ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ಫ್ಲೈಒವರ್ ಕಾಮಗಾರಿ ಗಣೇಶೋತ್ಸವ ಮಂಡಳಿಗಳು, ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ: ಹುಬ್ಬಳ್ಳಿಯ ಗಣೇಶೋತ್ಸವ ರಾಜ್ಯದಲ್ಲೇ ಮನೆಮಾತಾಗಿದೆ. ಭವ್ಯ ಮಂಟಪಗಳು, ಬೃಹತ್ ಗಣೇಶ ಮೂರ್ತಿಗಳು, ಭಕ್ತಿಯ ಘೋಷ ಹಾಗೂ ಅದ್ಧೂರಿ ವಿಸರ್ಜನಾ ಮೆರವಣಿಗೆ ನೋಡಲು ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಆದರೆ, ಈ ಬಾರಿ ‘ಸರ್ವವಿಘ್ನ ನಿವಾರಕ’ ಗಣಪತಿಯ ವಿಸರ್ಜನಾ ಮೆರವಣಿಗೆಗೇ ವಿಘ್ನ ಎದುರಾಗಿದೆ!ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ಫ್ಲೈಒವರ್ ಕಾಮಗಾರಿ ಗಣೇಶೋತ್ಸವ ಮಂಡಳಿಗಳು, ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸುಮಾರು 800ಕ್ಕೂ ಅಧಿಕ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳು ಮೂರ್ತಿ ಪ್ರತಿಷ್ಠಾಪಿಸುವ ನಗರದಲ್ಲಿ, ಬೃಹತ್ ಮೂರ್ತಿಗಳನ್ನು ಸುರಕ್ಷಿತವಾಗಿ ವಿಸರ್ಜನಾ ಕೇಂದ್ರಗಳಿಗೆ ಕೊಂಡೊಯ್ಯಲು ಯಾವ ಮಾರ್ಗ ಬಳಸಬೇಕು ಎಂಬ ಗೊಂದಲ ಎದುರಾಗಿದೆ.
ಸಾಂಪ್ರದಾಯಿಕ ಮಾರ್ಗಕ್ಕೆ ಬ್ರೇಕ್: ಕೇಶ್ವಾಪುರ, ಗದಗ ರಸ್ತೆ, ಹಳೇಹುಬ್ಬಳ್ಳಿ ಸೇರಿದಂತೆ ವಿವಿಧ ಭಾಗಗಳಿಂದ ಹೊರಡುವ ಮೆರವಣಿಗೆ ಸಂಗೊಳ್ಳಿ ರಾಯಣ್ಣ ವೃತ್ತ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಬಸವ ವನದ ಮೂಲಕ ಇಂದಿರಾ ಗಾಜಿನಮನೆ ಬಾವಿ ಹಾಗೂ ಹೊಸೂರು ಬಾವಿ ತಲುಪುತ್ತಿತ್ತು. 7ನೇ, 9ನೇ ಹಾಗೂ 11ನೇ ದಿನ ನಡೆಯುವ ಮೆರವಣಿಗೆ ಮಧ್ಯಾಹ್ನ ಆರಂಭವಾಗಿ ಮರುದಿನ ಬೆಳಗಿನ ಜಾವದ ವರೆಗೂ ಸಾಗುವುದು ವಾಡಿಕೆ.ಕಳೆದ ವರ್ಷ ಬಸವ ವನದ ಕಾಮಗಾರಿಯಿಂದ ಕಾರವಾರ ರಸ್ತೆ ಮೂಲಕ ಮೆರವಣಿಗೆ ನಡೆಸಲಾಗಿತ್ತು. ಆದರೆ, ಈ ಬಾರಿ ಚೆನ್ನಮ್ಮ ವೃತ್ತದ ಫ್ಲೈಒವರ್ ಕಾಮಗಾರಿ ಮತ್ತಷ್ಟು ಸಂಕಷ್ಟ ತಂದಿದೆ. ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕಾರವಾರ ರಸ್ತೆಗೆ ತೆರಳುವ ಮಾರ್ಗವೂ ಬಂದ್ ಆಗಿದ್ದು, ದಾಜಿಬಾನಾಪೇಟೆ ಮಾರ್ಗದಲ್ಲಿಯೂ "ಹುಬ್ಬಳ್ಳಿ ಕಾ ರಾಜಾ " ಮಂಟಪ ಅಡ್ಡಿಯಾಗಿದೆ.
