ದೊಡ್ಡಬಳ್ಳಾಪುರ: ಕಲಿಕೆಯಲ್ಲಿ ಹಿಂದುಳಿದಿರುವ ಮತ್ತು ನಿಧಾನಗತಿಯ ಕಲಿಕಾ ಮಕ್ಕಳಿಗೆ ಶಿಕ್ಷಕರು ಹೆಚ್ಚಿನ ಗಮನ ಹರಿಸುವ ಮೂಲಕ ಮುಂಬರುವ ಎಸ್‍ಎಸ್‍ಎಲ್‍ಸಿ ಫಲಿತಾಂಶ ಶೇ.100ರಷ್ಟು ತಲುಪಲು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದರು.

ದೊಡ್ಡಬಳ್ಳಾಪುರ: ಕಲಿಕೆಯಲ್ಲಿ ಹಿಂದುಳಿದಿರುವ ಮತ್ತು ನಿಧಾನಗತಿಯ ಕಲಿಕಾ ಮಕ್ಕಳಿಗೆ ಶಿಕ್ಷಕರು ಹೆಚ್ಚಿನ ಗಮನ ಹರಿಸುವ ಮೂಲಕ ಮುಂಬರುವ ಎಸ್‍ಎಸ್‍ಎಲ್‍ಸಿ ಫಲಿತಾಂಶ ಶೇ.100ರಷ್ಟು ತಲುಪಲು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದರು.

ಬೆಂ.ಗ್ರಾ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಶುಕ್ರವಾರ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಸ್‍ಎಸ್‍ಎಲ್‍ಸಿ ಪರೀಕ್ಷಾ ನಿಯಮಾವಳಿ ಬದಲಾವಣೆಯಿಂದ ಈಗಾಗಲೇ ನೀಲನಕ್ಷೆ ಹಾಗೂ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆಯಿಂದ ಮಕ್ಕಳ ಉತ್ತೀರ್ಣಕ್ಕೆ ಸಹಾಯಕವಾಗಬಹುದು. ಎಲ್ಲ ವಿಷಯ ಶಿಕ್ಷಕರು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ಪರೀಕ್ಷಾ ಭಯ ಹೋಗಲಾಡಿಸಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ತರಲು ಶ್ರಮಿಸಬೇಕು ಎಂದು ಹೇಳಿದರು.

ಶಿಕ್ಷಕರ ಮಾರ್ಗದರ್ಶನ ಜೊತೆಗೆ ನೀವು ನೀಡುವ ಸ್ಪೂರ್ತಿದಾಯಕ ವಾತಾವರಣವು ಉನ್ನತ ಫಲಿತಾಂಶಕ್ಕೆ ಕಾರಣವಾಗುತ್ತದೆ. ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಅವರನ್ನು ಶಾಲೆಗೆ ಕರೆ ತನ್ನಿ ಹಾಗೂ ವಿದ್ಯಾರ್ಥಿಗಳ ಚಲನವಲನಗಳ ಮೇಲೆ ಗಮನವಿರಬೇಕು ಎಂದರು.

ಮಕ್ಕಳಿಗೆ ಹಣ ನೀಡಿದರೆ ಅವರ ಅವಶ್ಯಕತೆಗಳನ್ನು ಪೂರೈಸಿದರೆ ಯಶಸ್ವಿಯಾಗಲಾರರು. ಅವರ ಹಸಿವಿಗೆ ಅವರೇ ದುಡಿದು ತಿನ್ನುವಂತಹ ಸಾಮರ್ಥ್ಯ ಬೆಳೆಸಿಕೊಳ್ಳುವಂತೆ ಮಾಡಬೇಕು. ಶಾಲೆಯ ಅಸಾಧಾರಣ ಸಹಪಠ್ಯ ಚಟುವಟಿಕೆಗಳು ಶಿಸ್ತು ಕ್ರೀಡಾಶೀಲತೆ, ಮೌಲ್ಯಾಧಾರಿತ ಶಿಕ್ಷಣ ಮತ್ತು ಆತ್ಮವಿಶ್ವಾಸದ ಕಲಿಕೆಯೊಂದಿಗೆ ವಿಶೇಷ ಮಕ್ಕಳನ್ನು ಸುಧಾರಿಸುವ ಶಾಲೆಯ ಶಿಕ್ಷಕರ ವರ್ಗದ ಕಾರ್ಯ ಮೆಚ್ಚುವಂತದ್ದು ಎಂದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಶಿಕ್ಷಕರಿಗೆ ವಿಶೇಷ ಉಪನ್ಯಾಸ ನೀಡಲಾಯಿತು.

ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಬೈಲಾಂಜಿನಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಲಲಿತಮ್ಮ, ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.

ಫೋಟೋ-

19ಕೆಡಿಬಿಪಿ3- ಬೆಂ.ಗ್ರಾ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಹೆಚ್ಚಳ ಕುರಿತು ಕಾರ್ಯಾಗಾರ ನಡೆಯಿತು.