ಸಾರಾಂಶ
ಹುಬ್ಬಳ್ಳಿ:ನಗರದ ಹಳೆಕೋರ್ಟ್ ವೃತ್ತದ ಬಳಿಯ ಮೇಲ್ಸೇತುವೆ ಕಾಮಗಾರಿ ವೇಳೆ ಎಎಸ್‌ಐ ಮೇಲೆ ರಾಡ್ ಬಿದ್ದ ಪ್ರಕರಣಕ್ಕೆ ಗುತ್ತಿಗೆ ಪಡೆದ ಕಂಪನಿಯ ಎಂಡಿ ಸೇರಿದಂತೆ 19 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ನಡುವೆ ಕಬ್ಬಿಣದ ರಾಡ್ ತಲೆ ಮೇಲೆ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡಿರುವ ಉಪನಗರ ಠಾಣೆಯ ಎಎಸ್‌ಐ ನಾಬಿರಾಜ ದಯಣ್ಣವರ ಕೆಎಂಸಿಆರ್‌ಐನಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಸಾರ್ವಜನಿಕ ಸಂಘಟನೆಗಳು ಪ್ರತಿಭಟನೆಯನ್ನೂ ನಡೆಸಿವೆ.
ಇಲ್ಲಿನ ಹಳೆ ಕೋರ್ಟ್ ಸರ್ಕಲ್ ಬಳಿ ಮಂಗಳವಾರ ಬೈಕ್ ಮೇಲೆ ತೆರಳುತ್ತಿದ್ದಾಗ ನಾಬಿರಾಜ ದಯಣ್ಣವರ ತಲೆ ಮೇಲೆ ಮೇಲ್ಸೇತುವೆಯಿಂದ ಬೃಹತ್ ಕಬ್ಬಿಣದ ರಾಡ್ ಬಿದ್ದಿತ್ತು. ಇದರಿಂದ ಹೆಲ್ಮೆಟ್ ಒಡೆದು ನಾಬಿರಾಜ ಮೆದುಳಿಗೆ ಹೊಡೆತ ಬಿದ್ದಿದೆ. ಇದರಿಂದ ತೀವ್ರವಾಗಿ ಗಾಯಗೊಂಡಿರುವ ನಾಬಿರಾಜ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.19 ಜನರ ಮೇಲೆ ಎಫ್‌ಐಆರ್:ಮೇಲ್ಸೇತುವೆ ಕಾಮಗಾರಿಯ ಗುತ್ತಿಗೆ ಪಡೆದಿರುವ ಝಂಡು ಕಂಪನಿಯ ಎಂ.ಡಿ. ರಾಮಕುಮಾರ ಝಂಡು, ಮೋಹಿತ ಝಂಡು, ಮನುದೀಪ ಝಂಡು, ಠಾಕೂರ ಪ್ರಾಜೆಕ್ಟ್ ಮ್ಯಾನೇಜರ್ ನಾಗೇಂದ್ರ ಪ್ರತಾಪಸಿಂಗ್, ಪ್ರೊಜೆಕ್ಟ್ ಹೆಡ್ ರಾಜೇಶ ಸರನ್, ಎಂಜಿನಿಯರ್‌ಗಳಾದ ಹರ್ಷಾ ಹೊಸಗಾಣಿಗೇರ, ಜಿತೇಂದ್ರಕುಮಾರ ಕೌಶಿಕ, ಭೂಪೇಂದ್ರ, ಸೇಫ್ಟಿ ಅಧಿಕಾರಿ ಮಹೇಂದ್ರ ಪೇಮಲಾಲ, ಲೇಬರ್ ಗುತ್ತಿಗೆದಾರ ಮಹಮ್ಮದ್ ಯಮದೂರ, ಮೊಹಮದ್ ರಬಿವುಲ್ ಹಕ್, ಕ್ರೇನ್ ಆಪರೇಟರ್ ಅಸ್ಲಂ ಜಲೀಲಮಿಯಾನ್, ಲೇಬರ್‌ಗಳಾದ ಮಹ್ಮದ್ ಮಸೂದ, ಶಬೀಬ ಶೇಖ್, ಸಾಜಿದ್ ಅಲಿ, ರಿಜಾವುಲ್ ಹಕ್, ಮೊಹಮ್ಮದ್ ಸಮೀಮ್ ಶೇಖ್, ಮೊಹ್ಮದ್ ಆರೀಫ್ ಸೇರಿ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ತನ್ನ ತಂದೆ ನಾಬಿರಾಜ ದಯಣ್ಣವರ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ. ಪರಿಸ್ಥಿತಿ ಗಂಭೀರವಾಗಿದೆ. ಈ ಘಟನೆಗೆ ಗುತ್ತಿಗೆದಾರ ಕಂಪನಿಯ ನಿರ್ಲಕ್ಷ್ಯವೇ ಕಾರಣ ಎಂದು ಗಾಯಾಳು ನಾಬಿರಾಜ ಪುತ್ರ ವೃಷಭ ದೂರಿನಲ್ಲಿ ವಿವರಿಸಿದ್ದಾರೆ.ಅವಘಡಕ್ಕೆ ಖಂಡನೆ:
