ಸಾರಾಂಶ
-10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಜಿಲ್ಲಾಮಟ್ಟದ ಕಾರ್ಯಗಾರ
----ಕನ್ನಡಪ್ರಭ ವಾರ್ತೆ ಶಹಾಪುರ
ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ವಿಷಯಗಳನ್ನು ಅಧ್ಯಯನ ನಡೆಸಬೇಕು. ಶೈಕ್ಷಣಿಕ ಪ್ರಗತಿ ಉತ್ತಮ ಪಡಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವತ್ತಾ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಖ್ಯಾತ ಮಕ್ಕಳ ವೈದ್ಯ ಡಾ. ಸುದತ್ತ ದರ್ಶನಾಪುರ ತಿಳಿಸಿದರು.ಭೀಮರಾಯನಗುಡಿ ಆಡಿಟೋರಿಯಂನಲ್ಲಿ ನಡೆದ 2024-25ನೇ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಗಣಿತ ವಿಷಯದಲ್ಲಿ ಜಿಲ್ಲಾಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದರು.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದ ಅತ್ಯಂತ ಪ್ರಮುಖ ಘಟ್ಟವಾಗಿದ್ದು, ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಫಲಿತಾಂಶ ಸುಧಾರಣೆಗೆ ಹೆಚ್ಚಿನ ಪ್ರಮಾಣದಲ್ಲಿ ಗಮನಹರಿಸಿ ಕಾರ್ಯನಿರ್ವಹಿಸಬೇಕು ಎಂದರು.ಉಪನಿರ್ದೇಶಕ ಸಿ.ಎಸ್. ಮುಧೋಳ ಮಾತನಾಡಿ, ಸಂಪನ್ಮೂಲ ವ್ಯಕ್ತಿಗಳು ಎಲ್ಲಾ ಶಿಕ್ಷಕರಿಗೆ ಮಾರ್ಗದರ್ಶನ ಮಾಡುವುದರಿಂದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಗಣನೀಯ ಏರಿಕೆ ಆಗಬಹುದೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಕಲಿಕಾ ಆಸರೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿ ಮತ್ತು ವೈಯಕ್ತಿಕ ಮಾರ್ಗದರ್ಶನ, ಪೋಷಕರ ಸಭೆಗಳು, ವಿಷಯ ಶಿಕ್ಷಕರಿಗೆ ವಿಶೇಷ ತರಬೇತಿ ಹೀಗೆ ಸಾಕಷ್ಟು ಹೊಸ ಯೋಜನೆಗಳ ಮೂಲಕ ಸಾಕಷ್ಟು ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಜಹೀದಾ ಬೇಗಂ, ಕ್ಷೇತ್ರ ಸಮನ್ವಯಾಧಿಕಾರಿ ರೇಣುಕಾ ಪಾಟೀಲ್, ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಪ್ರಕಾಶ ಕುಚುನೂರ, ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಯಪ್ಪಗೌಡ ಹುಡೇದ, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಭೀಮನಗೌಡ ತಳೆವಾಡ, ತಾಲೂಕು ಅಕ್ಷರ ದಾಸೋಹದ ಅಧಿಕಾರಿ ಮಲ್ಲನಗೌಡ ಬಿರಾದಾರ್, ಡಯಟ್ ಹಿರಿಯ ಉಪನ್ಯಾಸಕ ಲಿಂಗಣ್ಣ ಸಿಂಪಿ, ಶಾಂತಪ್ಪ ಪೂಜಾರಿ, ಸಂಪನ್ಮೂಲ ವ್ಯಕ್ತಿಗಳಾದ ಪ್ರಶಾಂತ ಕೆ., ಶಿವಲಿಂಗಪ್ಪ ಕೋಡ್ಲಾ, ಚಂದ್ರಶೇಖರ ಪವಾರ, ಗುರುಕುಲ ಶಿಕ್ಷಣ ಸಂಸ್ಥೆಯ ಅಮೃತ ವಾದಿರಾಜ್ ಇದ್ದರು. ವಾಮನ್ ರಾವ್ ಪಟವಾರೆ ನಿರೂಪಿಸಿದರು. ಮಲ್ಲಿಕಾರ್ಜುನ ಸೂಡಿ ವಂದಿಸಿದರು.---
17ವೈಡಿಆರ್2ಶಹಾಪುರದ ಭೀಮರಾಯನಗುಡಿ ಆಡಿಟೋರಿಯಂನಲ್ಲಿ 2024-25ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ಗಣಿತ ವಿಷಯದಲ್ಲಿ ಜಿಲ್ಲಾಮಟ್ಟದ ಕಾರ್ಯಗಾರ ನಡೆಯಿತು.