ಕನ್ನಡಪ್ರಭ ವಾರ್ತೆ ಮಂಡ್ಯ
ಬ್ಯಾಂಕ್ ನೀಡುವ ಹಣವನ್ನು ಕೇವಲ ಸಾಲ ಎಂದು ಪರಿಗಣಿಸಬಾರದು, ಬದಲಾಗಿ ಅದೊಂದು ‘ಬಂಡವಾಳ’ ಎಂದು ಭಾವಿಸಬೇಕು. ಸೆಂಟ್ರಲ್ ಬ್ಯಾಂಕ್ ಒದಗಿಸಿರುವ ಈ ಬಂಡವಾಳವನ್ನು ಸದುಪಯೋಗಪಡಿಸಿಕೊಂಡು ಲಾಭ ಗಳಿಸುವತ್ತ ಗಮನಹರಿಸಬೇಕು ಎಂದು ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಸಿ.ನಾರಾಯಣಸ್ವಾಮಿ ಹೇಳಿದರು.ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (ಮಂಡ್ಯ ಶಾಖೆ) ವತಿಯಿಂದ ನಗರದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸಭಾಂಗಣದಲ್ಲಿ ಕೃಷಿ ಸಾಲ ಸಂಪರ್ಕ ಕಾರ್ಯಕ್ರಮ ಹಾಗೂ ಕೃಷಿ ಸಾಲ ಫಲಾನುಭವಿಗಳು ಮತ್ತು ಸ್ವಸಹಾಯ ಸಂಘದ ಸದಸ್ಯರಿಗೆ ಪೂರ್ವ-ಮಂಜೂರಾತಿ ಪತ್ರಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಅಭಿವೃದ್ಧಿಯಿಂದ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ. ಇದರಲ್ಲಿ ಹೆಣ್ಣುಮಕ್ಕಳ ಸಬಲೀಕರಣ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂಬುದು ಪ್ರಧಾನಮಂತ್ರಿಯವರ ಆಶಯವಾಗಿದೆ. ಮಹಿಳೆಯರು ಸಾಲದ ನೆರವಿನಿಂದ ಮನೆಯಲ್ಲೇ ಉಪ್ಪಿನಕಾಯಿ, ಟೊಮೆಟೋ ಕೆಚಪ್ ಮುಂತಾದ ಸಣ್ಣ ಕೈಗಾರಿಕೆಗಳನ್ನು ಪ್ರಾರಂಭಿಸಿ ಆರ್ಥಿಕವಾಗಿ ಬೆಳೆಯಬೇಕು. ತಾವು ಗಳಿಸಿದ ಆದಾಯದಲ್ಲಿ ಶೇ.೨೦ರಿಂದ ೩೦ರಷ್ಟನ್ನು ಭವಿಷ್ಯಕ್ಕಾಗಿ ಉಳಿತಾಯ ಮಾಡಬೇಕು ಎಂದರು.ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರು ವಲಯದ ಪ್ರಾದೇಶಿಕ ಮುಖ್ಯಸ್ಥ ಸತೀಶ್ ಬಾಬು ಮಾತನಾಡಿ, ಸೆಂಟ್ರಲ್ ಬ್ಯಾಂಕ್ ೧೯೧೧ ರಲ್ಲಿ ಭಾರತೀಯರಿಗಾಗಿ ಭಾರತೀಯರೇ ಪ್ರಾರಂಭಿಸಿದ ಮೊದಲ ಸ್ವದೇಶಿ ಬ್ಯಾಂಕ್ ಆಗಿದೆ. ಪ್ರಸ್ತುತ ದೇಶಾದ್ಯಂತ ೪೫೦೦ ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಗ್ರಾಮೀಣ ಹಾಗೂ ಕೃಷಿ ವಲಯದ ಅಭಿವೃದ್ಧಿಗೆ ಬ್ಯಾಂಕ್ ಸದಾ ಬದ್ಧವಾಗಿದೆ. ರೈತರು, ಮಹಿಳಾ ಸ್ವಸಹಾಯ ಸಂಘಗಳು ಹಾಗೂ ಸಣ್ಣ ಉದ್ಯಮಿಗಳಿಗೆ ಆರ್ಥಿಕ ನೆರವು ನೀಡುವುದು ಮತ್ತು ಅವರ ಆರ್ಥಿಕ ಮಟ್ಟವನ್ನು ಸುಧಾರಿಸುವುದು ಈ ಸಾಲ ಸಂಪರ್ಕ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಕೃಷಿ ವಿವಿ ಮಾಜಿ ವಿಶೇಷಾಧಿಕಾರಿ ಡಾ.ಹರಿಣಿಕುಮಾರ್ ಮಾತನಾಡಿ, ಬ್ಯಾಂಕಿನ ಸಾಲವನ್ನು ಯಾವ ಉದ್ದೇಶಕ್ಕಾಗಿ ಪಡೆಯಲಾಗುತ್ತದೆಯೋ ಅದೇ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಬೇಕು. ಖಾಸಗಿಯವರ ಬಳಿ ಶೇ.೭ರಿಂದ ೧೦ರಷ್ಟು ದುಬಾರಿ ಬಡ್ಡಿ ಕೊಡುವ ಬದಲು ಬ್ಯಾಂಕ್‌ಗಳಲ್ಲಿ ಸಿಗುವ ಕಡಿಮೆ ಬಡ್ಡಿಯ (ಶೇ.೧ರಿಂದ ೨) ಸಾಲ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ. ಸಾಲ ಪಡೆದು ಚಿನ್ನಾಭರಣ, ಬಟ್ಟೆ ಅಥವಾ ಅನಗತ್ಯ ಖರ್ಚುಗಳನ್ನು ಮಾಡುವ ಬದಲು, ಆದಾಯ ತರುವಂತಹ ಮೂಲಗಳಿಗೆ ಬಂಡವಾಳವಾಗಿ ಹೂಡಿಕೆ ಮಾಡಿ. ಬ್ಯಾಂಕಿನ ಹಣ ಸಾರ್ವಜನಿಕರ ಹಣವಾಗಿದ್ದು, ಅದನ್ನು ಮರುಪಾವತಿ ಮಾಡಿದರೆ ಮಾತ್ರ ಬ್ಯಾಂಕುಗಳು ಮತ್ತು ನೀವು ಒಟ್ಟಾಗಿ ಬೆಳೆಯಲು ಸಾಧ್ಯ ಎಂದು ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯರಾದ ಡಾ.ಎಸ್.ಸಿ.ಅಶ್ವತ್ಥನಾರಾಯಣ, ಕಾನೂನು ಸಲಹೆಗಾರ ಎಂ. ಗುರುಪ್ರಸಾದ್, ನಿವೃತ್ತ ಬ್ಯಾಂಕ್ ಅಧಿಕಾರಿ ಜಯರಾಮಯ್ಯ, ಬ್ಯಾಂಕ್ ಸಿಬ್ಬಂದಿ ಮಂಡ್ಯ ಶಾಖೆಯ ಮುಖ್ಯಸ್ಥ ಪ್ರಜ್ವಲ್ ಹಾಗೂ ತಂಡದ ಸದಸ್ಯರಾದ ನಾಗೇಶ್, ಕಾರ್ತಿಕ್, ಭೂಮಿಕಾ, ಲಾವಣ್ಯ, ಸುನೀಲ್‌ಕುಮಾರ್ ಇತರರಿದ್ದರು.