ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಪ್ರವಾಸಿಗರ ನೆಚ್ಚಿನ ತಾಣ ಮಡಿಕೇರಿ ರಾಜಾಸೀಟು ಉದ್ಯಾನವನದಲ್ಲಿ ನಗರದ ಇತಿಹಾಸ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಾಲಯ ಕಲಾಕೃತಿ ಮೈದಳೆದಿದೆ.ನಗರದ ಪ್ರಸಿದ್ಧ ಪ್ರವಾಸಿ ತಾಣ ರಾಜಾಸೀಟಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಮೂರು ದಿನಗಳ ಕಾಲ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಶುಕ್ರವಾರ ಸಂಜೆ ಚಾಲನೆ ನೀಡಲಾಗಿದ್ದು, ಬಗೆ ಬಗೆಯ ಹೂವುಗಳಿಂದ ರಾಜಾಸೀಟು ಕಣ್ಮನ ಸೆಳೆಯುತ್ತಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ತೋಟಗಾರಿಕೆ ಇಲಾಖೆ ವತಿಯಿಂದ ನಗರದ ರಾಜಾಸೀಟು ಉದ್ಯಾನವನದಲ್ಲಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಶಾಸಕ ಡಾ.ಮಂತರ್ ಗೌಡ ಚಾಲನೆ ನೀಡಿದರು.ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಈ ಬಾರಿ ಓಂಕಾರೇಶ್ವರ ದೇವಾಲಯ ಹಾಗೂ ಕೊಡಗಿನ ಜೇನು ಆಕರ್ಷಣೀಯವಾಗಿದ್ದು, ಗಮನ ಸೆಳೆಯುತ್ತಿದೆ. ಹಾಗೆಯೇ ಫಲಪುಷ್ಪ ಪ್ರದರ್ಶನದಲ್ಲಿ ಸೆಲ್ಫಿ ಫೋಟೋ ಸೆರೆ ಹಿಡಿಯಲೂ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಪ್ರತೀ ವರ್ಷದಂತೆ ಈ ಬಾರಿಯು ಸಹ ಬಟಾಣಿ ಗಾರ್ಡನ್ ಮಾದರಿಯಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಈ ಬಾರಿ ನಾಲ್ಕು ದಿನಗಳ ಕಾಲ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಇದನ್ನು ಮತ್ತಷ್ಟು ವಿಸ್ತರಿಸಬೇಕು ಎಂದು ಸಲಹೆ ಮಾಡಿದರು.35 ಲಕ್ಷ ರು. ವೆಚ್ಚದಲ್ಲಿ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಪ್ರವಾಸಿಗರು ಸೇರಿದಂತೆ ಎಲ್ಲರೂ ಸ್ವಚ್ಚತೆಗೆ ಒತ್ತು ನೀಡಬೇಕು ಎಂದರು.
ಬಣ್ಣ ಬಣ್ಣದ ಚಿತ್ತಾರದ ಹೂವುಗಳು ನೋಡುಗರನ್ನು ಚಕಿತಗೊಳಿಸುತ್ತಿದ್ದು, ರಾಜಾಸೀಟು ಉದ್ಯಾನವನದಲ್ಲಿ ಒಂದು ತಿಂಗಳವರೆಗಾದರೂ ಪುಷ್ಪ ಪ್ರದರ್ಶನಗಳು ನಡೆಯಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.ಕಳೆದ ಬಾರಿಯಂತೆ ಈ ಬಾರಿಯೂ ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಜವಾಹರ್ ಲಾಲ್ ನೆಹರು, ಸರದಾರ್ ವಲ್ಲಭಬಾಯಿ ಪಟೇಲ್, ಡಾ.ಎಪಿಜೆ ಅಬ್ದುಲ್ ಕಲಾಂ, ಸರ್.ಎಂ.ವಿಶ್ವೇಶ್ವರಯ್ಯ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ, ಗುಡ್ಡೆಮನೆ ಅಪ್ಪಯ್ಯಗೌಡ, ನಾಲ್ವಡಿ ಕೃಷ್ಣರಾಜ ಒಡೆಯರ್, ಸುಭಾಷ್‌ಚಂದ್ರ ಬೋಸ್, ಡಾ.ಮನಮೋಹನ್ ಸಿಂಗ್, ಕುವೆಂಪು, ಡಾ.ರಾಜಕುಮಾರ್, ಪುನೀತ್ ರಾಜ್‌ಕುಮಾರ್, ರೋಹನ್ ಬೋಪಣ್ಣ, ಸಚಿನ್ ತಂಡೂಲ್ಕರ್ ಹೀಗೆ ಸುಮಾರು 50 ಕ್ಕೂ ಹೆಚ್ಚು ಮಹನೀಯರ ಕಲಾಕೃತಿಗಳು ಗಮನ ಸೆಳೆಯುತ್ತಿರುವುದು ವಿಶೇಷವಾಗಿದೆ.
