಾರತಿ ಕಾರ್ಯಕ್ರಮಕ್ಕೆ ಶಾಸಕ ವೀರೇಂದ್ರ ಪಪ್ಪಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ರಾಜಾವೀರ ಮದಕರಿನಾಯಕನ 242 ಪುಣ್ಯತಿಥಿಯ ಅಂಗವಾಗಿ ಬುಧವಾರ ಚಿತ್ರದುರ್ಗದ ಮದಕರಿನಾಯಕ ಕಂಚಿನ ಪ್ರತಿಮೆಯನ್ನು ಹೂವುಗಳಿಂದ ವಿಶೇಷವಾಗಿ ಅಲಂಕರಿಸಿ ಪುಷ್ಪ ನಮನ ಸಲ್ಲಿಸಲಾಯಿತು. ಸುಗಂಧರಾಜ, ಮಲ್ಲಿಗೆ, ಗುಲಾಬಿ, ಸೇವಂತಿಗೆ, ಹಸಿರು ಪತ್ರೆಯಿಂದ ಕೂಡಿದ್ದ ಬೃಹದಾಕಾರದ ಹಾರವನ್ನು ಜೆಸಿಬಿ ಮೂಲಕ ಮದಕರಿನಾಯಕನ ಪ್ರತಿಮೆಗೆ ಸಮರ್ಪಿಸಲಾಯಿತು.

ಮದಕರಿನಾಯಕನ ಪುಣ್ಯತಿಥಿ ಅಂಗವಾಗಿ ಮುಂಜಾನೆಯಿಂದಲೇ ಸಿದ್ಧತೆಗಳು ನಡೆದವು. ಹೂಗಳಿಂದ ಸಿಂಗಾರ ಮಾಡುವುದ ದುರ್ಗದ ಯುವಕರು ತಂಡೋ ಪತಂಡವಾಗಿ ಆಗಮಿಸಿ ವೀಕ್ಷಿಸಿದರು. ದಿನವಿಡೀ ಸೆಲ್ಫಿಗಳನ್ನು ತೆಗೆದುಕೊಂಡು ಸ್ಟೇಟಸ್‌ಗಳಿಗೆ ಹಾಕಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬೆಳಿಗ್ಗೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮದಕರಿ ನಾಯಕನ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಸಮಾಜದವರು ಸೇರಿ ರಾಜಾವೀರ ಮದಕರಿನಾಯಕನ ಪುಣ್ಯಸ್ಮರಣೆ ಆಚರಿಸುತ್ತಿರುವುದು ನಿಜವಾಗಿಯೂ ನಾಡ ದೊರೆಗೆ ನೀಡುವ ಬಹುದೊಡ್ಡ ಗೌರವ. 77 ಪಾಳೇಗಾರರಲ್ಲಿ ಚಿತ್ರದುರ್ಗದ ಕೋಟೆ ಆಳಿದ ಮದಕರಿನಾಯಕ ಕೂಡ ಒಬ್ಬರು. 12ನೇ ವಯಸ್ಸಿನಲ್ಲಿಯೇ ಪಟ್ಟಾಭಿಷೇಕವಾಗಿ ಇಪ್ಪತ್ತೈದು ವರ್ಷಗಳ ಕಾಲ ಆಳ್ವಿಕೆ ನಡೆಸಿ ನಲವತ್ತು ವರ್ಷದಲ್ಲಿ ಮದಕರಿ ನಾಯಕನ ಅಂತ್ಯವಾಗುತ್ತದೆ. ಹಾಗಾಗಿ ಕೇವಲ ನಾಯಕ ಜನಾಂಗದವರಷ್ಟೆ ಅಲ್ಲ ಎಲ್ಲಾ ಜಾತಿಯವರು ಮದಕರಿನಾಯಕನ ಇತಿಹಾಸವನ್ನು ತಿಳಿದುಕೊಳ್ಳ ಬೇಕೆಂದರು.

ಆಳ್ವಿಕೆಯಲ್ಲಿ ಶೌರ್ಯ ಪರಾಕ್ರಮ ಮೆರೆದಿರುವ ರಾಜಾವೀರ ಮದಕರಿನಾಯಕ ಶತ್ರುಗಳಿಂದ ಕೋಟೆಯನ್ನು ರಕ್ಷಿಸಿ ಅಜರಾಮರವಾಗಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಈ ಬಾರಿ ಪುಣ್ಯಸ್ಮರಣೆಯನ್ನು ನಾಯಕ ಸಮಾಜದಿಂದ ಸರಳವಾಗಿ ಆಚರಿಸಲಾಗಿದೆ. ಮುಂದಿನ ದಿನಗಳಲ್ಲಿ ಪಟ್ಟಾಭಿಷೇಕ, ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಇದಕ್ಕೆ ಎಲ್ಲಾ ಜಾತಿಯವರ ಸಹಕಾರ ಅತ್ಯವಶ್ಯಕ ಎಂದು ಕೋರಿದರು.

ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಮದಕರಿನಾಯಕನ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿ ಯಾವುದೇ ಜಾತಿ ಬೇಧವಿಲ್ಲದೆ ಎಲ್ಲರೂ ಮದಕರಿನಾಯಕ ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡಿರುವುದು ಅತ್ಯಂತ ಸಂತೋಷದ ಸಂಗತಿ. ಚಿತ್ರದುರ್ಗದ ಏಳು ಸುತ್ತಿನಕೋಟೆ ಅಭಿವೃದ್ಧಿಯಾಗಬೇಕಿದೆ. ಆಗ ಮಾತ್ರ ರಾಜಾವೀರ ಮದಕರಿ ನಾಯಕನಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ ಮದಕರಿನಾಯಕನ ಪ್ರತಿಮೆಗೆ ಪುಷ್ಪಾರ್ಚನೆ ಅರ್ಪಿಸಿ ಮಾತನಾಡಿ, ಚಿತ್ರದುರ್ಗ ದಲ್ಲಿ ಮದಕರಿನಾಯಕ ಥೀಂ ಪಾರ್ಕ್ ನಿರ್ಮಾಣ ಮಾಡುವುದಾಗಿ ನಮ್ಮ ನಾಯಕರುಗಳು ಕಳೆದ ವರ್ಷವೇ ಭರವಸೆ ನೀಡಿದ್ದಾರೆ. ಅದರಂತೆ ಎಲ್ಲವೂ ನಡೆಯುತ್ತದೆ ಎಂದು ಹೇಳಿದರು.

ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್.ಜೆ.ಕೃಷ್ಣಮೂರ್ತಿ, ತಾಲೂಕು ಅಧ್ಯಕ್ಷ ಬಿ.ಕಾಂತರಾಜ್, ಮದಕರಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಸಂದೀಪ್, ನಗರಸಭೆ ಮಾಜಿ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ, ಡಿ.ಗೋಪಾಲಸ್ವಾಮಿ ನಾಯಕ, ಕಾಟಿಹಳ್ಳಿ ಕರಿಯಪ್ಪ, ಜೆ.ಎನ್.ಕೋಟೆ ಗುರುಸಿದ್ದಪ್ಪ, ರಾಜಾ ಮದಕರಿ ನಾಯಕ, ಹೆಚ್.ಅಂಜಿನಪ್ಪ, ಸೋಮೇಂದ್ರ, ನಗರಸಭೆ ಸದಸ್ಯ ದೀಪು, ಮಾಜಿ ಸದಸ್ಯರುಗಳಾದ ತಿಪ್ಪೇಸ್ವಾಮಿ, ಪ್ರಕಾಶ್ ಸೇರಿದಂತೆ ನಾಯಕ ಸಮಾಜದ ಅನೇಕ ಮುಖಂಡರುಗಳು ಪುಣ್ಯಸ್ಮರಣೆಯಲ್ಲಿ ಪಾಲ್ಗೊಂಡಿದ್ದರು.