ಮೇಲ್ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಅವಘಡ ಖಂಡಿಸಿ, ಗಾಯಗೊಂಡಿರುವ ಎಎಸ್‌ಐ ಅವರಿಗೆ ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಬುಧವಾರ ಇಲ್ಲಿನ ಹಳೇ ಕೋರ್ಟ್ ಬಳಿಯ ಮೇಲ್ಸೇತುವೆ ಕೆಳಗೆ ಸಮತಾ ಸೇನಾ ಕರ್ನಾಟಕ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ಹಳೇ ಕೋರ್ಟ್ ವೃತ್ತಕ್ಕೆ ಹೊಂದಿಕೊಂಡು ಕೈಗೊಳ್ಳಲಾಗುತ್ತಿರುವ ಮೇಲ್ಸೇತುವೆ ಕಾಮಗಾರಿಯ ವೇಳೆ ಯಾವುದೇ ರೀತಿಯ ಸುರಕ್ಷತಾ ಕ್ರಮ ಅನುಸರಿಸಿಲ್ಲ. ಹೀಗಾಗಿ ಮಂಗಳವಾರ ಈ ಮಾರ್ಗದ ಮೂಲಕ ಹಾದು ಹೋಗುತ್ತಿದ್ದ ಎಎಸ್‌ಐ ಮೇಲೆ ಕಬ್ಬಿಣದ ರಾಡ್ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯ ಹೋರಾಡುತ್ತಿದ್ದಾರೆ. ಸಾರ್ವಜನಿಕರ ಪ್ರಾಣದೊಂದಿಗೆ ಆಟವಾಡುತ್ತಿರುವ ಗುತ್ತಿಗೆದಾರರ, ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಘಟನೆ ನಡೆದು ಒಂದು ದಿನ ಕಳೆದರೂ ಸಹ ಯಾವೊಬ್ಬ ರಾಜಕಾರಣಿಯೂ ಚಕಾರ ಎತ್ತದೇ ಇರುವುದು ನೋವಿನ ಸಂಗತಿ. ಇನ್ನಾದರೂ ಇಂತಹ ಅವಘಡಗಳು ನಡೆದ ವೇಳೆ ರಾಜಕಾರಣಿಗಳು ಅನ್ಯಾಯಕ್ಕೊಳಗಾದವರ, ನೊಂದವರ ಪರ ನಿಲ್ಲುವ ಮೂಲಕ ಅವರಿಗೆ ನ್ಯಾಯಕೊಡಿಸಬೇಕು ಎಂದರು.ಈ ವೇಳೆ ಸಮತಾ ಸೇನಾದ ಗುರುನಾಥ ಉಳ್ಳಿಕಾಶಿ, ರೇವಣ್ಣ ಹೊಸಮನಿ, ಬಾಬರ ಖೋಜೆ, ಮಂಜಣ್ಣ, ಸಂತೋಷ ಪಾವಸ್ಕರ, ಬಾಷಾ ಮಾಸನೂರ, ರಘು ಬಸವಂತಕರ, ಫಕ್ಕಣ್ಣ ದೊಡ್ಡಮನಿ, ಇಝಾಝ ಉಪ್ಪಿನ, ರಾಜು ಮರಿಗುದ್ದಿ, ಇಮ್ತಿಯಾಜ್ ಬಿಜಾಪುರ, ಭೀಮಾ ಹಲಗಿ, ಕರೀಮ್ ಲಕ್ಕುಂಡಿ, ಲೋಹಿತ ಗಾಮನಗಟ್ಟಿ, ಫಾರೂಖ ಶೇಖ, ದೇವಣ್ಣ ಇಟಗಿ ಸೇರಿದಂತೆ ಹಲವರಿದ್ದರು.