25 ಅಡಿ ಗಣಪತಿಗೆ ಎಲ್ಲಿದೆ ದಾರಿ?: ಹುಬ್ಬಳ್ಳಿ ಕಾ ರಾಜಾ, ಹುಬ್ಬಳ್ಳಿ ಕಾ ಮಹಾರಾಜ, ಮೇದಾರ ಓಣಿ, ದುರ್ಗದಬೈಲ್, ಗೂಡ್‌ಶೆಡ್ ರೋಡ್ ಸೇರಿದಂತೆ ಹಲವೆಡೆ ಗಜಾನನ ಮಂಡಳಿಗಳು 20ರಿಂದ 25 ಅಡಿಗೂ ಹೆಚ್ಚು ಎತ್ತರದ ಮೂರ್ತಿ ಪ್ರತಿಷ್ಠಾಪಿಸುತ್ತವೆ. ಕಾಮಗಾರಿ ಪ್ರದೇಶದ ಮೂಲಕ ಇಂತಹ ಬೃಹತ್ ಮೂರ್ತಿಗಳನ್ನು ಸಾಗಿಸುವುದು ಅಪಾಯಕಾರಿ. ಕಿರಿದಾದ ರಸ್ತೆ, ಬ್ಯಾರಿಕೇಡ್, ನಿರ್ಮಾಣ ಸಾಮಗ್ರಿ, ತಗ್ಗು-ಗುಂಡಿ ಹಾಗೂ ಸಂಚಾರದ ಒತ್ತಡದಿಂದ ಮೆರವಣಿಗೆಗೆ ತೊಂದರೆಯಾಗುವ ಆತಂಕವಿದೆ.----
ಮೊದಲೇ ಚರ್ಚಿಸಬೇಕಿತ್ತು: ಚೆನ್ನಮ್ಮ ವೃತ್ತದಲ್ಲಿ ನಿರ್ಮಾಣವಾಗಿರುವ ಫ್ಲೈಒವರ್‌ನಿಂದ ಈ ಬಾರಿ ಗಣೇಶ ವಿಸರ್ಜನಾ ಮೆರವಣಿಗೆಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಸುಮಾರು 20-25 ಅಡಿ ಎತ್ತರದ ಗಣೇಶ ಮೂರ್ತಿಗಳು ಹಾಗೂ ಪ್ರಭಾವಳಿ ಹೊಂದಿರುವ ಮೂರ್ತಿಗಳನ್ನು ಫ್ಲೈಒವರ್ ಕೆಳಗಿನಿಂದ ಸಾಗಿಸುವುದು ಕಷ್ಟವಾಗಲಿದೆ. ಮೂರ್ತಿಗಳನ್ನು 3-4 ತಿಂಗಳ ಮುಂಚೆಯೇ ತಯಾರಿಸಲಾಗುತ್ತದೆ. ಹೀಗಾಗಿ ಫ್ಲೈಒವರ್ ಕಾಮಗಾರಿ ಹಾಗೂ ಮೂರ್ತಿಗಳ ಎತ್ತರದ ವಿಚಾರವನ್ನು ಮೊದಲೇ ಗಮನಕ್ಕೆ ತೆಗೆದುಕೊಂಡು ಸಾಧಕ- ಬಾಧಕಗಳ ಕುರಿತು ಚರ್ಚೆ ನಡೆಸಬೇಕಾಗಿತ್ತು. ಆದರೆ, ಇದೀಗ ಉತ್ಸವ ಸಮೀಪಿಸುತ್ತಿರುವ ಸಂದರ್ಭದಲ್ಲಿ ಪರ‍್ಯಾಯ ಮಾರ್ಗದ ಕುರಿತು ಚಿಂತನೆ ನಡೆಸುತ್ತಿರುವುದು ವಿಳಂಬವಾಗಿದೆ. ಈ ಕುರಿತು ಇನ್ನೆರಡು ದಿನಗಳಲ್ಲಿ ಸಂಬಂಧಪಟ್ಟ ಸಮಿತಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಪಾಲಿಕೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು. ಸಂಚಾರಕ್ಕೆ ತೊಂದರೆಯಾಗದಂತೆ ಹಾಗೂ ಗಣೇಶ ಮೆರವಣಿಗೆ ಸುಗಮವಾಗಿ ಸಾಗುವಂತೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಗಣೇಶೋತ್ಸವ ಮಂಡಳಿ ಅಧ್ಯಕ್ಷ ಮೋಹನ ಲಿಂಬಿಕಾಯಿ "ಕನ್ನಡಪ್ರಭ "ಕ್ಕೆ ತಿಳಿಸಿದರು.ಸಭೆ ನಡೆಸಿ ನಿರ್ಧಾರ: 20 ಅಡಿಗೂ ಎತ್ತರದ ಮೂರ್ತಿಗಳನ್ನು ಚೆನ್ನಮ್ಮ ವೃತ್ತದ ಮೂಲಕ ವಿಸರ್ಜನಾ ಮೆರವಣಿಗೆ ನಡೆಸಲು ಸಾಧ್ಯವಾಗುವುದಿಲ್ಲ. ಈ ಕುರಿತು ಎರಡು ದಿನಗಳಲ್ಲಿ ಗಣೇಶೋತ್ಸವ ಮಂಡಳಿಗಳೊಂದಿಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಗಣೇಶೋತ್ಸವ ಮಂಡಳಿ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ತಿಳಿಸಿದರು.