ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಗಮನ ಹರಿಸಿ

| Published : Jan 10 2025, 12:49 AM IST

ಸಾರಾಂಶ

ತಾಲೂಕಿನ ಎಲ್ಲ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಗಣಿತ,ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.

ಶಿರಹಟ್ಟಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದ ಅತ್ಯಂತ ಪ್ರಮುಖ ಘಟ್ಟವಾಗಿದ್ದು, ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಫಲಿತಾಂಶ ಸುಧಾರಣೆಗೆ ಹೆಚ್ಚಿನ ಪ್ರಮಾಣದಲ್ಲಿ ಗಮನಹರಿಸಿ ಕಾರ್ಯ ನಿರ್ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್.ನಾಯಕ ಕರೆ ನೀಡಿದರು.

ಗುರುವಾರ ಪಟ್ಟಣದ ದೇವರಾಜ ಅರಸು ಸಭಾಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾಯಾಲಯ ಶಿರಹಟ್ಟಿ,ಯುನಿವರ್ಸಲ್ ನಾಲೇಡ್ಜ್ ಟ್ರಸ್ಟ್ ಮತ್ತು ಗ್ರಾಮ ವಿಕಾಸ ಸೊಸೈಟಿ ಮಂಗಳೂರ ಸಹಯೋಗದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಫಲಿತಾಂಶ ಸುಧಾರಣೆಗಾಗಿ ಸಾಮರ್ಥ್ಯಾಧಾರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ತಾಲೂಕಿನ ಎಲ್ಲ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಗಣಿತ,ವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮುಖ್ಯ ಶಿಕ್ಷಕರು ಶಾಲೆಯ ಕನ್ನಡಿಯಾಗಿದ್ದಾರೆ.ಶೈಕ್ಷಣಿಕ ಪ್ರಗತಿ ಉತ್ತಮಪಡಿಸುವುದರ ಜತೆಗೆ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವತ್ತ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.

ಶಾಲೆಯ ಮುಖ್ಯ ಶಿಕ್ಷಕರು ಮನಸ್ಸು ಮಾಡಿದರೆ ತಮ್ಮ ಶಾಲೆಯ ಫಲಿತಾಂಶ ಪ್ರತಿಶತ ತರುವಲ್ಲಿ ಯಾವುದೇ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಎಲ್ಲ ಮುಖ್ಯ ಶಿಕ್ಷಕರು ಕಾರ್ಯಪ್ರವೃತ್ತರಾಗಬೇಕು. ಈಗಾಗಲೇ ಶಾಲೆಯಲ್ಲಿ ಪೂರ್ವ ಸಿದ್ಧತಾ ಪರೀಕ್ಷೆ ನಡೆದಿರುತ್ತವೆ.ಪೂರ್ವಸಿದ್ಧತಾ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಪಡೆದ ಮಗುವಿನ ಕಡೆ ಹೆಚ್ಚಿನ ಗಮನಹರಿಸಿ ಮುಖ್ಯ ಪರೀಕ್ಷೆಯಲ್ಲಿ ಎಲ್ಲರೂ ಉತ್ತೀರ್ಣರಾಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇನ್ನೂ ಬಹಳ ಸಮಯವಿದೆ.ಶಿಕ್ಷಕರು ಕೂಡ ಹೆಚ್ಚಿನ ಮುತುವರ್ಜಿ ವಹಿಸಿ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಮಾಡುವುದರೊಂದಿಗೆ ಉತ್ತಮ ಫಲಿತಾಂಶ ತರುವಲ್ಲಿ ಶ್ರಮಿಸಬೇಕು. ಪ್ರಸಕ್ತ ಸನ್ನಿವೇಶದಲ್ಲಿ ಉತ್ತಮ ಫಲಿತಾಂಶ ಬರಬೇಕಾದರೆ ಶಿಕ್ಷಕರು ವಿದ್ಯಾರ್ಥಿಗಳ ಬುದ್ದಿಮಟ್ಟ ಅರಿತು ಅವರ ಶೈಲಿಯಲ್ಲಿಯೇ ವಿದ್ಯಾಭ್ಯಾಸ ಮಾಡಿದಾಗ ಮಾತ್ರ ಗುರಿ ಮುಟ್ಟಲು ಸಾಧ್ಯ.

ವಿದ್ಯಾರ್ಥಿಗಳ ಬುದ್ಧಿಮಟ್ಟ ಅರಿತು ಶಿಕ್ಷಕರು ಶಿಕ್ಷಣ ಬೋಧಿಸಿದಾಗ ಮಾತ್ರ ಉತ್ತಮ ಫಲಿತಾಂಶ ಬರಲು ಸಾಧ್ಯ.ಇಲ್ಲವಾದರೆ ಇಡೀ ಶಿಕ್ಷಣ ವ್ಯವಸ್ಥೆ ಬುಡಮೇಲಾಗಲಿದೆ ಎಂದು ಅಭಿಪ್ರಾಯ ಪಟ್ಟ ಅವರು, ಶೈಕ್ಷಣಿಕವಾಗಿ ಮಕ್ಕಳ ಸಾಧನೆಗೆ ಶಾಲೆಗಳು ವೇದಿಕೆಯಾಗಬೇಕು. ಇದಕ್ಕೆ ಶಿಕ್ಷಕರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಸ್ವತ ಶಿಕ್ಷಕರು ಸದಾ ಅಧ್ಯಯನಶೀಲರಾಗಬೇಕು. ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ಮಕ್ಕಳಿಗೆ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದರು.