ವೈವಿಧ್ಯಮಯ ಪ್ರದರ್ಶನ:ಮಡಿಕೇರಿಯ ಪ್ರಸಿದ್ಧ ಶ್ರೀ ಓಂಕಾರೇಶ್ವರ ದೇವಸ್ಥಾನದ ಹೂವಿನ ಕಲಾಕೃತಿ, ಕರ್ನಾಟಕ ಜೇನಿನ ಹಾಗೂ ಕೊಡಗು ಜೇನಿನ ‘ಕೂರ್ಗ್ ಹನಿ’ ಬ್ರ್ಯಾಂಡ್ ವಿವಿಧ ಕಲಾಕೃತಿಗಳು, ಮಕ್ಕಳು, ಮಹಿಳೆಯರಿಗೆ ಆಕರ್ಷಣೀಯ ಮನೋರಂಜನಾತ್ಮಕ ಹಾಗೂ ಫೋಟೋ ಪಾಯಿಂಟ್‌ಗಳ ಹೂವಿನ ವಿವಿಧ ಕಲಾಕೃತಿಗಳು, ವಿವಿಧ ಕಲಾಕೃತಿಗಳ ತರಕಾರಿ ಕೆತ್ತನೆ, ವಿವಿಧ ಹೂವಿನ ಕುಂಡಗಳ ಪ್ರದರ್ಶನ, ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಖಾಸಗಿ ಕಂಪನಿಗಳ ಮಳಿಗೆಗಳು, ವಿವಿಧ ನರ್ಸರಿಗಳ ಗಿಡಗಳ ಮಾರಾಟ ಮಳಿಗೆಗಳು ಆಕರ್ಷಿಸುತ್ತಿವೆ.
ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹಾಪ್ ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಪಿ.ಪೊನ್ನಪ್ಪ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್.ಆರ್.ಯೋಗೇಶ್, ಹಿರಿಯ ಸಹಾಯಕ ನಿರ್ದೇಶಕ ಪಣೀಂದ್ರ ಎನ್.ಎಸ್., ಸಹಾಯಕ ನಿರ್ದೇಶಕ ಮುತ್ತಪ್ಪ, ನಗರಸಭೆ ಸದಸ್ಯರು, ವಿವಿಧ ಸಂಘಟನೆಗಳ ಪ್ರಮುಖರು ಇದ್ದರು.ಜ.27 ರವರೆಗೆ ಮಡಿಕೇರಿ ನಗರದ ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ.
ಫಲಪುಷ್ಪ ಪ್ರದರ್ಶನದ ಅಂಗವಾಗಿ ಈಗಾಗಲೇ ರಾಜಾಸೀಟು ಉದ್ಯಾನವನದಲ್ಲಿ ಸುಮಾರು 7,000 ಸಾವಿರ ಕುಂಡಗಳಲ್ಲಿ ವಿವಿಧ ಜಾತಿಯ ಹೂವುಗಳು ಹಾಗೂ ಬೆಡ್‌ಗಳಲ್ಲಿ ಸುಮಾರು 20,000 ವಿವಿಧ ಜಾತಿಯ ಹೂವುಗಳಾದ ಸಾಲ್ವಿಯ, ಸೇವಂತಿಗೆ, ಚಂಡು ಹೂ, ಜೀನಿಯಾ, ಡಯಾಂಥಸ್, ಇಂಪೇಷಿಯನ್ಸ್, ವಿಂಕಾ ರೋಸಿಯಾ, ಕಾಕ್ಸ್ ಕೋಂಬ್, ಡೇಲಿಯಾ, ಇತ್ಯಾದಿಗಳನ್ನು ಪಾತಿಯಲ್ಲಿ ಹಾಗೂ ಕುಂಡಗಳಲ್ಲಿ ಬೆಳೆಯಲಾಗಿದೆ.ಕೊಡಗಿನ ಪ್ರಸಿದ್ದ ಶ್ರೀ ಓಂಕಾರೇಶ್ವರ ದೇವಸ್ಥಾನದ ಕಲಾಕೃತಿಯನ್ನು 22 ಅಡಿ ಎತ್ತರದಲ್ಲಿ 30 ಅಡಿ ಉದ್ದ, 38 ಅಡಿ ಅಗಲದಲ್ಲಿ ವಿವಿಧ ಬಣ್ಣಗಳ ಗುಲಾಬಿ, ಸೇವಂತಿಗೆ, ಆಸ್ಟರ್ ಜಾತಿಯ ಸುಮಾರು 5 ಲಕ್ಷ ಹೂವುಗಳಿಂದ ಅಲಂಕರಿಸಿ ನಿರ್ಮಿಸಲಾಗಿದೆ.
ಹೂ ಹಾಗೂ ಜೇನು ಹುಳುವಿನ ಕಲಾಕೃತಿಯನ್ನು ವಿವಿಧ ಬಣ್ಣದ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗಿದೆ. ಗಣರಾಜ್ಯೋತ್ಸವದ ಅಂಗವಾಗಿ ಯೋಧ, ಫಿರಂಗಿ ಹಾಗೂ ರಾಷ್ಟ್ರದ್ವಜದ ಕಲಾಕೃತಿಯನ್ನು ವಿವಿಧ ಬಣ್ಣದ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಿರುವುದು ಗಮನ ಸೆಳೆಯುತ್ತಿವೆ.ವಿವಿಧ ಅಲಂಕಾರಿಕ ಗಿಡಗಳು ಬೋನ್ಸಾಯ್ ಗಿಡಗಳ ಪ್ರದರ್ಶನ, ಇಕೆಬಾನೆ ಹೂವಿನ ಜೋಡನೆಯ ಪ್ರದರ್ಶನಗಳನ್ನು ಏರ್ಪಾಡಿಸಲಾಗಿದೆ. ಈ ರೀತಿಯಾಗಿ 16 ವಿವಿಧ ರೀತಿಯ ಹೂವಿನ ಕಲಾಕೃತಿಗಳನ್ನು ಒಟ್ಟು 8 ರಿಂದ 10 ಲಕ್ಷ ಸಂಖ್ಯೆಯ ಸೇವಂತಿಗೆ, ಆರ್ಕಿಡ್, ಡೆಸ್ಸಿ ಹಾಗೂ ವಿವಿಧ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗಿದೆ.