ಟ್ರಾಫಿಕ್ ಸಮಸ್ಯೆ ಕಾರಣಕ್ಕೆ ನಗರದ ಜಿಲ್ಲಾಸ್ಪತ್ರೆ ಎದುರಿನ ದರ್ಗಾ ಬಳಿಯಿದ್ದ ಹೂವಿನ ಮಾರುಕಟ್ಟೆಯನ್ನು ಎಪಿಎಂಸಿ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸಲಾಗಿದೆ. ಆದರೆ, ಮಾರುಕಟ್ಟೆ ಸ್ಥಳಾಂತರಿಸುವ ಆತುರ ತೋರಿದ ಅಧಿಕಾರಿಗಳು ಅಲ್ಲಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಲ್ಲಿ ಮಾತ್ರ ನಿರ್ಲಕ್ಷ್ಯ ವಹಿಸಿದ್ದಾರೆ. ಪರಿಣಾಮ, ಹೂವು ಮಾರಾಟಕ್ಕೆ ಬರುವ ರೈತರು ಹಾಗೂ ವ್ಯಾಪಾರಿಗಳು ನಿತ್ಯವೂ ಧೂಳು, ಬಿಸಿಲು ಮತ್ತು ಅವ್ಯವಸ್ಥೆಯ ನಡುವೆ ವ್ಯಾಪಾರ ಮಾಡುವಂತಾಗಿದೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ಹಾವೇರಿ

ಟ್ರಾಫಿಕ್ ಸಮಸ್ಯೆ ಕಾರಣಕ್ಕೆ ನಗರದ ಜಿಲ್ಲಾಸ್ಪತ್ರೆ ಎದುರಿನ ದರ್ಗಾ ಬಳಿಯಿದ್ದ ಹೂವಿನ ಮಾರುಕಟ್ಟೆಯನ್ನು ಎಪಿಎಂಸಿ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸಲಾಗಿದೆ. ಆದರೆ, ಮಾರುಕಟ್ಟೆ ಸ್ಥಳಾಂತರಿಸುವ ಆತುರ ತೋರಿದ ಅಧಿಕಾರಿಗಳು ಅಲ್ಲಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಲ್ಲಿ ಮಾತ್ರ ನಿರ್ಲಕ್ಷ್ಯ ವಹಿಸಿದ್ದಾರೆ. ಪರಿಣಾಮ, ಹೂವು ಮಾರಾಟಕ್ಕೆ ಬರುವ ರೈತರು ಹಾಗೂ ವ್ಯಾಪಾರಿಗಳು ನಿತ್ಯವೂ ಧೂಳು, ಬಿಸಿಲು ಮತ್ತು ಅವ್ಯವಸ್ಥೆಯ ನಡುವೆ ವ್ಯಾಪಾರ ಮಾಡುವಂತಾಗಿದೆ.

ಹೂವುಗಳ ಮಾರಾಟಕ್ಕೆ ಸೂಕ್ತವಾದ ಶೆಡ್ ವ್ಯವಸ್ಥೆಯೂ ಇಲ್ಲ. ನೆಲಕ್ಕೆ ಕಾಂಕ್ರೀಟ್ ಹಾಕದ ಕಾರಣ ವಾಹನಗಳು ಸಂಚರಿಸಿದಾಗ ಮತ್ತು ಗಾಳಿ ಬೀಸಿದಾಗ ಇಡೀ ಮಾರುಕಟ್ಟೆ ಆವರಣ ಧೂಳಿನಿಂದ ಆವೃತವಾಗುತ್ತದೆ. ಹೂವುಗಳ ಮೇಲೆ ಧೂಳು ಕುಳಿತುಕೊಳ್ಳುವುದರಿಂದ ಅವುಗಳ ತಾಜಾತನ ಹಾಗೂ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತಿದೆ. ಹೂವುಗಳನ್ನು ಮಾರಾಟಕ್ಕೆ ತರುವ ರೈತರು ಧೂಳಿನ ವಾತಾವರಣದಲ್ಲಿಯೇ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಒಣಗಿದ ಹೂವುಗಳಿಗೆ ಚರಂಡಿಯೇ ಗತಿ: ಹೂವುಗಳು ಬೇಗನೆ ಬಾಡುವ ಕೃಷಿ ಉತ್ಪನ್ನ. ಹೀಗಾಗಿ ಅವುಗಳನ್ನು ಸಂಗ್ರಹಿಸಲು, ಮಾರಾಟ ಮಾಡಲು ಸ್ವಚ್ಛ ಹಾಗೂ ನೆರಳಿನ ವಾತಾವರಣ ಅಗತ್ಯ. ಆದರೆ, ಇಲ್ಲಿ ಅಂತಹ ಯಾವುದೇ ವ್ಯವಸ್ಥೆ ಇಲ್ಲ. ಬಿಸಿಲು ಮತ್ತು ಧೂಳಿನ ಪರಿಣಾಮವಾಗಿ ಮಾರಾಟವಾಗದೆ ಉಳಿದ ಹೂವುಗಳು ಒಣಗುತ್ತಿವೆ. ಬಳಿಕ ಅವುಗಳನ್ನು ವಿಲೇವಾರಿ ಮಾಡಲು ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ರೈತರು ಕಾಂಪೌಂಡ್‌ ಪಕ್ಕದ ಕೆರಿಮತ್ತಿಹಳ್ಳಿ ರಸ್ತೆಯಲ್ಲಿ, ಪಕ್ಕದಲ್ಲಿರುವ ಚರಂಡಿಯಲ್ಲಿಯೇ ಎಸೆಯುತ್ತಿದ್ದಾರೆ.

ಇದರಿಂದ ಮಾರುಕಟ್ಟೆ ಸುತ್ತಮುತ್ತ ಅಸ್ವಚ್ಛತೆ ಹೆಚ್ಚಾಗುವ ಜತೆಗೆ ಚರಂಡಿಯಲ್ಲಿಯೂ ಹೂವಿನ ತ್ಯಾಜ್ಯ ಸಂಗ್ರಹವಾಗುತ್ತಿದೆ. ಹೂವಿನ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕಾದ ಅಗತ್ಯವಿದೆ.

ಸ್ಥಳಾಂತರವಾಯಿತು; ಸೌಲಭ್ಯ ಮಾತ್ರ ಬಂದಿಲ್ಲ.

ಜಿಲ್ಲಾಸ್ಪತ್ರೆ ಎದುರು ದರ್ಗಾ ಕಾಂಪ್ಲೆಕ್ಸ್‌ ಬಳಿ ಹಲವಾರು ವರ್ಷಗಳಿಂದಲೂ ಹೂವಿನ ವ್ಯಾಪಾರ ನಡೆದುಕೊಂಡು ಬರುತ್ತಿತ್ತು. ಹೂವಿನ ಹೋಲ್‌ಸೇಲ್‌ ಮತ್ತು ಚಿಲ್ಲರೆ ವ್ಯಾಪಾರ ಇಲ್ಲಿಯೇ ನಡೆಯುತ್ತಿದ್ದರಿಂದ ಜನದಟ್ಟಣೆ ಹೆಚ್ಚಿತ್ತು. ಅದರಲ್ಲೂ ಹಬ್ಬ ಹರಿದಿನ ಬಂತೆಂದರೆ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿತ್ತು. ಆದ್ದರಿಂದ ಹೂವಿನ ಹೋಲ್‌ಸೇಲ್‌ ವ್ಯಾಪಾರವನ್ನು ಸ್ಥಳಾಂತರಿಸಬೇಕು ಎಂಬ ಒತ್ತಾಯವಿತ್ತು. ತಿಂಗಳ ಹಿಂದೆ ಪೊಲೀಸರು ಈ ಕೆಲಸ ಮಾಡುವಲ್ಲಿ ಯಶಸ್ವಿಯಾದರು. ಅಲ್ಲಿಂದ ಹಾನಗಲ್ಲ ರಸ್ತೆಯ ಎಪಿಎಂಸಿ ಆವರಣಕ್ಕೆ ಹೂ ವ್ಯಾಪಾರ ಸ್ಥಳಾಂತರಗೊಂಡಿತು. ಆದರೆ, ಸ್ಥಳಾಂತರಕ್ಕೂ ಮುನ್ನ ಅಗತ್ಯ ಸಿದ್ಧತೆ ಮಾಡಿಕೊಳ್ಳದಿರುವುದು ಈಗ ರೈತರು ಮತ್ತು ವ್ಯಾಪಾರಿಗಳಿಗೆ ಸಮಸ್ಯೆಯಾಗಿದೆ.

ಹೂವು ಬೆಳೆದು ಮಾರುಕಟ್ಟೆಗೆ ತರುವ ರೈತರು ಈಗಾಗಲೇ ಉತ್ಪಾದನಾ ವೆಚ್ಚ, ಸಾಗಣೆ ವೆಚ್ಚ ಹಾಗೂ ಬೆಲೆ ಏರಿಳಿತದ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿಯೇ ಕನಿಷ್ಠ ಸೌಲಭ್ಯಗಳಿಲ್ಲದಿರುವುದು ಅವರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ದೂರದ ಊರುಗಳಿಂದ ರೈತರು ಹೂವನ್ನು ತಂದರೆ, ವಾಹನ ನಿಲ್ಲಿಸಲೂ ಸ್ಥಳವಿಲ್ಲ. ಆದಷ್ಟು ಬೇಗ ವ್ಯಾಪಾರಸ್ಥರಿಗೆ ಶೆಡ್‌, ಆವರಣ, ರಸ್ತೆಗೆ ಡಾಂಬರು ಸೇರಿದಂತೆ ಕನಿಷ್ಠ ಮೂಲಸೌಕರ್ಯ ಒದಗಿಸಬೇಕಿದೆ.

ಹಾವೇರಿಯಲ್ಲಿ 30ಕ್ಕೂ ಹೆಚ್ಚು ಹೂವಿನ ವ್ಯಾಪಾರಸ್ಥರಿದ್ದಾರೆ. ಹೂ ಮಾರುಕಟ್ಟೆಯನ್ನು ಎಪಿಎಂಸಿಗೆ ಸ್ಥಳಾಂತರ ಮಾಡಿದ್ದರಿಂದ ಸಾರ್ವಜನಿಕರಿಗೆ ಆಗುತ್ತಿದ್ದ ಸಮಸ್ಯೆ ನಿವಾರಣೆಯಾಗಿದೆ. ಆದರೆ, ಇಲ್ಲಿ ತಿಂಗಳೊಳಗಾಗಿ ಚರಂಡಿ, ರಸ್ತೆ, ಶೆಡ್‌ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಸೌಲಭ್ಯ ಮಾಡಿಕೊಟ್ಟರೆ ನಮಗೂ, ರೈತರಿಗೂ ಅನುಕೂಲವಾಗುತ್ತದೆ ಎಂದು ಹೂವು ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಶ್ರಫ್ ಅಲಿ ಹೇಳಿದರು.