ಕೊಳತೂರಲ್ಲಿ ಬೆಂ-ಚೆನ್ನೈ ಹೆದ್ದಾರಿಗೆ ಫ್ಲೈಓವರ್‌: ನೋಟಿಸ್‌

| Published : Feb 10 2024, 01:46 AM IST

ಸಾರಾಂಶ

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಹಾದು ಹೋಗುವ ಹೊಸಕೋಟೆಯ ಕೊಳತ್ತೂರು ಜಂಕ್ಷನ್‌ನಲ್ಲಿ ಫ್ಲೈಓವರ್‌ ನಿರ್ಮಿಸಲು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೊಸಕೋಟೆ ತಾಲೂಕಿನ ಕೊಳತೂರು ಗ್ರಾಮದ ಬಳಿ ಬೆಂಗಳೂರು-ಕೋಲಾರ ರಾಷ್ಟ್ರೀಯ ಹೆದ್ದಾರಿ ಹಾಗೂ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ವೇ ಸಂದಿಸುವ ಜಂಕ್ಷನ್‌ನಲ್ಲಿ ಮೇಲ್ಸೇತುವೆ ನಿರ್ಮಿಸಲು ನಿರ್ದೇಶಿಸುವಂತೆ ಕೋರಿರುವ ಅರ್ಜಿ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

ಈ ಸಂಬಂಧ ಹೊಸಕೋಟೆ ತಾಲೂಕಿನ ಕೊಳತ್ತೂರು ಗ್ರಾಮದ ಕೃಷಿಕ ಕೆ.ವಿ.ರವಿಕುಮಾರ್ ಸೇರಿದಂತೆ ಸತ್ತಮುತ್ತಲಿನ ಗ್ರಾಮಗಳ 13 ಮಂದಿ ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಬೆಂಗಳೂರು-ಕೋಲಾರ ರಾಷ್ಟ್ರೀಯ ಹೆದ್ದಾರಿಯ ಅಕ್ಕ ಪಕ್ಕದ ಕನಿಷ್ಠ 20 ಗ್ರಾಮಗಳನ್ನು ಕೊಳತೂರಿನಲ್ಲಿ ಜಿಲ್ಲೆಯ ಮುಖ್ಯ ರಸ್ತೆಯು ಸಂಪರ್ಕಿಸುತ್ತದೆ. ಈ ರಸ್ತೆಗೆ ಬೆಂಗಳೂರು-ಕೋಲಾರ ರಾಷ್ಟ್ರೀಯ ಹೆದ್ದಾರಿ-75 ಮತ್ತು ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ವೇ ಲಿಂಕ್‌ ಮಾಡಲಾಗಿದೆ. ಇದರಿಂದ ನೇರವಾಗಿ ಆಸ್ಪತ್ರೆಗೆ ತೆರಳುವ ರಸ್ತೆ ಕಡಿತಗೊಂಡಿದೆ. ಪರಿಣಾಮ ಸರ್ವೀಸ್‌ ರಸ್ತೆಯಲ್ಲಿ 1.7 ಕಿ.ಮೀ ದೂರ ಸುತ್ತಿಕೊಂಡು ಹೋಗಿ ಆಸ್ಪತ್ರೆಗೆ ತಲುಪಬೇಕಿದೆ. ಹಾಗಾಗಿ, ಕೊಳತೂರು ಗ್ರಾಮದ ಜಂಕ್ಷನ್‌ ಬಳಿ ರಾಷ್ಟ್ರೀಯ ಹೆದ್ದಾರಿ ಹಾಗೂ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ ವೇ ಸಂದಿಸುವ ಸ್ಥಳದಲ್ಲಿ ಮೇಲ್ಸೇತುವೆ ನಿರ್ಮಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.