- ಮಾ.1ರವರೆಗೆ ಆಯೋಜನೆ । ವಿಧಾನಸೌಧ, ಹಂಪಿ ರಥ ಅಲಂಕಾರ ವಿಶೇಷ ಆಕರ್ಷಣೆ - - -

ಕನ್ನಡಪ್ರಭ ವಾರ್ತೆ, ದಾವಣಗೆರೆ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ, ದಾವಣಗೆರೆ ಮತ್ತು ಜಿಲ್ಲಾಡಳಿತ ಆಶ್ರಯದಲ್ಲಿ ಗಾಜಿನ ಮನೆಯಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ -2025 ಕಾರ್ಯಕ್ರಮಕ್ಕೆ ಬುಧವಾರ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಚಾಲನೆ ನೀಡಿದರು.

ಫಲಪುಷ್ಪ ಪ್ರದರ್ಶನವು ಮಾರ್ಚ್ 1ರವರೆಗೆ ಒಟ್ಟು 5 ದಿನಗಳ ಕಾಲ ಜರುಗಲಿದೆ. ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಮುಖ್ಯ ಆಕರ್ಷಣೆಯಾಗಿ ವಿಧಾನಸೌಧ 42 ಅಡಿ ಉದ್ದ, 14 ಅಡಿ ಅಗಲ, 18 ಅಡಿ ಎತ್ತರದ ಕಲಾಕೃತಿಗಳನ್ನು ವೈವಿಧ್ಯಮಯ ಹೂವುಗಳಿಂದ ಅಲಂಕರಿಸಲಾಗಿದೆ. ಈ ಕಲಾಕೃತಿಗೆ 4 ಲಕ್ಷ ಸೇವಂತಿಗೆ ಹಳದಿ, ಬಿಳಿ, ನೇರಳೆ ಹೂವುಗಳಿಂದ ಶೃಂಗಾರ ಮಾಡಲಾಗಿದೆ.

ಹಂಪಿ ರಥವನ್ನು 10 ಅಡಿ ಉದ್ದ, 10 ಅಗಲ ಅಡಿ, 12 ಅಡಿ ಎತ್ತರದ ಕಲಾಕೃತಿ ರಚನೆ ಮಾಡಿ ಕಾಮಿನಿ ಎಲೆಗಳಿಂದ, 50 ಸಾವಿರ ಸೇವಂತಿಗೆ, 10 ಸಾವಿರ ಹೂವುಗಳಿಂದ ನಿರ್ಮಾಣ ಮಾಡಲಾಗಿದೆ. ** I LOVE DAVANGERE ** 15 ಅಡಿ ಉದ್ದ, 7 ಅಡಿ ಎತ್ತರದ 10 ಸಾವಿರ ಸೇವಂತಿಗೆ ಹೂ ಮತ್ತು 50 ಸಾವಿರ ಕಾಮಿನಿ ಎಲೆಗಳಿಂದ ಶೃಂಗಾರ ಮಾಡಲಾಗಿದೆ.