ಶಿಕ್ಷಕರು ಜವಾಬ್ದಾರಿ ವಹಿಸಿ ಶಿಕ್ಷಣದಲ್ಲಿ ಹಿಂದುಳಿದಿರುವ ಮಕ್ಕಳನ್ನು ಗುರುತಿಸಿ ಶಾಲಾ ಹಂತದಲ್ಲಿ ಕಠಿಣ ವಿಷಯಗಳ ಬಗ್ಗೆ ಪರೀಕ್ಷೆ ಬರೆಸಿ ಮೌಲ್ಯಮಾಪನ ಮಾಡಿ ಮಕ್ಕಳು ಪಡೆದ ಅಂಕಗಳ ಬಗ್ಗೆ ಅರಿತು ಮಾರ್ಗದರ್ಶನ ನೀಡಿ ಇದರೊಂದಿಗೆ ಪೋಷಕರ ಸಭೆ ಕರೆದು ಚರ್ಚೆ ನಡೆಸಿ ಉತ್ತಮ ಫಲಿತಾಂಶಕ್ಕೆ ಕಠಿಣ ವಿಷಯಗಳ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಿ ತಾಲೂಕಿನಲ್ಲಿ ಈ ಬಾರಿ ಉತ್ತಮ ಫಲಿತಾಂಶ ಬರುವಂತೆ ಶ್ರಮಿಸಬೇಕು ಎಂದು ತಿಳಿಸಿದರು.

ಉಪನ್ಯಾಸಕ ಶಮಿ ಸಿರಿಯವರ ಮಾತನಾಡಿ, ಶಿರಹಟ್ಟಿ ತಾಲೂಕಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಆ ತರಗತಿಯ ಮಕ್ಕಳಿಗಾಗಿ ಯೋಗ ಧ್ಯಾನ ಒಳ್ಳೆಯ ಅಭ್ಯಾಸ ರೂಢಿ ಮಾಡಿಕೊಳ್ಳುವ ಬಗ್ಗೆ ತಿಳಿಸಿದರು.

ಶಿಕ್ಷಕರು ಕೇವಲ ಮಾಹಿತಿ ನೀಡುವ ಬದಲು ವಾಸ್ತವಿಕತೆ ಅರ್ಥೈಸಿಕೊಳ್ಳುವ, ವಿಶ್ಲೇಷಿಸುವ ಮತ್ತು ತಾರ್ಕಿಕ ಚಿಂತನೆ ಮಾಡುವುದನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು. ಅಂತರ್ಜಾಲದಲ್ಲಿ ವಿದ್ಯಾರ್ಥಿಗಳು ತಮಗೆ ಬೇಕಾದ ಮಾಹಿತಿ ಪಡೆಯುತ್ತಾರೆ. ಪಠ್ಯಕ್ರಮ ಬೋಧಿಸುವಾಗ ಜಗತ್ತಿನಲ್ಲಿ ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳ ಜತೆಗೆ ಸಂಬಂಧ ಕಲ್ಪಿಸಿಕೊಡಬೇಕು. ಅವುಗಳ ಆಗುಹೋಗುಗಳ ಬಗ್ಗೆ ವಿಶ್ಲೇಷಣೆ ನಡೆಸಿ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಮಾಧ್ಯಮಿಕ ಶಾಲಾ ನೌಕರ ಸಂಘದ ಜಿಲ್ಲಾಧ್ಯಕ್ಷ ಎಂ.ಕೆ.ಲಮಾಣಿ, ರಾಜ್ಯ ನೌಕರ ಸಂಘದ ನಿರ್ದೇಶಕ ಕಾಶಪ್ಪ ಸ್ವಾಮಿ, ಕ್ಷೇತ್ರ ಸಮನ್ವಯ ಅಧಿಕಾರಿ ಬಿ.ಎಸ್.ಭಜಂತ್ರಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ ಅರ್ಕಸಾಲಿ, ಉಮೇಶ ಹುಚ್ಚಯ್ಯನ ಮಠ, ಬಿಆರ್‌ಪಿ ವಾಸು ದೀಪಾಲಿ, ಸುನಿಲ್ ಲಮಾಣಿ, ಕೆ.ವಿ.ಗೌಡರ, ಮಾಗಡಿ ಸಿಆರ್‌ಪಿ ಕಂಬಳಿ, ಕಡಕೋಳ ಸಿಆರ್‌ಪಿ ಹಳ್ಳದ, ಶಿರಹಟ್ಟಿ ಸಿಆರ್‌ಪಿ ಎನ್.ಎನ್.ಸಾವಿರಕುರಿ ಹಾಜರಿದ್ದರು.