ದಿವಂಗತ ಡಾ.ಶಾಮನೂರು ಶಿವಶಂಕರಪ್ಪ ಮತ್ತು ಸಾಲುಮರದ ತಿಮ್ಮಕ್ಕ ಅವರ ಸಾಧನೆಯ ಹಾದಿಗೆ ಪುಷ್ಪನಮನ. ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ 56 ಬಗೆಯ 20 ಸಾವಿರಕ್ಕೂ ಹೆಚ್ಚು ವಿವಿಧ ಅಲಂಕಾರಿಕ ಗಿಡಗಳು ಮತ್ತು ಹೂವಿನ ಗಿಡಗಳ ವಿವಿಧ ಕಲಾತ್ಮಕ ವಿನ್ಯಾಸಗಳ ಜೋಡಣೆ ಮಾಡಲಾಗಿದೆ. ಪ್ರಮುಖವಾಗಿ ಆಂತ್ರಿಯಂ, ಡಾಲಿಯಾ, ಜೀನಿಯಾ, ಬೀಗೋನಿಯಾ, ಡಯಾಂಥಸ್, ಚೆಂಡು ಹೂವು, ಸೇವಂತಿಗೆ, ಸೆಲೋಸಿಯಾ, ಅರೆಕಾ ಪಾಮ್, ರಾಫಿಸ್ ಪಾಮ್, ಯುಜೀನಿಯಾ, ಫಿಕಸ್ ಪಾಂಡಾ, ಸ್ಟಾರ್ ಲೈಟ್, ಬೊಂಬೂ ಪಾಮ್, ಕ್ರೋಟಾನ್, ಅಗೋನೆಮಾ ಐಸ್, ಗೋಲ್ಡನ್ ಸೈಪ್ರೆಸ್, ಚಾಂಪಿಯನ್ ಪಾಮ್, ಇರಾ, ಪಿಚೋಡಿಯಾ ಪಾಮ್, ಫೀನಿಕ್ಸ್, ಡೈಫೆನ್‌ಬಾಚಿಯಾ, ಬುದ್ಧ ಬಂಬೂ ಸಾಂಗ್ ಅಫ್ ಜಾಮಿಕಾ, ಡ್ರಾಕೇನಾ ಫ್ರಾಗ್ರನ್ಸ್, ನೋಲಿನಾ ಪಾಮ್, ಬರಡ್ ಅಫ್ ಪ್ಯಾರಡೈಸ್, ರಾಡರ್ಮಾಚರಾ, ಕ್ಯಾಲಥಿಯಾ ಲುಥಿಯಾ, ಷಾಂಪೇನ್ ಪಾಮ್, ಚೈನಾ ಆರೆಂಜ್, ಕ್ಯಾಮೆಲಿಯಾ, ಇಟಾಲಿಯನ್ ಸೈಪ್ರೆಸ್, ಗೋಲ್ಡನ್ ಥುಜಾ, ಆರೆಂಜ್ ಟ್ರಂಪೆಟ್ ಕ್ರೀಪರ್, ಡ್ರಾಕೇನಾ ಆಲ್ ವೆರಿಟಿ, ಆಗೋನೆಮಾ ಸಿಲ್ವರ್, ರಿಯೋ, ಅರೆಲಿಯಾ (ಹಸಿರು, ಚಿನ್ನ), ಪಾಂಡನಸ್, ವೈಟ್ ರಿಬ್ಬನ್, ಕ್ರೋಟಾನ್, ಇಕ್ಕೋರಾ ಮಿನಿ, ಸೈಫೋರಾ, ನಂದಿ ಬಟು, ಎರಾಂಥೆಮಮ್, ಗಾಲ್ಮೀಮಿಯಾ, ಅಖಿಲಾಫಾ, ಡ್ರಾಕೇನಾ ಕೊಲೊರಾಮಾ, ಆತ್ಮರ್ನಾಂಥೆರಾ, ಸ್ಕೋ ಬುಸ್, ಆಕಾಲಿಸ್, ಪಾರ್ಟುಲಾಕಾ, ಮಧುಕಾಮಿನಿ, ಅಲಮಂಡಾ, ಯುಜೆನಿಯಾ, ನಿಕೋಟಿನಾ, ಜೋತ್ರವ, ಯುಫೋರ್ಬಿಯಾ ಮಿಲಿ ರೆಡ್, ಚೈತ್ರಮಾಲ ಬಳಸಲಾಗಿದೆ.


ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಶಾಮನೂರು ಬಸವರಾಜಪ್ಪ , ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ, ಸಿಇಒ ಗಿತ್ತೆ ಮಾಧವ ವಿಠಲರಾವ್, ತೋಟಗಾರಿಕೆ ಜಂಟಿ ನಿರ್ದೇಶಕ ರಾಘವೇಂದ್ರ ಪ್ರಸಾದ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಗಾಜಿನ ಮನೆಯ ಉದ್ಯಾನವನದ ಆವರಣದಲ್ಲಿ ಅಪರೂಪದ ಅಲಂಕಾರಿಕ ಮರಗಳನ್ನು ನಾಟಿ ಮಾಡಲಾಗಿದೆ. ಈ ಎಲ್ಲ ಮರಗಳಿಗೆ ಮತ್ತು ಗಾಜಿನ ಮನೆಯ ಒಳಗಿನ ಭಾಗಗಳಿಗೆ ವಿವಿಧ ಬಣ್ಣಗಳ ವಿದ್ಯುತ್ ದೀಪಾಲಂಕಾರ ಮಾಡಿ ಕಾರ್ಯಕ್ರಮ ಸೊಬಗನ್ನು ಇಮ್ಮಡಿಗೊಳಿಸಲಾಗಿದೆ.

ಜಿಲ್ಲೆಯ ಎಲ್ಲ ತಾಲೂಕುಗಳ ತೋಟಗಾರಿಕೆ ಬೆಳೆಗಾರರು ಬೆಳೆದ ವಿವಿಧ ತೋಟಗಾರಿಕೆ ಬೆಳೆಗಳಾದ ಹಣ್ಣು, ತರಕಾರಿ ಮತ್ತು ತೋಟದ ಬೆಳೆಗಳ ಉತ್ಪನ್ನಗಳ ಪ್ರದರ್ಶನದ ಜೊತೆಗೆ ಜಿಲ್ಲೆಯಲ್ಲಿ ಅಡಿಕೆ ಬೆಳೆಯೊಂದಿಗೆ ಅಂತರ ಬೆಳೆಗಳನ್ನು ಬೆಳೆದು ಮಾದರಿ ಆಗಿರುವ ರೈತರ ವಿವರಣೆಗಳನ್ನು ಪ್ರದರ್ಶಿಸಲಾಗಿದೆ. ಫಲಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ಬರುವ ಸಾರ್ವಜನಿಕರಿಗೆ ಪ್ರತಿ ದಿನ ಸಾಯಂಕಾಲ ಸಂಗೀತ ಕಾರಂಜಿಯ ಪ್ರದರ್ಶಗಳನ್ನು ಆಯೋಜಿಸಲಾಗಿದೆ.

ಪ್ರವೇಶ ಶುಲ್ಕವು ಪ್ರತಿ ದಿನದ ಸಂಗೀತ ಕಾರಂಜಿಯ ಪ್ರದರ್ಶನ ಇರುವುದರಿಂದ ವಯಸ್ಕರಿಗೆ ₹30 ಮತ್ತು ಮಕ್ಕಳಿಗೆ ₹10 ನಿಗದಿಪಡಿಸಲಾಗಿದೆ. ಫಲಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ಸಾರ್ವಜನಿಕರು ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 9 ಗಂಟೆವರೆಗೆ ವೀಕ್ಷಿಸಬಹುದು.

ದಾವಣಗೆರೆ ಹಾಗೂ ಅಕ್ಕಪಕ್ಕದ ಎಲ್ಲ ಜಿಲ್ಲೆಗಳ ಸರ್ವ ರೈತರು ಹಾಗೂ ನಾಗರೀಕರು ಕುಟುಂಬ ಸಮೇತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಫಲಪುಷ್ಪ ಪ್ರದರ್ಶನ ವೀಕ್ಷಿಸಿ, ಯಶಸ್ವಿಗೊಳಿಸಲು ತೋಟಗಾರಿಕೆ ಜಂಟಿ ನಿರ್ದೇಶಕ ತಿಳಿಸಿದ್ದಾರೆ.

- - -

-25ಕೆಡಿವಿಜಿ35, 36:

ದಾವಣಗೆರೆಯ ಗಾಜಿನ ಮನೆಯಲ್ಲಿ ಇಂದಿನಿಂದ ಆರಂಭಗೊಂಡ ಫಲಪುಷ್ಪ ಪ್ರದರ್ಶನವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿದರು. ಡಿಸಿ ಜಿ.ಎಂ.ಗಂಗಾಧರ ಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್ ಇತರರು ಇದ್ದರು.-25ಕೆಡಿವಿಜಿ37, 38, 39, 40:

ದಾವಣಗೆರೆಯ ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಬಗೆಯ ಹೂಗಳಿಂದ ನಿರ್ಮಾಣ ಮಾಡಿರುವ ಕಲಾಕೃತಿಗಳು.